ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ಸಿದ್ಧಾಂತ ಇದೆ. ಅದಕ್ಕೆ ನಾನು ಬದ್ಧನಾಗಿದ್ದೇನೆ. ಒಂದು ವೇಳೆ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಮಂತ್ರಿಗಿರಿಯನ್ನು ಬಿಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಇಂದಿಲ್ಲಿ ಹೇಳಿದರು.
ನಾನು ಕಳೆದ ೩ ದಿನಗಳಿಂದ ದೆಹಲಿಯಲ್ಲೇ ಇದ್ದೆ. ೨೦೨೩ರ ಮೇ ೧೮ ರಂದು ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ್ದ ಪ್ರೆಸ್‌ನೋಟ್‌ನಲ್ಲಿ ಮುಂದಿನ ಲೋಕಸಭಾ ಚುನಾವಣೆ ವರೆಗೆ ಕೆಪಿಸಿಸಿ ಅಧ್ಯಕ್ಷರ ಮುಂದುವರಿಕೆ ಎಂಬುದನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ವರಿಷ್ಠರ ಭೇಟಿಯಾದ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದೇನೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೈಕಮಾಂಡ್ ಬಿಡುಗಡೆ ಮಾಡಿರುವ ಪ್ರೆಸ್‌ನೋಟ್‌ನಲ್ಲಿ ಲೋಕಸಭಾ ಚುನಾವಣೆ ವರೆಗೆ ಕೆಪಿಸಿಸಿ ಅಧ್ಯಕ್ಷರ ಮುಂದುವರಿಕೆ ಎಂಬ ಬಗ್ಗೆ ಇರುವ ಉಲ್ಲೇಖದ ಬಗ್ಗೆ ಸ್ಪಷ್ಟನೆ ಕೇಳಿದ್ದೇನೆ. ಈಗ ಮುಗಿದು ಹೋಗಿರುವ ಲೋಕಸಭಾ ಚುನಾವಣೆಯೇ ಅಥವಾ ಮುಂದಿನ ಲೋಕಸಭಾ ಚುನಾವಣೆಯೇ ಎಂಬುದನ್ನು ತಿಳಿಸಿ ಎಂದು ವರಿಷ್ಠರಿಗೆ ಕೇಳಿದ್ದೇನೆ ಎಂದರು.
ನಮ್ಮ ಪಕ್ಷದ ಒಬ್ಬರಿಗೆ ಒಂದೇ ಹುದ್ದೆ ಎಂಬ ಸಿದ್ಧಾಂತ ಇರುವುದರಿಂದ ಈ ಸಿದ್ದಾಂತವನ್ನು ಪಕ್ಷದ ಎಲ್ಲರೂ ಪಾಲಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.
ನಾನೆಲ್ಲೂ ನನಗೆ ಎರಡು ಹುದ್ದೆ ಕೊಡಿ ಎಂದು ಪಕ್ಷದ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿಲ್ಲ. ಸತೀಶ್ ಜಾರಕಿ ಹೊಳಿಯವರು ಇಂತಹ ಬೇಡಿಕೆ ಇಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.
ಮುಖ್ಯಮಂತ್ರಿ ಹುದ್ದೆ ಎರಡೂವರೆ ವರ್ಷಗಳಿಗೆ ಒಪ್ಪಂದ ಆಗಿದೆ ಎಂಬ ಬಗ್ಗೆ ಎಲ್ಲೂ ಈ ಪ್ರೆಸ್‌ನೋಟ್‌ನಲ್ಲಿ ಉಲ್ಲೇಖವಾಗಿಲ್ಲ. ಅಂತಹ ಒಪ್ಪಂದದ ಬಗ್ಗೆ ನನಗೂ ಗೊತ್ತಿಲ್ಲ. ೫ ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಈಗಾಗಲೇ ನಮ್ಮ ಪಕ್ಷದ ಹಿರಿಯ ಸಚಿವರಾದ ಡಾ. ಜಿ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್ ಅವರು ಸಹ ಅದನ್ನೇ ಹೇಳಿದ್ದಾರೆ. ಹಾಗಾಗಿ ನಾನು ಸಹ ಅವರು ಮಾತನ್ನು ನಂಬಿದ್ದೇನೆ ಎಂದು ಹೇಳಿದರು.
ಒಬ್ಬರಿಗೆ ಒಂದು ಹುದ್ದೆ: ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಮಂತ್ರಿಗಿರಿಯನ್ನು ಬಿಡುತ್ತೇನೆ ಎಂದ ಸಹಕಾರ ಸಚಿವ ಕೆ.ಎನ್. ರಾಜಣ್ಣ
