ಅಲ್ಪ ಮೊತ್ತದ ಬರ ಪರಿಹಾರ ಬಿಡುಗಡೆ ಮಾಡುವ ಮೂಲಕ ಕೇಂದ್ರದಿಂದ ಕರ್ನಾಟಕದ ರೈತರಿಗೆ ಮತ್ತೆ ಅನ್ಯಾಯ: ಕೃಷ್ಣ ಬೈರೇಗೌಡ

ಬೆಂಗಳೂರು: ಕೇಂದ್ರದ ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ರಾಜ್ಯಕ್ಕೆ ರೂ.18,172 ಕೋಟಿ ಬರ ಪರಿಹಾರ ಬಿಡುಗಡೆಯಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಕೇವಲ ರೂ.3498 ಕೋಟಿ ಮಾತ್ರ ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮೆ ರಾಜ್ಯದ ರೈತರಿಗೆ ಅನ್ಯಾಯ ಎಸಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

ಕೇಂದ್ರ ಸರ್ಕಾರ ಶನಿವಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಅವರು ಮಾತನಾಡಿದರು.

ಪ್ರಸ್ತುತ ರಾಜ್ಯದ 240 ತಾಲೂಕುಗಳ ಪೈಕಿ 223  ತಾಲೂಕುಗಳು ಭೀಕರ ಬರ ಎದುರಿಸುತ್ತಿವೆ. ರೈತರಿಗೆ ಮುಂಗಾರು ಬೆಳೆ ಸಂಪೂರ್ಣ ಕೈಕೊಟ್ಟಿದೆ. ಇನ್ನೂ ಹಿಂಗಾರು ಬೆಳೆಯ ಬಗ್ಗೆಯೂ ನಿರೀಕ್ಷೆ ಇಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯದ ರೈತರ ಬೆನ್ನಿಗೆ ನಿಲ್ಲಬೇಕಾದ ಕೇಂದ್ರ ಸರ್ಕಾರ ನಿಯಮದಂತೆ ನೀಡಬೇಕಾದ ಹಣದ ಶೇ.20 ರಷ್ಟನ್ನು ಮಾತ್ರ ಬಿಡುಗಡೆ ಮಾಡುವ ಮೂಲಕ ರಾಜ್ಯದ ರೈತರ ವಿರುದ್ಧದ ತನ್ನ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ ಎಂದು ಅಸಮಾಧಾನ ಹೊರಹಾಕಿದರು.

ಬರ ಪರಿಹಾರ ನಮ್ಮ ಹಕ್ಕು. ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ನಿಯಮದ ಅನ್ವಯವೇ ನಾವು ಮನವಿ ಸಿದ್ದಪಡಿಸಿ ಸಲ್ಲಿಸಿದ್ದೆವು. ಇದರ ಅನ್ವಯ ರಾಜ್ಯಕ್ಕೆ ಕನಿಷ್ಠ ರೂ.18,172 ಕೋಟಿ ಬರ ಪರಿಹಾರ ಬಿಡುಗಡೆಯಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಕೇವಲ ರೂ.3498 ಕೋಟಿ ಮಾತ್ರ ಬಿಡುಗಡೆಗೊಳಿಸಿದೆ. ಈ ಮೂಲಕ ಕರ್ನಾಟಕದ ಹಕ್ಕಿಗೆ ಕೇಂದ್ರ ಸರ್ಕಾರ ಕಿಂಚಿತ್ತೂ ಬೆಲೆ ನೀಡದಿರುವುದು ಸ್ಪಷ್ಟವಾಗಿದ್ದು, ಉಳಿದ ಹಣವನ್ನು ಕೇಂದ್ರ ಬಿಡುಗಡೆ ಮಾಡುವ ವರೆಗೆ ರಾಜ್ಯದ ಹೋರಾಟ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಪರಿಹಾರ ನೀಡಿದ್ದು ಕೇಂದ್ರವಲ್ಲ, ಕೋರ್ಟ್!: ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಿರುವುದು ಸುಪ್ರೀಂ ಕೋರ್ಟ್ ವಿನಃ ಕೇಂದ್ರ ಸರ್ಕಾರವಲ್ಲ. ಕರ್ನಾಟಕಕ್ಕೆ ಬರ ಪರಿಹಾರ ನೀಡುವ ಯಾವುದೇ ಉದ್ದೇಶವೂ ಅವರಿಗೆ ಇದ್ದಂತಿರಲಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

 

