ಬೆಂಗಳೂರು: ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಬೆಳವಣಿಗೆಗೆ ಪೂರಕವಾಗಿರುವ ವಿಧಾನವನ್ನು ಅನುಸರಿಸಲು 16 ನೇ ಹಣಕಾಸು ಆಯೋಗಕ್ಕೆ ಪ್ರತಿಪಾದಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
15 ನೇಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸ್ಸು ಮಾಡಿದ್ದರೂ.11,495 ಕೋಟಿಗಳ ವಿಶೇಷ ಅನುದಾನ ಸಿಗದ ಕಾರಣ, ಒಟ್ಟಾರೆಯಾಗಿ 15ನೇ ಹಣಕಾಸು ಆಯೋಗದ ಅವಧಿಯಲ್ಲಿ 80,000 ಕೋಟಿ ರೂ ರಾಜ್ಯಕ್ಕೆ ನಷ್ಟವಾಗಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿಂದು ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತನಾಡಿದ ಅವರು, 15 ನೇಹಣಕಾಸು ಆಯೋಗವು ತನ್ನ ಶಿಫಾರಸ್ಸಿನಲ್ಲಿ ಕರ್ನಾಟಕದ ತೆರಿಗೆ ಪಾಲನ್ನು ಶೇ.4.713 ರಿಂದ ಶೇ.3.647 ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯದ ತೆರಿಗೆ ಪಾಲು 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.23ರಷ್ಟು ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
15ನೇ ಹಣಕಾಸು ಆಯೋಗವು ರಾಜ್ಯಗಳ ನಡುವೆ ತೆರಿಗೆ ಹಂಚಿಕೆಯ ಸೂತ್ರವನ್ನು ಲೆಕ್ಕಮಾಡಲು ಆದಾಯ-ದೂರ ಮಾನದಂಡದ ಮೇಲೆ ಅತಿಯಾಗಿ ಅವಲಂಬಿಸಿದ ಕಾರಣ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಹೆಚ್ಚಿನ ನಷ್ಟವಾಯಿತು. 15 ನೇ ಹಣಕಾಸು ಆಯೋಗ ಆದಾಯ-ದೂರಮಾನದಂಡಕ್ಕೆ ಶೇ.45ರಷ್ಟು ಅಂಕವನ್ನು ನೀಡಿತ್ತು. ರಾಜ್ಯಕ್ಕೆ ಇದರಿಂದ ಉಂಟಾದ ನಷ್ಟವನ್ನು ತಪ್ಪಿಸುವ ಸಲುವಾಗಿ ಆದಾಯ – ದೂರ ಮಾನದಂಡದ ಅಂಕವನ್ನು ಶೇ.20 ರಷ್ಟು ಕಡಿಮೆ ಮಾಡಿ ದೇಶದ ಆರ್ಥಿಕ ಪ್ರಗತಿಗೆ ರಾಜ್ಯಗಳು ಆರ್ಥಿಕ ಪ್ರಗತಿಗೆ ರಾಜ್ಯಗಳು ಕೊಡುಗೆಯನ್ನು ಪರಿಗಣಿಸಬೇಕು. ಇದಕ್ಕೆ ಶೇ 20 ರಷ್ಟು ಕೊಡುಗೆಯನ್ನು ಹಾಗೂ ಇದಕ್ಕೆ ಶೇ.20 ರಷ್ಟು ಅಂಕವನ್ನು ನೀಡಬೇಕೆಂದು ಮನವಿ ಮಾಡಿದರು.
15ನೇ ಹಣಕಾಸು ಆಯೋಗವು, ಒಟ್ಟು ಕೇಂದ್ರ ಸ್ವೀಕೃತಿಗಳ ಶೇ.1.92 ರಷ್ಟನ್ನು ರಾಜಸ್ವಕೊರತೆ ಅನುದಾನಗಳೆಂದು ಶಿಫಾರಸ್ಸು ಮಾಡಿತ್ತು. ಆದ್ದರಿಂದ ಕೇಂದ್ರ ಸರ್ಕಾರದ ಒಟ್ಟು ಸ್ವೀಕೃತಿಗಳ ಶೇ.1.92 ರಷ್ಟು ಮೊತ್ತವನ್ನು ತೆರಿಗೆ ಹಂಚಿಕೆಯ ಸೂತ್ರದ ಆಧಾರದ ಮೇಲೆ ಎಲ್ಲಾ ರಾಜ್ಯಗಳಿಗೂ ಹಂಚಿಕೆ ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಸ್ತಾಸಿದ್ದಾರೆ.
ಬೆಂಗಳೂರು, ಕಲ್ಯಾಣ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಅಭಿವೃದ್ಧಿ ಸವಾಲುಗಳನ್ನು ಸಹ ಹಣಕಾಸು ಸಚಿವರ ಮುಂದೆ ಪ್ರಸ್ತಾಪಿಸಿದರು. ರಾಜ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ನ್ಯಾಯಯು ತಮತ್ತು ಬೆಳವಣಿಗೆಗೆ ಪೂರಕವಾಗುವ ತೆರಿಗೆ ಹಂಚಿಕೆಯ ಅವಶ್ಯಕತೆಯನ್ನು ಮನವರಿಕೆ ಮಾಡಿದರು.
ಕರ್ನಾಟಕದ ಪ್ರಸ್ತಾವನೆಗಳು ವಿಶೇಷ ಪ್ರಕರಣವೆಂದು ಪರಿಗಣಿಸದೆ, ಇದು ಒಟ್ಟಾರೆ ರಾಷ್ಟ್ರೀಯ ಸಂಪನ್ಮೂಲಕ್ರೋಢೀಕರಣಕ್ಕಾಗಿ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಪ್ರಸ್ತಾವನೆಗಳಾಗಿವೆ ಎಂದು ಮುಖ್ಯಮಂತ್ರಿಯವರು ಹೇಳಿದರು.
16ನೇ ಹಣಕಾಸು ಆಯೋಗಕ್ಕೆ ಕೇಂದ್ರ ಸರ್ಕಾರ ಸಲ್ಲಿಸುವ ಜ್ಞಾಪಕ ಪತ್ರದಲ್ಲಿ ರಾಜ್ಯ ಸರ್ಕಾರದ ಈ ಪ್ರಸ್ತಾವನೆಗಳನ್ನು ಸೇರಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡುವ ಮೂಲಕ, ಎಲ್ಲಾ ರಾಜ್ಯಗಳು ದೇಶದ ಅಭಿವೃದ್ಧಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಬೆಳವಣಿಗೆ ಆಧಾರಿ ತೆರಿಗೆ ಹಂಚಿಕೆ ಅವಶ್ಯಕ ಎಂದು ಸಿದ್ದರಾಮಯ್ಯ ಒತ್ತಿ ಹೇಳಿದ್ದಾರೆ.