‘ಕೋಕನಟ್ ಕೋಡ್‌ವರ್ಡ್ ‘ಬಳಸಿ ಮೂಡಾ ಅಕ್ರಮ: ಇಡಿ ತನಿಖೆಯಿಂದ ಪತ್ತೆ

Kannada Nadu
‘ಕೋಕನಟ್ ಕೋಡ್‌ವರ್ಡ್ ‘ಬಳಸಿ ಮೂಡಾ ಅಕ್ರಮ: ಇಡಿ ತನಿಖೆಯಿಂದ ಪತ್ತೆ

ಬೆಂಗಳೂರು:  ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮಕ್ಕೆ ಸಂಬಂಧಿಸಿದಂತೆ ೩೦೦ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಬೆನ್ನಲ್ಲೇ ಕೋಕನಟ್ ಕೋಡ್‌ವರ್ಡ್ ಬಳಸಿ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇಡಿ ಅಧಿಕಾರಿಗಳು ಬಿಲ್ಡರ್ ಜಯರಾಮ್ ಮನೆ ಮೇಲೆ ದಾಳಿ ನಡೆಸಿದ್ದರು. ಸತತ ಮೂರು ದಿನ ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ ಈತನ ಮನೆಯಲ್ಲಿ ಏನಿತ್ತು ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿತ್ತು. ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಮುಡಾ ಅಕ್ರಮದ ಕಿಂಗ್‌ಪಿನ್ ಜಯರಾಮ್ ಆಗಿದ್ದಾನೆ ಎನ್ನಲಾಗುತ್ತಿದೆ.

ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇನಾಮಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಯರಾಮ್ ಮನೆ ಹಾಗೂ ಕಚೇರಿಯಲ್ಲಿ ಇಡಿ ಅಧಿಕಾರಿಗಳು ನಿರಂತರ ೭೦ ಗಂಟೆಗಳ ಕಾಲ ದಾಳಿ ಮಾಡಿದ್ದರು. ಜಯರಾಮ್ ಮನೆಯಲ್ಲೆ ಬಹುತೇಕ ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಸಿಕ್ಕಿದೆ. ಈ ಜಯರಾಮ್ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘ ಸ್ಥಾಪನೆ ಮಾಡಿದ್ದ. ಈ ಸಂಘದಲ್ಲಿ ಮುಡಾ ಮಾಜಿ ಆಯುಕ್ತ ದಿನೇಶ್ ಕುಟುಂಬಸ್ಥರು ನಿರ್ದೇಶಕರಾಗಿದ್ದರು.

ಬಹುತೇಕ ಬೇನಾಮಿ ವ್ಯವಹಾರಗಳನ್ನು ಈ ಸಹಕಾರ ಸಂಘದ ಹೆಸರಿನಲ್ಲಿ ಮಾಡಲಾಗಿದೆ.ಜಯರಾಮ್ ಮನೆಯಲ್ಲಿ ದಾಖಲೆಗಳನ್ನು ಶೋಧಿಸುತ್ತಿದ್ದ ಇಡಿಗೆ ವಾಟ್ಸಪ್ ಚಾಟ್ ಪರಿಶೀಲಿಸಿದ್ದಾರೆ. ಈ ವೇಳೆ ೧ ಕೋಕನಟ್ ಕಳುಹಿಸಿದ್ದೇನೆ. ೫೦ ಕೋಕನಟ್ ಕಳುಹಿಸಿದ್ದ ಮೆಸೇಜ್‌ಗಳು ಅಧಿಕಾರಿಗಳ ಗಮನ ಸೆಳೆದಿದೆ.ರಿಯಲ್ ಎಸ್ಟೇಟ್ ಕೆಲಸ ಮಾಡುವ ಈತ ಕೋಕನಟ್ ಯಾಕೆ ಕಳುಹಿಸುತ್ತಾನೆ ಎಂದು ಅನುಮಾನ ಬಂದು ಜಯರಾಮ್‌ನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಕೋಕನಟ್ ಸತ್ಯ ಬೆಳಕಿಗೆ ಬಂದಿದೆ.

ಮುಡಾ ಹಣಕಾಸಿನ ಅಕ್ರಮಕ್ಕೆ ಕೋಕನಟ್ ಎಂಬ ಕೋಡ್‌ವರ್ಡ್ ಇಡಲಾಗಿತ್ತು. ೧ ಕೋಕನಟ್ ಅಂದರೆ ೧ ಲಕ್ಷ ರೂ., ೫೦ ಕೋಕನಟ್ ಅಂದರೆ ೫೦ ಲಕ್ಷ ರೂ., ೧೦೦ ಕೋಕನಟ್ ಅಂದರೆ ೧ ಕೋಟಿ ರೂ. ಕಳುಹಿಸಲಾಗಿದೆ ಎಂದು ಜಯರಾಮ್ ಮೆಸೇಜ್ ಮಾಡುತ್ತಿದ್ದ.ಜಯರಾಮ್ ತನ್ನ ಡೈರಿಯಲ್ಲಿ ಮುಡಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನು ಬರೆದುಕೊಂಡಿದ್ದ. ಇಡಿಯ ಪ್ರಾಥಮಿಕ ವಿಚಾರಣೆಯಲ್ಲೇ ಹಲವರ ಹೆಸರನ್ನು ಜಯರಾಮ್ ಬಾಯಿಬಿಟ್ಟಿದ್ದಾನೆ. ಜಯರಾಮ್ ಮನೆ ಮೇಲೆ ದಾಳಿ ಆಗುತ್ತಿದ್ದಂತೆ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಪರಾರಿಯಾಗಿದ್ದರು.

ಹಲವು ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಕೋಕನಟ್ ಹೆಸರಿನಲ್ಲಿ ಜಯರಾಮ್ ಹಣ ಕಳುಹಿಸಿದ್ದ. ೧೫ ವರ್ಷದ ಹಿಂದೆ ಗಾರೆ ಕೆಲಸಕ್ಕೆ ಬಂದಿದ್ದ ಜಯರಾಮ್ ಬೇನಾಮಿಯಿಂದಲೇ ಕೋಟ್ಯಾಧೀಶ್ವರನಾಗಿದ್ದಾನೆ ಎನ್ನಲಾಗುತ್ತಿದೆ. ದಿನೇಶ್ ಕುಮಾರ್ ಗೆ ಬಹಳ ಪರಮಾಪ್ತನಾಗಿದ್ದ ಜಯರಾಮ್ ೫೦-೫೦ ಅನುಪಾತದ ಸೈಟ್ ಹಂಚಿಕೆಯಲ್ಲಿ ನಂ ೧ ಫಲಾನುಭವಿಯಾಗಿದ್ದಾನೆ. ಕೇವಲ ೫೦-೫೦ ಸೈಟ್‌ನಿಂದ ಮಾತ್ರವಲ್ಲದೇ ಬೇನಾಮಿ ಹಣದಿಂದಲೂ ಜಯರಾಮ್ ಈಗ ಶ್ರೀಮಂತನಾಗಿದ್ದಾನೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";