ಪದೇ ಪದೇ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ: ಸಿಎಂ

ಬೆಂಗಳೂರು. ಜನವರಿ 9: ಜನರನ್ನು ಮರುಳು ಮಾಡಲು ಕಾಂಗ್ರೆಸ್ ಪಕ್ಷ ರಾಜಕೀಯ ಪ್ರೇರಿತ ಪಾದಯಾತ್ರೆ ಕೈಗೊಂಡಿದೆ. ಆದರೆ ಜನರನ್ನು ಪದೇ ಪದೇ ಮರುಳು ಮಾಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ನ್ನು ಸಮರ್ಪಕವಾಗಿ ಸಲ್ಲಿಸಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಬದ್ಧತೆ ಇಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿಕಿಶಿಯವರು ನೀರಾವರಿ ಸಚಿವರಾಗಿದ್ದರು, ಆಗಲೂ ಈ ಯೋಜನೆಗೆ ಬಗ್ಗೆ ಕ್ರಮ ವಹಿಸಲಿಲ್ಲ. ಕಳೆದ ಮೂರು ವರ್ಷಗಳಿಂದಲೂ ಇದರ ಬಗ್ಗೆ ಚಕಾರವೆತ್ತಿರಲಿಲ್ಲ. ಈಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯ ಪಾದಯಾತ್ರೆ ಕೈಗೊಂಡಿದ್ದಾರೆ. ತಮ್ಮ ಅವಧಿಯಲ್ಲಿ ಈ ಬಗ್ಗೆ ಯಾವುದೇ ಕೆಲಸ ಮಾಡಿಲ್ಲವೆನ್ನುವ ಅಪರಾಧ ಕಾಂಗ್ರೆಸ್ ನವರನ್ನು ಕಾಡುತ್ತಿದೆ. ಆದ್ದರಿಂದ ಜನರನ್ನು ಮರಳು ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಇದು ರಾಜಕೀಯ ಪ್ರೇರಿತ ಕಾಂಗ್ರೆಸ್ ಪಾದಯಾತ್ರೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಯಾವುದೇ ನೀರಾವರಿ ಯೋಜನೆಗಳ ಬಗ್ಗೆ ಬದ್ಧತೆಯಿಂದ ಕೆಲಸ ಮಾಡಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ 10,000 ಕೋಟಿ ಅನುದಾನ ನೀಡುವುದಾಗಿ ಕೃಷ್ಣೆ ಪಾದಯಾತ್ರೆ ಕೈಗೊಂಡು ಪ್ರಮಾಣ ಮಾಡಿದರು. ಆದರೆ ಐದು ವರ್ಷದ ಅವಧಿಯಲ್ಲಿ ಒಟ್ಟು 7000 ಕೋಟಿ ರೂ.ಗಳಷ್ಟೂ ಬಿಡುಗಡೆ ಮಾಡಲಿಲ್ಲ ಎಂದರು. ಭಾಜಪ ಸರ್ಕಾರ ಮೇಕೆದಾಟು ಯೋಜನೆಯ ಬಗ್ಗೆ ಬದ್ಧತೆಯನ್ನ ಪ್ರದರ್ಶಿಸಿದ್ದು, ಮುಖ್ಯಮಂತ್ರಿಯಾದ ನಂತರ ಡಿಪಿಆರ್ ಅನುಮೋದನೆಗೆ ಸಿಡಬ್ಲ್ಯೂಸಿನಿಂದ ಕಾವೇರಿ ಮಾನಿಟರ್ ಬೋರ್ಡ್ ಗೆ ಈಗಾಗಲೇ ಕಳುಹಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸಭೆಯನ್ನು ಈ ತಿಂಗಳಲ್ಲಿ ನಡೆಸಲಾಗುತ್ತಿದ್ದು, ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ. ಉಚ್ಛನ್ಯಾಯಾಲಯದಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುತ್ತಿರುವುದು ಸರ್ಕಾರದ ಗಮನದಲ್ಲಿದೆ ಎಂದು ತಿಳಿಸಿದರು. ಹಿಂದೆ ಕೇವಲ ರೈತ ಸಂಘಟನೆಯವರು ಯೋಜನೆ ಸ್ಥಳ ಕ್ಕೆ ಭೇಟಿ ಕೊಟ್ಟಿದ್ದರ ಹಿನ್ನೆಲೆಯಲ್ಲಿ ಎನ್ ಜಿ ಟಿಯವರು ಇಡೀ ಮೇಕೆದಾಟು ಯೋಜನೆಗೆ ಸ್ಟೇ ವಿಧಿಸಿದ್ದರು. ಪ್ರಸ್ತುತ ಕಾಂಗ್ರೆಸ್ ನವರು ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ಮಾಡುತ್ತಿದೆ. ಇದರ ಪರಿಣಾಮಗಳ ಬಗ್ಗೆ ಕಾಂಗ್ರೆಸ್ ನವರಿಗೆ ಅರಿವಿದೆ. ಆದರೂ ರಾಜಕಾರಣ ಮಾಡುವುದೇ ಅವರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆಯಲ್ಲಿ ಅಂತರರಾಜ್ಯ ಜಲ ವಿವಾದದಲ್ಲಿನ ಕಾನೂನಾತ್ಮಕ ವಿಷಯಗಳು, ಕಾವೇರಿ ಟ್ರಿಬ್ಯುನಲ್ ತೀರ್ಪು, ನ್ಯಾಯಾಲಯದ ಆದೇಶಗಳನ್ನು ಗಮನಿಸಿದ್ದರೆ ಕಾಂಗ್ರೆಸ್ ನವರು ಈ ಪಾದಯಾತ್ರೆ ಕೈಗೊಳ್ಳುತ್ತಿರಲಿಲ್ಲ. ಆದರೆ ಕಾಂಗ್ರೆಸ್ ನವರಿಗೆ ಬೇಕಿರುವುದು ರಾಜಕೀಯ. ಈ ಬಗ್ಗೆ ಜನತೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷ ತೆಗೆದುಕೊಂಡರೂ ಮೇಕೆದಾಟು ಯೋಜನೆಯ ಡಿಪಿಆರ್ ಮಾಡಲಾಗಲಿಲ್ಲ. ಬೆಟ್ಟ ಅಗೆದು ಇಲಿ ಹೊರತೆಗೆದಂತೆ, ಯೋಜನೆಯ ಫೀಸಬಲಿಟಿ ವರದಿ ಮಾತ್ರ ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದರು. ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ಕೈಗೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ನೋಟೀಸ್ ನೀಡಲಾಗಿದೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top