ಸ್ವ-ಸಹಾಯ ಗುಂಪುಗಳ ಉತ್ಪನ್ನಗಳಿಗೆ “ಮಾಸಿಕ ಸಂತೆ” ಮಾರುಕಟ್ಟೆ ವ್ಯವಸ್ಥೆ


ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ಹಾಗೂ ಹೊಸದುರ್ಗ ತಾಲ್ಲೂಕುಗಳ ಸ್ವ-ಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸಿರುವ ಉತ್ಪನ್ನಗಳ ಮಾರಾಟಕ್ಕೆ ಈಗಾಗಲೇ “ಮಾಸಿಕ ಸಂತೆ” ಎಂಬ ಮಾರುಕಟ್ಟೆ ವ್ಯವಸ್ಥೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ ತಿಳಿಸಿದರು.
ನಗರದ ವಾಸವಿ ಮಹಲ್‌ನಲ್ಲಿ ಬುಧವಾರ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ -ಸಂಜೀವಿನಿ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಮತ್ತು ಗ್ರಾಮೀಣ ಕೈಗಾರಿಕಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವ-ಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಸರಸ್ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.


ಜಿಲ್ಲೆಯ ನಗರ, ಗ್ರಾಮೀಣ ಸ್ವ-ಸಹಾಯ ಗುಂಪುಗಳ ಸದಸ್ಯರು ಜೀವನ ಶೈಲಿ ಬದಲಾಯಿಸಿಕೊಂಡು ವಿವಿಧ ರೀತಿಯ ಉತ್ಪನ್ನಗಳ ತಯಾರಿಸುವುದರಿಂದ ಅವರ ಕುಟುಂಬದ ಆದಾಯ ದ್ವಿಗುಣಗೊಳಿಸುವಲ್ಲಿ ಸಹಕಾರಿಯಾಗಿದೆ. ಸ್ವ-ಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ೩೩ ಮಳಿಗೆಗಳನ್ನು ಹಾಕಲಾಗಿದೆ. ಒಂದೇ ರೀತಿಯ ಉತ್ಪನ್ನಗಳಿರದೇ ವಿವಿಧ ರೀತಿಯ ಉತ್ಪನ್ನಗಳಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸಂಜೀವಿನಿ ಯೋಜನೆ ಅಡಿಯಲ್ಲಿ ಸ್ವ-ಸಹಾಯ ಗುಂಪುಗಳಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. ರೈತ ಮಹಿಳೆಯರಿಗೂ ಸಹಾಯಧನ ನೀಡುವುದರ ಜೊತೆಗೆ ತರಬೇತಿಯೂ ನೀಡಲಾಗುತ್ತಿದೆ. ಎಂಬ್ರಾಯಿಡರಿ, ಟೈಲರಿಂಗ್, ಕುರಿಸಾಕಾಣಿಕೆ, ಪಶುಸಂಗೋಪನೆ ಮಾಡುವವರಿಗೂ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಮೇಳದಲ್ಲಿ ಭಾಗವಹಿಸುವ ಎಲ್ಲಾ ಮಹಿಳೆಯರು ಸಹ ತಾವು ಉತ್ಪಾದಿಸಿರುವ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ವಿವರಿಸುವಂತಹ ಬಗೆ ನೋಡಿದರೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದರು.
ಶ್ರೀಕೇತೆಶ್ವರ ಸ್ವ-ಸಹಾಯ ಸಂಘ ನಗರಸಭೆ ಚಿತ್ರದುರ್ಗ, ಅಶ್ವಿನಿ ಎಸ್‌ಹೆಚ್‌ಜಿ ರಾಮಗಿರಿ ಗ್ರಾಮ ಪಂಚಾಯಿತಿ ಹೊಳಲ್ಕೆರೆ ತಾಲ್ಲೂಕು, ಶ್ರೀ ಶಿವ-ಪಾರ್ವತಿ ಎಸ್‌ಹೆಚ್‌ಜಿ ದುಮ್ಮಿ ಗ್ರಾಮ ಪಂಚಾಯತ್ ಹೊಳಲ್ಕೆರೆ, ಬನಶಂಕರಿ ಸ್ವ-ಸಹಾಯ ಸಂಘ ಪುರಸಭೆ ಹೊಸದುರ್ಗ ಮುಂತಾದ ಸ್ವಸಹಾಯ ಸಂಘಗಳು ಸೇರಿದಂತೆ ೩೩ಕ್ಕೂ ಹೆಚ್ಚು ಸ್ವ-ಸಹಾಯ ಸಂಘಗಳು ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಿದ್ದವು.
ಸರಸ್ ಮೇಳವು ಮಾರ್ಚ್ ೯ರಿಂದ ೧೨ರವರೆಗೆ ಬೆಳಿಗ್ಗೆ ೯.೩೦ರಿಂದ ರಾತ್ರಿ ೮.೩೦ರವರೆಗೆ ಕಾರ್ಯ ನಿರ್ವಹಿಸಲಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬಹುದು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರಾದ ಮಹಾಂತೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ಸೇರಿದಂತೆ ವಿವಿಧ ಸ್ವ-ಸಹಾಯ ಗುಂಪುಗಳ ಸದಸ್ಯರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top