ಈ ಬಗ್ಗೆ ಮಾತನಾಡಿ, “ರಾಜ್ಯ ಸರ್ಕಾರ ಬರ ಘೋಷಿಸಿ ಸೆ.22 ರಂದೇ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿತ್ತು. ಕೇಂದ್ರದಿಂದ ತಂಡ ರಾಜ್ಯಕ್ಕೆ ಆಗಮಿಸಿ ಅ.4 ರಿಂದ 9ರ ವರೆಗೆ 13 ಜಿಲ್ಲೆ ಪ್ರವಾಸ  ಮಾಡಿ ಕೇಂದ್ರ ಕೃಷಿ- ಗೃಹ ಸಚಿವಾಲಯಕ್ಕೆ ಒಂದೇ ವಾರದಲ್ಲಿ ವರದಿ ಸಲ್ಲಿಸಿತ್ತು. ನ.13ಕ್ಕೆ ರಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ಶಿಫಾರಸುಗಳೂ ಗೃಹ ಸಚಿವರ ಕಚೇರಿಗೆ ತಲುಪಿವೆ. ಆದರೆ, ಗೃಹ ಕಚೇರಿಯಲ್ಲಿ ಉದ್ದೇಶಪೂರ್ವಕವಾಗಿ ರಾಜ್ಯದ ಮನವಿ ಪರಿಗಣಿಸದೆ ವಿಳಂಭ ಧೋರಣೆ ಅನುಸರಿಸಲಾಗಿತ್ತು ಎಂದು ಅವರು ಆರೋಪಿಸಿದರು.

ರಾಜ್ಯಕ್ಕೆ ಕಳೆದ ನವೆಂಬರ್‌ ತಿಂಗಳಲ್ಲೇ ಬರಬೇಕಾದ ಬರ ಪರಿಹಾರವನ್ನು ಆರು ತಿಂಗಳಾದರೂ ಬಿಡುಗಡೆ ಮಾಡಲಿಲ್ಲ. ಕೇಂದ್ರದ ಕೈಯಲ್ಲಿ ಅಧಿಕಾರ ಹಾಗೂ ಸಮಯ ಎರಡೂ ಇದ್ದೂ ಸಹ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿಲ್ಲ. ಅಸಲಿಗೆ ಅವರಿಗೆ ಕರ್ನಾಟಕಕ್ಕೆ ಬರ ಪರಿಹಾರ ನೀಡುವ ಉದ್ದೇಶವೂ ಇರಲಿಲ್ಲ. ನಮ್ಮ ಮನವಿಗಾಗಲಿ, ಕರ್ನಾಟಕದ ಹಕ್ಕಿಗಾಗಲಿ ಅವರು ಕಿಂಚಿತ್ತೂ ಬೆಲೆ ನೀಡಲಿಲ್ಲ. ವಿಪತ್ತು ನಿರ್ವಹಣಾ ಕಾಯ್ದೆ-2005ರ ಪ್ರಕಾರ ಕಾನೂನಿನಂತೆ ನಮಗೆ ಬರಬೇಕಾದ ಹಣ ಬರದಿದ್ದಾಗ ಅನಿವಾರ್ಯವಾಗಿ ನಾವು ನ್ಯಾಯಾಲಯ ಮೆಟ್ಟಿಲೇರಿ ಕಾನೂನು ಮೊರೆ ಹೋಗಬೇಕಾಯ್ತು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿವರಿಸಿದರು.

ರಾಜ್ಯದ ರೈತರಿಗೆ ಅನ್ಯಾಯವಾದಾಗ ಕೈಕಟ್ಟಿ ಕೂರಬಾರದು ಎಂಬ ಕಾರಣಕ್ಕೆ ಸರ್ಕಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದ ಎರಡು ಹಿಯರಿಂಗ್‌ನಲ್ಲೂ ನಮ್ಮ ಬರ ಪರಿಹಾರದ ಮನವಿಯ ಬಗ್ಗೆ ನ್ಯಾಯಾಧೀಶರಾಗಲಿ ಅಥವಾ ಕೇಂದ್ರ ಸರ್ಕಾರದ ಪರ ವಕೀಲರಾಗಲಿ ಪ್ರಶ್ನೆ ಮಾಡಿಲ್ಲ. ಇದರ ಅರ್ಥ ನಾವು ಕೊಟ್ಟ ಮನವಿ ಕರಾರುವಕ್ಕಾಗಿತ್ತು, ಕಾನೂನು ಬದ್ಧವಾಗಿತ್ತು ಎಂಬುದನ್ನು ಸೂಚಿಸುತ್ತದೆ ಎಂದರು.

