ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ಉಚ್ಛಾಟಿಸಿ: ಹೈಕಮಾಂಡ್ ಗೆ ಬಿವೈ ವಿಜಯೇಂದ್ರ ಬಣ ಆಗ್ರಹ

Kannada Nadu
ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ಉಚ್ಛಾಟಿಸಿ: ಹೈಕಮಾಂಡ್ ಗೆ ಬಿವೈ ವಿಜಯೇಂದ್ರ ಬಣ ಆಗ್ರಹ

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರನ್ನು ಕೇಂದ್ರ ವರಿಷ್ಠರು ಮುಲಾಜಿಲ್ಲದೆ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ ಆಗ್ರಹಿದೆ. ಮಾತೆತ್ತಿದರೆ ನಾನೊಬ್ಬ ಹಿಂದೂ ಹುಲಿ ಎನ್ನುವ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಜೆಡಿಎಸ್ ಗೆ ಸೇರಿಕೊಂಡು ಟಿಪ್ಪೂ ಸುಲ್ತಾನ್ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಬಿರಿಯಾನಿ, ಕಬಾಬ್ ತಿಂದಿದ್ದನ್ನು ಮರೆತುಬಿಟ್ಟಿದ್ದಾರೆ. ಆಗ ನಿಮ್ಮ ನಿಜವಾದ ಹಿಂದುತ್ವ ಎಲ್ಲಿ ಹೋಗಿತ್ತು. ಇಫ್ತಾರ್ ಕೂಟದಲ್ಲಿ ಭಾಗಿಯಾದಾಗ ಬಿಜೆಪಿ ಸಿದ್ಧಾಂತ ನೆನಪಿರಲಿಲ್ಲವೇ? ಹಿಂದೂ ಹುಲಿ ಜೆಡಿಎಸ್ ಗೆ ಹೋಗಿದ್ದು ಏಕೆ? ಮೊದಲು ಜನತೆಗೆ ಉತ್ತರ ಕೊಡಿ ಎಂದು ಹರಿಹಾಯ್ದಿದೆ.

ಮಾಜಿ ಸಚಿವ ಕಟ್ಟಾ ಸುಬ್ರಹಣ್ಯನಾಯ್ಡು ನಿವಾಸದಲ್ಲಿ ಸಭೆ ನಡೆಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಸಂಪಂಗಿ, ಲಕ್ಷ್ಮೀನಾರಾಯಣ,  ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡುತ್ತಿರುವ ಭಿನ್ನಮತೀಯರನ್ನು ತಕ್ಷಣವೇ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಡಿ.ಕೆ.ಹರೀಶ್ ಅವರನ್ನು ಮುಲಾಜಿಲ್ಲದೆ ಪಕ್ಷದಿಂದ ಕಿತ್ತುಹಾಕಬೇಕು. ಇಲ್ಲದಿದ್ದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ಅವರು, ಮಿಸ್ಟರ್ ಯತ್ನಾಳ್, ಯಡಿಯೂರಪ್ಪ ಕುಟುಂಬದವರ ಬಗ್ಗೆ ಮಾತನಾಡುವ ನೀನು ಜೆಸಿಬಿ, ಬಸ್ಸು ಓಡಿಸಿಕೊಂಡಿದ್ದೆ. ಈಗ ಬಿಜಾಪುರದಲ್ಲಿ ಶಿಕ್ಷಣ ಸಂಸ್ಥೆಗಳು, ಕಲಬುರಗಿಯಲ್ಲಿ ಸಕ್ಕರೆ ಕಾರ್ಖಾನೆಯ ಮಾಲೀಕರಾಗಿದ್ದೀರ. ಇದಕ್ಕೆಲ್ಲಿಂದ ದುಡ್ಡು ಬಂತು?, ನಮಗೆ ನಿಮ ಬಂಡವಾಳ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಯಾರು ಈ ಹಿಂದೆ ಸಸ್ಪೆಂಡ್ ಆಗಿ ಯಡಿಯೂರಪ್ಪ ನವರ ಕಾಲು ಹಿಡಿದವರು? ಮಿಸ್ಟರ್ ಯತ್ನಾಳ್ ಇದು ಸರಿಯಲ್ಲ. ನಾಲಿಗೆ ಬಿಗಿ ಹಿಡಿದು ಮಾತಾಡು, ನಿಮಗೆ ಗೌರವ ಕೊಡ್ತೇವೆ ನಾವು. ಇವರು ಯಾರೂ ಮೂಲ ಬಿಜೆಪಿಯಲ್ಲ. ಬಿಜೆಪಿಗೆ ಮೂಲ ಇವರೆಲ್ಲ. ಸಿದ್ದೇಶ್ವರ್ ಸಂಸ್ಥೆ ನೀನು ಕಟ್ಟಿದ್ದಲ್ಲ. ಅಲ್ಲಿ ಬಂದು ಸಂಸ್ಥೆ ಕಬ್‌್ಜ ಮಾಡಿದಿಯಲ್ಲ. ಅಲ್ಲಿ ನಿಮ ಮಗನ್ನ ಡೈರೆಕ್ಟರ್ ಮಾಡಿದ್ದೀಯಲ್ಲ ಇದು ಕುಟುಂಬ ರಾಜಕಾರಣ ಅಲ್ವಾ? ಎಂದು ಪ್ರಶ್ನಿಸಿದರು.

ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ವಿಜಯೇಂದ್ರ ಅವರ ಪಾತ್ರವಿಲ್ಲ. ವರಿಷ್ಠರ ಸೂಚನೆಯಂತೆ ಅವರು ನೇಮಕ ಮಾಡಿದ್ದಾರೆ. ಜಿಲ್ಲಾಭಿಪ್ರಾಯ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯವನ್ನು ಪಡೆದುಕೊಂಡು ಅಂತಿಮವಾಗಿ ಎಲ್ಲರಿಗೂ ಒಪ್ಪಿಗೆಯಾಗುವವರನ್ನೇ ಆಯ್ಕೆ ಮಾಡುತ್ತಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಿಡಿಮಿಡಿಗೊಂಡರು.
ಮಾಜಿ ಸಚಿವ ಕುಮಾರಬಂಗಾರಪ್ಪ ವಿರುದ್ಧವೂ ಕೆಂಡ ಕಾರಿದ ರೇಣುಕಾಚಾರ್ಯ ಮೊದಲು ಈತನನ್ನು ಪಕ್ಷದಿಂದ ಕಿತ್ತು ಹಾಕಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಏಕವಚನದಲ್ಲಿಯೇ ಹರಿಹಾಯ್ದರು.

ಮಿಸ್ಟರ್ ಕುಮಾರಬಂಗಾರಪ್ಪ, ನೀನು ಮೊದಲು ಎಲ್ಲಿದ್ದೆ?, ಬಿಜೆಪಿಗೆ ಬರಲು ಎಷ್ಟು ಬಾರಿ ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಅವರ ಬಳಿ ಗೋಗರದೆ ಎಂಬುದು ಗೊತ್ತಿದೆ. ನೀನೊಬ್ಬ ಕ್ರಿಮಿಕೀಟ, ನಿನ್ನಂಥವನು ಎಲ್ಲೇ ಇದ್ದರೂ ಯಾವ ಪಕ್ಷಕ್ಕೂ ಒಳ್ಳೆಯದಲ್ಲ. ಯಡಿಯೂರಪ್ಪ ಅವರ ಕುಟುಂಬದ ಋಣದಲ್ಲಿ ಸೊರಬದಲ್ಲಿ ಗೆದ್ದು ಅಧಿಕಾರ ಅನುಭವಿಸಿದ್ದ ನೀನು ಅವರ ವಿರುದ್ಧವೇ ಷಡ್ಯಂತ್ರ ಮಾಡುತ್ತಿದ್ದೀಯ. ಮೊದಲು ನಿನ್ನನ್ನು ಪಕ್ಷದಿಂದ ಕಿತ್ತು ಹಾಕಬೇಕೆಂದು ಹೇಳಿದರು.

ಮೂರ್ನಾಲ್ಕು ಜನ ಸೇರಿಕೊಂಡು ದೆಹಲಿಗೆ ಹೋದರೆ ನಿಮ ಜೊತೆಗೆ ಎಲ್ಲರೂ ಇದ್ದಾರೆ ಎಂಬುದನ್ನು ಬಿಂಬಿಸಲು ಹೊರಟಿದ್ದೀರಿ. ರಾಷ್ಟ್ರೀಯ ನಾಯಕರನ್ನು ಎಷ್ಟು ಬಾರಿ ಭೇಟಿಯಾಗಿ ದೂರು ಕೊಡುತ್ತೀರಿ? ನಿಮನ್ನು ಜನರು ನೋಡಿ ಕಾಮಿಡಿ ಪೀಸ್ ಎಂದು ನಗುತ್ತಿದ್ದಾರೆ. ನಿಮ ಹಣೆಬರಹಕ್ಕೆ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಮತ್ತಿತರ ನಾಯಕರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ನಿಮಗೆ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ಸಮಯ ಸಿಕ್ಕಿಲ್ಲ. ನಾವು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ರಾಜ್ಯದ ವಸ್ತುಸ್ಥಿತಿ ವಿವರಿಸಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದೀರಿ. ಹಾಗಾದರೆ ಫೋಟೊ ಏಕೆ ಬಿಡುಗಡೆ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಮಿಸ್ಟರ್ ಕುಮಾರ್ ಬಂಗಾರಪ್ಪ, ನಿಮ ತಂದೆ ಬಂಗಾರಪ್ಪನವರು ಬಿಜೆಪಿಗೆ ಬಂದಾಗ ನೀನು ಬಿಜೆಪಿಗೆ ಬಂದಿರಲಿಲ್ಲ.

