ಬೆಂಗಳೂರು : ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಬರುವ ಮುನ್ನವೇ ಸೋಲಿನ ಮುನ್ಸೂಚನೆ ಸಿಕ್ಕಿದೆ. ಈ ಭಾವನೆಯಿಂದಲೇ ಸಿಎಂ ಸಿದ್ದರಾಮಯ್ಯ ಅವರು ಹಸಿ ಸುಳ್ಳು ಹೇಳಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಹೇಳಿರುವ ನೂರು ಸುಳ್ಳು ಗಳಲ್ಲಿ ಇದು 101 ನೇ ಸುಳ್ಳು ಎಂದು ಮಾಜಿ ಸಚಿವ, ಶಾಸಕ ವಿ.ಸುನೀಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ನಡುವಿನ ಅಸಮಾಧಾನ ಮುಚ್ಚಿಟ್ಟುಕೊಳ್ಳಲು 50 ಕೋಟಿ ರೂ. ಆಫರ್ ಬಗ್ಗೆ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಿಎಂ ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು, ಅನುದಾನ ಕೊಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಈ ಮೂಲಕ ತಮ್ಮವರನ್ನು ಖರೀದಿ ಮಾಡುವ ಪ್ರಯತ್ನಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಸಿಎಂ ಅವರು ಬಿಜೆಪಿ ಮೇಲೆ ಟೀಕೆ ಮಾಡಿ ಅದರ ಪರಿಣಾಮ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಡಾ.ಜಿ. ಪರಮೇಶ್ವರ್, ಹೈಕಮಾಂಡ್ ಮೇಲೆ ಆಗುವಂತೆ ನೋಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಈಥರದ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದರು.
ಕಾಂಗ್ರೆಸ್ ನಲ್ಲಿ ಆಂತರಿಕ ಸಭೆಗಳು, ಕಚ್ಚಾಟಗಳಿಂದ ಅವರ ಕುರ್ಚಿ ಗೆ ಆಪತ್ತು ಬಂದಿದೆ. ಇದರಿಂದ ತಪ್ಪಿಸಿಕೊಳ್ಳುವ ಹರಸಾಹಸ ಅವರು ಮಾಡ್ತಿದ್ದಾರೆ. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ನೀಡಿರುವ ಗಡುವು ಮುಗಿಯುತ್ತಾ ಬಂದಿದೆ. ಇದೆಲ್ಲ ನೋಡುತ್ತಿದ್ದರೆ ಬೆಳಗಾವಿ ಅಧಿವೇಶನ ಹೊಸ ಸಿಎಂ ಅವರಿಂದ ಶುರುವಾಗಬಹುದೆಂದು ಅನಿಸುತ್ತದೆ ಎಂದು ಹೇಳಿದರು.
ನಾವು ಐದು ವರ್ಷ ಪ್ರತಿಪಕ್ಷ ಸ್ಥಾನದಲ್ಲೇ ಇರುತ್ತೇವೆ. ನಂತರ ನಾವು ಚುನಾವಣೆ ಎದುರಿಸುತ್ತೇವೆ.
ನಾವು ಸರ್ಕಾರ ರಚನೆ ಪ್ರಯತ್ನ ಮಾಡುತ್ತಿಲ್ಲ. ಐದೂ ವರ್ಷ ಪ್ರತಿಪಕ್ಷದ ಸ್ಥಾನದಲ್ಲೇ ಇರುತ್ತೇವೆ. ನೀವು ಐದು ವರ್ಷ ಅಧಿಕಾರದಲ್ಲಿ ಇರಲು ನಮ್ಮನ್ನ ಯಾಕೆ ಬಳಸುತ್ತಿದ್ದಿರಿ ಎಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸಂಪೂರ್ಣ ನಿಂತುಹೋಗಿವೆ ಎಂದರು.
ಮುಸ್ಲಿಮರಿಗೆ ಗುತ್ತಿಗೆಯಲ್ಲಿ 4% ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಆಪ್ತ ನಜೀರ್ ಅವರು ಬರೆದಿರುವ ಪತ್ರ ಸುಳ್ಳಾ?. ನೀವು ಅದಕ್ಕೆ ಟಿಪ್ಪಣಿ ಬರೆದಿರೋದು ಸುಳ್ಳಾ?. ಇದು ಕೂಡ ಸದ್ದಿಲ್ಲದೇ ಆದೇಶ ಮಾಡುವ ಹುನ್ನಾರ ಇದಾಗಿದೆ ಎಂದು ಟೀಕಿಸಿದರು.