ಬೆಂಗಳೂರು:ಮುಡಾ ಪ್ರಕರಣದಲ್ಲಿ ರಾಜೀನಾಮೆ ನೀಡಬಾರದು ಎನ್ನುವ ಹೈಕಮಾಂಡ್ ಸಲಹೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣಿದಿದ್ದಾರೆ. ಎಲ್ಲೆಡೆಯಿಂದ ದೊರೆಯತ್ತಿರುವ ವ್ಯಾಪಕ ಬೆಂಬಲದಿಂದ ಸಿದ್ದರಾಮಯ್ಯ ಇದೀಗ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹೈಕೋರ್ಟ್ ತೀರ್ಪು ಹೊರ ಬರುತ್ತಿದ್ದಂತೆ ಒಂದು ಹಂತದಲ್ಲಿ ಸಿದ್ದರಾಮಯ್ಯ ಕಳಾಹೀನರಾದರು. ಬಳಿಕ ದೆಹಲಿ ಹೈಕಮಾಂಡ್ ನಿಂದ ಬಂದ ಕರೆ ಹೋರಾಟ ನಡೆಸಲು ಸ್ಫೂರ್ತಿ ನೀಡಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಬೇಕು. ನಿಮ್ಮ ಜೊತೆ ನಾವಿದ್ದೇವೆ ಎಂದು ಏಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿ ಜೊತೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿ ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸಹ ಸಿದ್ದರಾಮಯ್ಯ ಪರವಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸಂಗ ಉದ್ಭವಿಸುವುದಿಲ್ಲ ಎನ್ನಲಾಗಿದೆ.
ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕಾನೂನು ತಜ್ಞರು ಹಾಗೂ ತಮ್ಮ ಆಪ್ತರ ಜೊತೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ, ಕೇಂದ್ರ ಬಿಜೆಪಿ ನನ್ನನ್ನು ಕುಣಿಕೆಗೆ ಸಿಲುಕಿಸಿದೆ ಎಂದು ಕಿಡಿ ಕಾರಿದ್ದಾರೆ. ವಿಭಾಗೀಯ ಪೀಠದ ಮುಂದೆ ಏಕದಸ್ಯ ಪೀಠದ ತೀರ್ಪಿಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈಗಾಗಲೇ ತಮ್ಮ ವಿರುದ್ಧ ಅರ್ಜಿದಾರರು ವಿಭಾಗೀಯ ಪೀಠದ ಮುಂದೆ ಕೇವಿಯಟ್ ಸಲ್ಲಿಸಿದ್ದು, ಇದರಿಂದ ವಿಚಾರಣೆ ಮತ್ತು ತೀರ್ಪು ವಿಳಂಬವಾಗಬಹುದು. ಇದಕ್ಕೂ ಮುನ್ನವೇ ಮುಡಾ ಹಗರಣದ ವಿಚಾರಣೆ ನಡೆಯುತ್ತಿರುವ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ದೂರುದಾರರು ಹೈಕೋರ್ಟ್ ತೀರ್ಪಿನ ಪ್ರತಿ ಸಲ್ಲಿಸಿ, ಹಗರಣ ತನಿಖೆಗೆ ಕೋರಲಿದ್ದಾರೆ.
ಹೈಕೋರ್ಟ್ ಪೀಠವೇ, ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ನಿರ್ಧಾರ ಎತ್ತಿ ಹಿಡಿದಿರುವುದರಿಂದ ಕೆಳ ನ್ಯಾಯಾಲಯ ಕಾಯ್ದಿರಿಸಿರುವ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ.
ಈ ಎಲ್ಲಾ ವಿಷಯಗಳು ಸಭೆಯಲ್ಲಿ ಚರ್ಚೆಯಾಗಿದೆ, ನನಗೆ ಪಕ್ಷದ ವರಿಷ್ಠರು, ಸಚಿವರು, ಶಾಸಕರ ಮತ್ತು ನಾಡಿನ ಜನರ ಬೆಂಬಲ ಇದ್ದರೂ ಅಧಿಕಾರ ತ್ಯಜಿಸುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹೋರಾಟ ಮುಂದುವರೆಸೋಣ, ಆದರೆ, ರಾಜ್ಯಪಾಲರು ತಮ್ಮ ವಿರುದ್ಧ ಇನ್ನೂ ಕೆಲವು ಪ್ರಕರಣಗಳ ಬಗ್ಗೆ ತನಿಖೆಗೆ ಆದೇಶ ಮಾಡುವುದನ್ನೂ ತಳ್ಳಿಹಾಕುವಂತಿಲ್ಲ. ಕಳೆದ 15 ತಿಂಗಳ ಆಡಳಿತದಲ್ಲಿ ಜನಪರ ಕೆಲಸಗಳನ್ನು ಮಾಡಿದ್ದರೂ, ಮಾಡದ ತಪ್ಪಿಗೆ ಗುರಿಯಾಗಬೇಕಾಗಿದೆ. ದಿನನಿತ್ಯ ಇದರ ವಿಷಯವೇ ಕೇಳಿ ನನಗೂ ಬೇಸರವಾಗಿದೆ, ದಸರಾ ನಂತರ ಸ್ಥಾನ ತ್ಯಜಿಸುವ ಬಗ್ಗೆ ನಿರ್ಧಾರ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.