ಅಲ್ಲದೆ, ಸ್ವತಃ ಕೇಂದ್ರ ಸರ್ಕಾರದ ವಕೀಲರು ಕೋರ್ಟ್‌ನಲ್ಲಿ ಕೈಮುಗಿದು ನಮಗೆ ಈ ವಾದವೇ ಬೇಡ ನಾವು ಶೀಘ್ರದಲ್ಲಿ ಕರ್ನಾಟಕದ ಬರ ಮನವಿ ಮೇಲೆ ನಿರ್ಧಾರ ತೆಗೆದುಕೊಳ್ಳುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಅದರ ಅನ್ವಯ ಇಂದು ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಇದು ಸರ್ವೋಚ್ಚ ನ್ಯಾಯಾಲಯದಿಂದ ರಾಜ್ಯಕ್ಕೆ ಕಲ್ಪಿಸಲ್ಪಟ್ಟ ನ್ಯಾಯವೇ ವಿನಃ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವುದಲ್ಲ ಎಂದು ಅವರು ಪುನರುಚ್ಚರಿಸಿದರು.

ಅಸಲಿಗೆ ಬರ ಪರಿಹಾರ ಬರದಿದ್ದಾಗ ಗೃಹ ಸಚಿವರಾದ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪರಿಹಾರಕ್ಕಾಗಿ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೇಂದ್ರ ನಾಯಕರು ನಮ್ಮನ್ನೂ ಗೌರವಿಸಿಲ್ಲ, ನಮ್ಮ ರೈತರ ಸಮಸ್ಯೆಯೂ ಅವರಿಗೆ ಅರ್ಥವಾಗಿಲ್ಲ. ನಾವು ಸುಪ್ರೀಂ ಕೋರ್ಟ್ ಮೊರೆ ಹೋಗದಿದ್ದರೆ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡುವ ಯಾವ ಉದ್ದೇಶವೂ ಕೇಂದ್ರಕ್ಕಿರಲಿಲ್ಲ ಎಂಬುದು ಸ್ಪಷ್ಟ ಸಚಿವ ಕೃಷ್ಣ ಬೈರೇಗೌಡ ಅವರು ಆರೋಪಿಸಿದರು.

ಕೇಂದ್ರದಿಂದಲೇ ನಿಯಮ ಉಲ್ಲಂಘನೆ:

 

ಕೇಂದ್ರ ಸರ್ಕಾರ ಇಂದು ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ. ಈ ಬಗ್ಗೆ ರಾಜ್ಯಕ್ಕೆ ಮಾಹಿತಿ ಇಲ್ಲ. ನಿಯಮದಂತೆ ಮೊದಲು ರಾಜ್ಯಕ್ಕೆ ಕೇಂದ್ರ ಹಣಕಾಸು ಇಲಾಖೆಯಿಂದ ಪತ್ರ ಬರಬೇಕು. ಆದರೆ, ಈ ನಿಯಮವನ್ನು ಪಾಲಿಸದೆ ಬರ ಪರಿಹಾರ ಬಿಡುಗಡೆ ಅಧಿಸೂಚನೆಯನ್ನು ಮೊದಲು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ನಮಗೂ ಸಾಮಾಜಿಕ ಮಾಧ್ಯಮಗಳ ಮೂಲಕವೇ ವಿಷಯ ತಿಳಿದಿದ್ದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.

ಸಾಮಾಜಿಕ ಜಾಲತಾಣದಿಂದ ವಿಷಯ ತಿಳಿದ ನಂತರ ನಮ್ಮ ಅಧಿಕಾರಿಗಳು ಕೇಂದ್ರ ಹಣಕಾಸು ಇಲಾಖೆಯ ಜೊತೆ ಮಾತನಾಡಿ ಬರ ಪರಿಹಾರವನ್ನು ಖಚಿತಪಡಿಸಿಕೊಂಡಿದ್ದಾರೆ. ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ಸಂಬಂಧ ಅಧೀಕೃತ ಪತ್ರ ಬರೆದ ನಂತರ ಈ ಹಣವನ್ನು ರಾಜ್ಯದ ಖಾತೆಗೆ ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದರು.

ವಾರದಲ್ಲಿ ರೈತರಿಗೆ ಪರಿಹಾರ, ಕಾನೂನು ಕ್ರಮ ಮುಂದುವರಿಕೆ:

 

ಬರ ಪರಿಹಾರ ಹಣ ರಾಜ್ಯದ ಖಾತೆಗೆ ವರ್ಗಾಯಿಸುತ್ತಿದ್ದಂತೆ ಮುಂದಿನ ಒಂದು ವಾರದಲ್ಲಿ ಎಲ್ಲಾ ರೈತರಿಗೂ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಕಾನೂನು ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದ್ದು, ಶೇ.20 ರಷ್ಟು ಹಣ ಮಾತ್ರ ಬರ ಪರಿಹಾರದ ರೂಪದಲ್ಲಿ ಸಿಕ್ಕಿದೆ. ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಬಾಕಿ ಹಣದ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಹೀಗಾಗಿ ಕೇಂದ್ರದಿಂದ ಬಾಕಿ ಹಣ ಪಡೆಯುವವರೆಗೆ ರಾಜ್ಯ ಸರ್ಕಾರದ ಕಾನೂನು ಹೋರಾಟ ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top