ಬೆಂಗಳೂರು : ತಮ್ಮ ವಿಡಿಯೋ ತಿರುಚಿ ಸುಳ್ಳು ಹರಿಯಬಿಟ್ಟಿರುವ ಮಾಜಿ ಶಾಸಕ ಸಿಟಿ ರವಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಟಿಪ್ಪು ಸುಲ್ತಾನ್ ಕೊಂದ ಉರಿಗೌಡ-ನಂಜೇಗೌಡ ಸಂಸ್ಕಾರದ ಸುಳ್ಳುಕೋರರ ಕೃತ್ಯ ಎಂದು ಗದಾಪ್ರಹಾರ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಮಾಜಿ ಶಾಸಕರಾದ @ಸಿಟಿ ರವಿ ಅವರೇ, ನೀವು ಮತ್ತು ನಿಮ್ಮ ಪಕ್ಷ ಇಂಥಾ ಅಗ್ಗದ ಚೇಷ್ಠೆಗಳನ್ನು ಮಾಡಿದ್ದರ ಫಲವೇ ಇಂದು ಜನ ನಿಮ್ಮನ್ನು ಮನೆಯಲ್ಲಿ ಮತ್ತು ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಪರದಾಡಬೇಕಾದ ದುಸ್ಥಿತಿಯಲ್ಲಿ ನಿಮ್ಮ ಪಕ್ಷ ಇದೆ. ಆದರೂ ನಿಮಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ” ಎಂದು ಕುಟುಕಿದ್ದಾರೆ. ನರೇಂದ್ರ ಮೋದಿ ಅವರು ಮೌಲ್ಯಾಧಾರಿತ ರಾಜಕಾರಣ ಮತ್ತು ಸತ್ಯದ ಪರವಾಗಿದ್ದರೆ ಈ ಕೂಡಲೇ ಫೇಕ್ ನ್ಯೂಸ್ ಪೆಡ್ಲರ್ ಗಳಾದ ಸಿ.ಟಿ ರವಿ ಮತ್ತು ಅಶ್ವತ್ಥ ನಾರಾಯಣ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದಿದ್ದಾರೆ.
ಮುಖ್ಯಮಂತ್ರಿಗಳು ಸದನದಲ್ಲಿ ಮಾತಾಡಿದ ಒರಿಜನಲ್ ವಿಡಿಯೊ ಇದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಏನು ಹೇಳಿದ್ದರು ಎನ್ನುವುದನ್ನು ಸದನದಲ್ಲಿ ವಿವರಿಸಿದ್ದರು. ಈ ವಿಡಿಯೊವನ್ನು ಕತ್ತರಿಸಿ-ತಿರುಚಿ ಯಡಿಯೂರಪ್ಪ ಅವರು ಆಡಿದ ಮಾತನ್ನೇ ಸಿದ್ದರಾಮಯ್ಯ ಅವರ ಮಾತು ಎನ್ನುವಂತೆ ಬಿಜೆಪಿ-ಜೆಡಿಎಸ್ ನವರು ಪ್ರಚಾರ ಮಾಡುತ್ತಿದ್ದಾರೆ.
ನಾವು ನುಡಿದಂತೆ ನಡೆಯುವವರು, ಹಿಂದೆ 2013 – 18 ರ ಐದು ವರ್ಷಗಳ ಅವಧಿಯಲ್ಲಿ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು, ಇದರ ಜೊತೆಗೆ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಸೇರಿದಂತೆ 30ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಭರವಸೆ ನೀಡದ ಹೊರತಾಗಿಯೂ ಜಾರಿಗೆ ತಂದು ಬದ್ಧತೆ ಪ್ರಸರ್ಶಿಸಿದ್ದೆವು. 2018ರಲ್ಲಿ ಜನತೆಗೆ ನೀಡಿದ್ದ ಶೇ.90 ಭರವಸೆಗಳನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈಡೇರಿಸದೆ ಜನ ದ್ರೋಹ ಎಸಗಿತ್ತು.
