ಮೈಶುಗರ್ ವಿದ್ಯುತ್  ಬಿಲ್ ಮನ್ನಾ ಮಾಡುವ ಬಗ್ಗೆ ಕಡತ ಮಂಡನೆಗೆ ಸಿಎಂ ಸೂಚನೆ

 ಬೆಂಗಳೂರು: ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ಬಾಕಿಯನ್ನು ಮನ್ನಾ ಮಾಡುವ ಬಗ್ಗೆ ಪರಿಶೀಲಿಸಿ, ಕಡತ ಮಂಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.

ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ ಅವರು ಮೈಶುಗರ್ ಸಕ್ಕರೆ ಕಾರ್ಖಾನೆಯ ಬಾಕಿ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುವಂತೆ ಮಾಡಿರುವ ಮನವಿಗೆ  ಮುಖ್ಯಮಂತ್ರಿಗಳು, ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ತರಲು ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

 

ಮಂಡ್ಯ ಮೈ ಶುಗರ್ ಕಾರ್ಖಾನೆ  ಕಳೆದ 25 ವರ್ಷಗಳಿಂದ  ವಿದ್ಯುತ್ ಬಿಲ್ ಕಟ್ಟಿಲ್ಲ. ಹೀಗಾಗಿ 52.25 ಕೋಟಿ ರೂ. ಬಾಕಿ ಪಾವತಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯು ಮೈಶುಗರ್ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಿತ್ತು‌. ರೈತರ ಹಿತ ದೃಷ್ಟಿಯಿಂದ‌ ಕಾರ್ಖಾನೆ ಉಳಿಸಿಕೊಳ್ಳುವುದು ಅವಶ್ಯವಾಗಿದ್ದು, ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ದಿನೇಶ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಮನವಿ ಪತ್ರದಲ್ಲೇನಿತ್ತು?

ಮಂಡ್ಯದ ರೈತರ ಜೀವನಾಡಿಯಾಗಿರುವ ಮೈ ಶುಗರ್ ಫ್ಯಾಕ್ಟರಿಯು ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಾಗಿದೆ. ದೇಶದ ಮಾತ್ರವಲ್ಲ ಇಡೀ ಏಷ್ಯಾ ಖಂಡದಲ್ಲೇ ಮೊದಲು ಎಂದರೆ, 1932 ರಲ್ಲಿ ಈ ಕಾರ್ಖಾನೆಯು ಪ್ರಾರಂಭವಾಯಿತು. ಇದು ಮಂಡ್ಯ ಜಿಲ್ಲೆಯ ಹಾಗೂ ಕರ್ನಾಟಕದ ಹೆಮ್ಮೆಯಾಗಿದೆ. ಆದರೆ, ಇದೀಗ ಕಳೆದ 25 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಇದರಿಂದ ಪಾರು ಮಾಡುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದ್ದು, ಸಂಪುಟ ಸಭೆ ಕರೆದು ಬಾಕಿ ಇರುವ ವಿದ್ಯುತ್ ಬಿಲ್ 52.25 ಕೋಟಿ ರೂಪಾಯಿಯನ್ನು ಮನ್ನಾ ಮಾಡಬೇಕು.

ಹಲವು ವರ್ಷಗಳಿಂದ ಹಲವಾರು ಕಾರಣಗಳಿಂದಾಗಿ ಬಂದ್ ಆಗಿದ್ದ ಸಕ್ಕರೆ ಕಾರ್ಖಾನೆಯು ಕಳೆದ ವರ್ಷ ರಾಜ್ಯ ಕಾಂಗ್ರೆಸ್ ಸರ್ಕಾರದ ಮುತುವರ್ಜಿಯಿಂದ  ಪುನರಾರಂಭಗೊಂಡಿತು.

 

ರಾಜ್ಯ ಸರ್ಕಾರ ಕಾರ್ಖಾನೆ ಪ್ರಾರಂಭೋತ್ಸವ, ಹಾಗೂ ಗ್ಯಾಂಗ್ ಗಳಿಗೆ ನೀಡಲು 15 ಕೋಟಿ ರೂ. ದುಡಿಯುವ ಬಂಡವಾಳಕ್ಕಾಗಿ (ವರ್ಕಿಂಗ್ ಕ್ಯಾಪಿಟಲ್) 35 ಕೋಟಿ ರೂ.ಸೇರಿ ಒಟ್ಟಾರೆ 50 ಕೊಟಿ ರೂ.ಗಳನ್ನು ಕಾರ್ಖಾನೆಯ ಪುನಶ್ಚೇತನಕ್ಕೆ ನೀಡಲಾಗಿದೆ.

ಪರಿಣಾಮ ಕಳೆದ ವರ್ಷ ಕಾರ್ಖಾನೆಯು ಮಂಡ್ಯದ ರೈತರು ಬೆಳೆದ  2 ಲಕ್ಷ 41 ಸಾವಿರ ಟನ್ ಕಬ್ಬನ್ನು ನುರಿಸಲಾಗಿತ್ತು. ರೈತರಿಗೆ ಕಬ್ಬಿನ ಹಣ ಪಾವತಿಯಾಗಿದೆ. ಕಾರ್ಖಾನೆಯಿಂದ ರೈತರಿಗೆ ತುಂಬಾ ಅನುಕೂಲವಾಗುತ್ತಿದೆ. ಈ ವರ್ಷ ಕನಿಷ್ಠ 2 ಲಕ್ಷ 5 ಸಾವಿರ ಟನ್ ಕಬ್ಬನ್ನು ನುರಿಸುವ ಸಂಬಂಧ ರೈತರು ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

 

ಆದರೆ, ಕಾರ್ಖಾನೆ ಕೆಲವು ಅನಿವಾರ್ಯ ಕಾರಣಗಳಿಂದ ಕಳೆದ 25 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟಿಲ್ಲ. 52.25 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇರುವ ಬಗ್ಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಕಾರ್ಖಾನೆಗೆ ನೋಟಿಸ್ ನೀಡಿದೆ.  ವಿದ್ಯುತ್ ಪಾವತಿ ಮಾಡುವಂತೆ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲ. ಕೋಟ್ಯಂತರ ರೂಪಾಯಿ ನಷ್ಟದಲ್ಲಿದೆ. ಅಷ್ಟೊಂದು ಹಣವನ್ನು ವಿದ್ಯುತ್ ಬಿಲ್ ಗೆ ಪಾವತಿಸಿದರೆ, ಈ ಹಂಗಾಮಿನಲ್ಲಿ ಕಬ್ಬು ನುರಿಸುವುದೇ ಕಷ್ಟವಾಗಬಹುದು. ಇದರಿಂದ‌ ಈಗಾಗಲೇ ಕಾರ್ಖಾನೆ ನಂಬಿ ಕಬ್ಬು ಬೆಳೆದಿರುವ ರೈತರಿಗೆ ನಷ್ಟವಾಗಬಹುದು ಎಂದು ದಿನೇಶ್ ಗೂಳಿಗೌಡ ಅವರು ಮನವಿ ಪತ್ರದಲ್ಲಿ ಸಮಸ್ಯೆಗಳ ತೀವ್ರತೆಯನ್ನು ತಿಳಿಸಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top