ಬಳ್ಳಾರಿ: ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಉಪನ್ಯಾಸಕಿಯೊಬ್ಬರಿಗೆ ಕಾಲೇಜಿನ ಪ್ರಾಚಾರ್ಯರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ, ಉಪನ್ಯಾಸಕಿಯು ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿವೃತ್ತಿಯ ಅಂಚಿನಲ್ಲಿರುವ ಪ್ರಾಚಾರ್ಯರು, ಸದರಿ ಉಪನ್ಯಾಸಕಿಯ ಜೊತೆ ಅಸಭ್ಯವಾಗಿ ನಡೆದು ಕೊಂಡಿದ್ದಾರೆಂದೂ, ಆಗಾಗ್ಗೆ ಅನುಚಿತವಾಗಿ ವರ್ತಿಸುತ್ತಿದ್ದರೆಂದೂ ಹೇಳಲಾಗಿದೆ.
ನಗರದ ಎಎಸ್‌ಎಂ ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿದ್ದ ಶರಣಪ್ಪ ಅವರ ವಿರುದ್ಧ ಅದೇ ಕಾಲೇಕಿನ ಉಪನ್ಯಾಸಕಿಯೋರ್ವರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈಗ್ಗೆ ಕೆಲ ತಿಂಗಳಿನಿಂದಲೂ ಪ್ರಾಚಾರ್ಯರು ಸದರಿ ಮಹಿಳಾ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.
ಸದರಿ ಉಪನ್ಯಾಸಕಿಯನ್ನು ವಿನಾ ಕಾರಣ ಮಾತನಾಡಿಸುವುದು, ಕೈಗಳನ್ನು ಮುಟ್ಟುವುದು, ನಿನ್ನ ಪತಿ ಮನೆಯ ಲ್ಲಿಲ್ಲದಾಗ ಹೇಳು ಮನೆಗೆ ಬರುತ್ತೇನೆ ಇತ್ಯಾದಿ, ಇತ್ಯಾದಿಯಾಗಿ ಹೇಳುತ್ತಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಗೆ ಮತ್ತು ವೀ.ವಿ.ಸಂಘದ ಪ್ರಮುಖರಿಗೆ ವಿಷಯ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲವೆಂದು ಹೇಳಲಾಗಿದೆ. ಮಹಿಳೆಯು ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕೇಸ್ ದಾಖಲಾಗಿದೆ: ಈ ಬಗ್ಗೆ ಉಪನ್ಯಾಸಕಿಯು ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಅವರು ತನಿಖೆ ನಡೆಸಿದ್ದಾರೆ. ಸಮಗ್ರ ವಿಚಾರಣೆ ನಡೆಸಲಾಗುತ್ತದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೇಳಿದ್ದಾರೆ.
ಸದರಿ ಕಾಲೇಜಿನ ಪ್ರಾಚಾರ್ಯರಿಂದ ಆಡಳಿತ ಮಂಡಳಿಯವರು ವಿವರಣೆ ಕೇಳಿದ್ದು, ರಜೆಯ ಮೇಲೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.