ಬಿಜೆಪಿಯ ಸೊರಬ ಕಾರ್ಯಕ್ರಮಕ್ಕೆ ನೀನು ಬಂದಿಲ್ಲ. ಮೂಲ ಬಿಜೆಪಿಯವರನ್ನ ನೀನು ಮರೆತಿದ್ದಕ್ಕೆ ನೀನು ಸೋಲಬೇಕಾಯ್ತು. 2023ರ ಚುನಾವಣೆ ಬಳಿಕ ಕ್ಷೇತ್ರ ಮರೆತಿದ್ದಾರೆ. ಸೋತ ಮೇಲೆ ಕಾಂಗ್ರೆಸ್ ಸೇರುವ ಪ್ರಯತ್ನ ಮಾಡಿದ್ರಿ. ಸಹೋದರ ಮಧು ಸೇರಿಸಿಕೊಳ್ಳಬಾರದೆಂದು ಅಡ್ಡಗಾಲಾದ್ರಿ. ಈಗ ನ್ಯಾಷನಲ್ ಲೀಡರ್ ಆಗ್ಬೇಕು ಎಂದುಕೊಂಡಿದ್ದೀಯಾ? ಬಿಜೆಪಿ ಯಾವ ಹೋರಾಟಕ್ಕೂ ನೀನು ಬಂದಿಲ್ಲ, ಕಾಂಗ್ರೆಸ್ ವಿರುದ್ಧ ನಿಮ ಹೋರಾಟ ಇರಬೇಕಿತ್ತು. ಮಿಸ್ಟರ್ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರಲು ಯತ್ನಿಸಿರಲಿಲ್ವಾ? ಎಂದು ಕುಮಾರ್ ಬಂಗಾರಪ್ಪ ವಿರುದ್ಧ ರೇಣುಕಾಚಾರ್ಯ ವಾಗ್ಧಾಳಿ ನಡೆಸಿದರು.

ನಾವು ಸೈಲೆಂಟ್ ಆಗಿದ್ದೆವು. ಯಡಿಯೂರಪ್ಪ ವಿಜಯೇಂದ್ರ ಮಾತಾಡಬಾರದು ಎಂದಿದ್ದಾರೆ. ತುರ್ತಾಗಿ ನಾವು 12 ಜನ ಸೇರಿದ್ದೇವೆ. ಇವರು ಕಾಮಿಡಿ ಪೀಸ್ ಆಗಿದ್ದಾರೆ. ಮಾಧ್ಯಮದಲ್ಲಿ ಸ್ಟೋರಿನ ಪ್ಲಾಂಟ್ ಮಾಡಿಸ್ತಾರೆ, ನಡ್ಡಾ ಭೇಟಿಯಾದೆವು, ಆದ್ರೆ ಅವರು ಯಾವುದೇ ಫೋಟೋ ಬೇಡ ಎಂದರು ಎನ್ನುತ್ತಾರೆ. ಅವರು ಯಾರನ್ನೂ ಭೇಟಿಯೇ ಆಗಿಲ್ಲ ಎಂದರು.

ಮಿಸ್ಟರ್ ಬಿಪಿ ಹರೀಶ್, ನೀವು ಶಾಸಕರಾಗಲು ಯಡಿಯೂರಪ್ಪ ಕಾರಣ ಎಂಬುದನ್ನು ಮರೆಯಬೇಡಿ. ಹರಿಹರದಲ್ಲಿ ನಿನ್ನ ಯೋಗ್ಯತೆ ಏನೆಂಬುದು ಗೊತ್ತಿದೆ. ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ ನೀನು ಸಿದ್ಧಾಂತದ ಬಗ್ಗೆ ಮಾತನಾಡುತ್ತೀಯ. ಡಿ ಫಾರಂ ಪಡೆಯಲು ಯಡಿಯೂರಪ್ಪನವರ ಮನೆಗೆ ಎಷ್ಟು ಬಾರಿ ಬಂದಿದ್ದೆ ಎಂಬುದನ್ನು ಮರೆಯಬೇಡಿ. ನೀವು ತಿಪ್ಪರಲಾಗ ಹಾಕಿದರೂ ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರನ್ನು ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";