ನಮ್ಮ ಪಕ್ಷದ ನಾಯಕರಾದ ಉಗ್ರಪ್ಪನವರು 2009 ರಲ್ಲಿ ಸಾಲ ಮನ್ನಾ ಮಾಡುವಂತೆ ಸದನದಲ್ಲಿ ಒತ್ತಾಯಿಸಿದ್ದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಏನು ಉತ್ತರ ಕೊಟ್ಟಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಿ. ರೈತರ ಸಾಲ ಮನ್ನಾ ಮಾಡಲು ನಾವೇನು ನೋಟು ಪ್ರಿಟಿಂಗ್ ಮೆಷಿನ್ ಇಟ್ಟಿದ್ದೇವೆಯೇ? ಎಂದು ಅವರು ಹೇಳಿಲ್ಲವೇ?. ಈಗ ಮೊನ್ನೆ ವಿಧಾನ ಸಭೆಯಲ್ಲಿ ನಾನು ಹೇಳಿದ ವೀಡಿಯೋವನ್ನು ತಪ್ಪು ಅರ್ಥ ಬರುವಂತೆ ನಿಮಗೆ ಬೇಕಾದಷ್ಟೆ ಕಟ್ ಮಾಡಿ ಹಾಕಿ ವಿಕೃತ ಸಂತೋಷ ಪಡುತ್ತಿದ್ದೀರಿ ಎಂದಿದ್ದಾರೆ.
ಗೌರವಾನ್ವಿತ ಮಾಜಿ ಶಾಸಕರಾದ @CTRavi_BJP ಅವರೇ, ನೀವು ಮತ್ತು ನಿಮ್ಮ ಪಕ್ಷ ಇಂಥಾ ಅಗ್ಗದ ಚೇಷ್ಠೆಗಳನ್ನು ಮಾಡಿದ್ದರ ಫಲವೇ ಇಂದು ಜನ ನಿಮ್ಮನ್ನು ಮನೆಯಲ್ಲಿ ಮತ್ತು ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಪರದಾಡಬೇಕಾದ ದುಸ್ಥಿತಿಯಲ್ಲಿ ನಿಮ್ಮ ಪಕ್ಷ ಇದೆ. ಆದರೂ ನಿಮಗೆ ಬುದ್ದಿ… pic.twitter.com/UyTr98k5ja
— Siddaramaiah (@siddaramaiah) December 17, 2023
ಆದರೆ ಅಶ್ವತ್ಥ್ ನಾರಾಯಣ ಕೂಡ ಇದೇ ರೀತಿ ವೀಡಿಯೋ ಶೇರ್ ಮಾಡಿದ್ದು ನೋಡಿ ಆಶ್ಚರ್ಯವಾಗುತ್ತಿದೆ. ಹಾಲಿ ಶಾಸಕರಾಗಿರುವವರು ಸದನದಲ್ಲಿ ಕೂತು ಅಭಿವೃದ್ಧಿ ಕಾರ್ಯಗಳ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು, ಆದರೆ ಅವರ ಗಮನವೆಲ್ಲ ವಿರೋಧ ಪಕ್ಷದ ನಾಯಕನ ಕುರ್ಚಿಯ ಮೇಲೆ ಇದೆಯೆಂದು ಕಾಣುತ್ತದೆ. ನೀವು ಶೇರ್ ಮಾಡಿರುವ ತಿರುಚಿದ ವಿಡಿಯೋಗಳನ್ನು ನಂಬುವಷ್ಟು ರಾಜ್ಯದ ಜನ ಮೂರ್ಖರಲ್ಲ. ನಿಮ್ಮ ಗಮನಕ್ಕೆ ಇರಲಿ ಎಂದು ಪೂರ್ತಿ ವಿಡಿಯೋವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಬಿಜೆಪಿ ನಾಯಕರೇ, ನಿಮ್ಮ ಮಾನ ಮರ್ಯಾದೆ ಬಗ್ಗೆ ನಿಮಗೆ ಕನಿಷ್ಠ ಕಾಳಜಿ ಇದ್ದರೆ ನೀವು ಶೇರ್ ಮಾಡಿರುವ ವೀಡಿಯೋ ಡಿಲೀಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ. ಬಿಜೆಪಿ ನಾಯಕರ ಇಂತಹ ನಡವಳಿಕೆಗಳು ಬಿಜೆಪಿ ಎಂದರೆ “ಬೊಗಳೆ ಜನತಾ ಪಾರ್ಟಿ” ಎಂಬ ಕುಖ್ಯಾತಿಯನ್ನು ದೃಡೀಕರಿಸುವಂತಿದೆ. ಫೇಕ್ ನ್ಯೂಸ್ ಗಳ ಸೃಷ್ಟಿ ಮತ್ತು ಪ್ರಸಾರವನ್ನೇ ನಂಬಿ ರಾಜಕಾರಣ ಮಾಡುವ ಬಿಜೆಪಿಯವರಿಗೆ ನನ್ನ ವಚನ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆಯೇ ಇಲ್ಲ.