ಚನ್ನಪಟ್ಟಣ ಉಪ ಚುನಾವಣೆ : ಯಾರಿಗೆ ಸಿಗಲಿದೆ ಟಿಕೆಟ್‍

ಬೆಂಗಳೂರು : ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ಯಾರಿಗೆ ಎಂಬ ಕುತೂಹಲ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಟಿಕೆಟ್ ಗಾಗಿ ಸಿಪಿ ಯೋಗೇಶ್ವರ್ ಹರ ಸಾಹಸ ಪಡುತ್ತಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನಡೆಯ ಮೇಲೆ ಯಾರಿಗೆ ಟಿಕೆಟ್ ಎಂಬುದು ಅಂತಿಮ ನಿರ್ಧಾರವಾಗಲಿದೆ.

ಮಾಜಿ ಸಚಿವ ಸಿಪಿ ಯೋಗೇಶ್ವರ್ ಚನ್ನಪಟ್ಟಣದಿಂದ ಟಿಕೆಟ್ ಪಡೆದುಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿಯೂ ಕ್ಷೇತ್ರದಲ್ಲಿ ಯೋಗೇಶ್ವರ್ ತಮ್ಮದೇ ಆದ ರಾಜಕೀಯ ಶಕ್ತಿಯನ್ನು ಸಂಪಾದಿಸಿದ್ದಾರೆ.

 

          ಸದ್ಯ ವಿಧಾನಪರಿಷತ್ ಬಿಜೆಪಿ ಸದಸ್ಯರಾಗಿರುವ ಅವರು, ಚನ್ನಪಟ್ಟಣದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಇದಕ್ಕೆ ತೊಡಕಾಗಿರುವುದು ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ನಡೆ. ರಾಮನಗರ ಜಿಲ್ಲೆ ( ಬೆಂಗಳೂರು ದಕ್ಷಿಣ) ದಲ್ಲಿ ಕೇವಲ ಒಂದು ಕ್ಷೇತ್ರವನ್ನು ಮಾತ್ರ ಜೆಡಿಎಸ್ ಹೊಂದಿದೆ. ಉಳಿದವು ಕಾಂಗ್ರೆಸ್ ಪಾಲಾಗಿವೆ. ಹೀಗಿರುವಾಗ ಇದ್ದ ಒಂದು ಕ್ಷೇತ್ರವನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವುದು ದಳಪತಿಗಳಿಗೆ ಅನಿವಾರ್ಯವಾಗಿದೆ.

          ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಲು ಸಿಪಿವೈ ಒಲವು :

 

ಚನ್ನಪಟ್ಟಣದಲ್ಲಿ ಬಿಜೆಪಿ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸಬೇಕು ಎಂಬುವುದು ಸಿಪಿ ಯೋಗೇಶ್ವರ್ ಒಲವಾಗಿದೆ. ಆದರೆ ಇದಕ್ಕೆ ಎಚ್ಡಿಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಿರುವಾಗ ಹೈಕಮಾಂಡ್ ಬಳಿಯೂ ಯೋಗೇಶ್ವರ್ ಮಾತುಕತೆ ನಡೆಸಿದ್ದಾರೆ. ಆದರೆ ಪೂರಕವಾದ ಬೆಳವಣಿಗೆಗಳು ನಡೆದಿಲ್ಲ. ಸಹಜವಾಗಿ ಎಚ್ಡಿಕೆಗೆ ಚನ್ನಪಟ್ಟಣ ಅನಿವಾರ್ಯವಾಗಿದೆ. ಆ ಕ್ಷೇತ್ರವನ್ನು ಜೆಡಿಎಸ್ನಲ್ಲೇ ಉಳಿಸಿಕೊಳ್ಳಬೇಕು ಎಂಬುವುದು ಅವರ ತಂತ್ರಗಾರಿಕೆಯಾಗಿದೆ. ಆದರೆ ಅವರು ಯಾರನ್ನು ಕಣಕ್ಕಿಳಿಸುತ್ತಾರೆ? ಎಂಬುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.

          ನಿಖಿಲ್ ಪರವಾಗಿ ಎಚ್ಡಿಕೆ ಒಲವು? :

ಚನ್ನಪಟ್ಟಣದಲ್ಲಿ ತಮ ಪುತ್ರ ನಿಖಿಲ್ ಅವರನ್ನೇ ಕುಮಾರಸ್ವಾಮಿ ಕಣಕ್ಕಿಳಿಸುತ್ತಾರಾ? ಎಂಬ ಕುತೂಹಲವೂ ಕೆರಳಿದೆ. ಪಾದಯಾತ್ರೆಯ ಸಂದರ್ಭದಲ್ಲೂ ನಿಖಿಲ್ ಕುಮಾರಸ್ವಾಮಿ ಮತ್ತು ಎಚ್ಡಿಕೆ ನಡವಳಿಕೆಯೂ ಇದಕ್ಕೆ ಪೂರಕವಾಗಿತ್ತು. ಆದರೆ ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಅವರು ಸುಳಿವನ್ನು ನೀಡಿಲ್ಲ.

          ಸಿಪಿವೈ ಮುಂದಿನ ನಡೆ ಏನು? :

ಹಾಗಾದರೆ ಸಿಪಿ ಯೋಗೇಶ್ವರ್ ಅವರ ಮುಂದಿನ ನಡೆ ಏನು ಎಂಬುವುದು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ. ಚನ್ನಪಟ್ಟಣದಲ್ಲಿ ಟಿಕೆಟ್ ಸಿಗದೆ ಇದ್ದಲ್ಲಿ ಪಕ್ಷೇತರರಾಗಿ ಅವರು ನಿಲ್ಲುವ ಸುಳಿವನ್ನು ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಜೊತೆಗೂ ಸಂಪರ್ಕದಲ್ಲಿ ಇದ್ದಾರೆ ಎಂಬ ಮಾಹಿತಿಯೂ ಇದೆ. ಹೀಗಿರುವಾಗ ಸಿಪಿವೈ ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಾರಾ? ಅಥವಾ ಪಕ್ಷೇತರರಾಗಿ ನಿಲ್ಲುತ್ತಾರಾ? ಎಂಬುವುದು ಸದ್ಯ ಪ್ರಶ್ನೆಯಾಗಿ ಉಳಿದಿದೆ.

          ಹೈಕಮಾಂಡ್ ನಡೆಯೂ ಕುತೂಹಲ :

 

ಚನ್ನಪಟ್ಟಣ ವಿಚಾರವಾಗಿ ಬಿಜೆಪಿ ಹೈಕಮಾಂಡ್ ನಡೆ ಏನು ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತೆರವಾದ ೩ ಸ್ಥಾನಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಈ ಪೈಕಿ ಎರಡು ಕ್ಷೇತ್ರ ಬಿಜೆಪಿಗೆ ಹಾಗೂ ಒಂದು ಕ್ಷೇತ್ರ ಜೆಡಿಎಸ್ಗೆ ಎಂಬ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ಚನ್ನಪಟ್ಟಣದಲ್ಲಿ ಸಿಪಿವೈ ಬಿಜೆಪಿ ಚಿಹ್ನೆಯಲ್ಲೇ ಸ್ಪರ್ಧೆಗೆ ಪಟ್ಟು ಹಿಡಿದಿದ್ದಾರೆ. ಹೀಗಿರುವಾಗ ಬಿಜೆಪಿ ಹೈಕಮಾಂಡ್ ಯಾವ ನಿಲುವು ಕೈಗೊಳ್ಳಲಿದೆ ಎಂಬುವುದನ್ನು ಕಾದುನೋಡಬೇಕಾಗಿದೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top