ಬೆಂಗಳೂರು: ವಿಧಾನಸಪರಿಷತ್ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನಗಳನ್ನು ಬಿಜೆಪಿಯು ಭಗವಂತನ ಆಶೀರ್ವಾದ ಮತ್ತು ಜನಾಶೀರ್ವಾದದಿಂದ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸದಿಂದ ನುಡಿದರು. ರಾಯಚೂರಿನಲ್ಲಿ ಇಂದು ಜನಸ್ವರಾಜ್ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕರ್ನಾಟಕವು ಕಾಂಗ್ರೆಸ್ ಮುಕ್ತವಾಗುವತ್ತ ನಡೆದಿದೆ. ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಎಲ್ಲೆಡೆ ಗೆಲ್ಲುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ 150 ಶಾಸಕ ಸ್ಥಾನ ಗೆದ್ದು ಮತ್ತೆ ಅಧಿಕಾರ ಮಾಡಲಿದೆ ಎಂದು ತಿಳಿಸಿದರು. ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯ ಮಾಡುವ ಮಹಾತ್ಮ ಗಾಂಧಿ ಅವರ ಪರಿಕಲ್ಪನೆಯನ್ನು ನರೇಂದ್ರ ಮೋದಿಯವರು ಸಾಕಾರಗೊಳಿಸಿದರು. ಕಾಂಗ್ರೆಸ್‍ನವರು ಕೇವಲ ವ್ಯಾಪಾರ ಮಾಡಿದರು. ಭ್ರಷ್ಟಾಚಾರಕ್ಕೆ ಒತ್ತು ಕೊಟ್ಟರು. ಆದರೆ, ಪ್ರತಿ ಪಂಚಾಯಿತಿಗೂ 1 ಕೋಟಿಗೂ ಹೆಚ್ಚು ಅನುದಾವನ್ನು ಮೋದಿಯವರು ನೀಡಿದ್ದಾರೆ ಎಂದು ತಿಳಿಸಿದರು.
ಮನಮೋಹನ್ ಸಿಂಗ್ ಅವರು ಯುಪಿಎ ಕಾಲಘಟ್ಟದಲ್ಲಿ ನರೇಗಾ ಯೋಜನೆ ಜಾರಿಗೊಳಿಸಿದರು. ಆದರೆ, ಅದು ನೇರವಾಗಿ ಪಂಚಾಯಿತಿಗೆ ಅನುದಾನ ನೀಡಲಿಲ್ಲ. ಮನೆ ಮನೆಗೆ ನೀರಿನ ಟ್ಯಾಪ್ ಸಂಪರ್ಕವನ್ನು ನರೇಂದ್ರ ಮೋದಿಯವರು ನೀಡಿದ್ದಾರೆ ಎಂದು ವಿವರಿಸಿದರು.

ಬಿಜೆಪಿಯು ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸ್ವರ್ಣ ಗ್ರಾಮ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವಧನದ ಮೂಲಕ ಸ್ವಾಭಿಮಾನದ ಬದುಕನ್ನು ಯಡಿಯೂರಪ್ಪ ಅವರ ಸರಕಾರ ನೀಡಿತು. ಗ್ರಾಮ ಪಂಚಾಯಿತಿ ಸದಸ್ಯರ ಪರವಾಗಿ ಧ್ವನಿ ಎತ್ತುವ ಬಿಜೆಪಿ ಅಭ್ಯರ್ಥಿಗಳಿಗೇ ನಿಮ್ಮ ಮತ ಚಲಾಯಿಸಿ ಎಂದು ಮನವಿ ಮಾಡಿದರು. ಕೇರಳ ಮಾದರಿಯ ಪಂಚಾಯಿತಿ ವ್ಯವಸ್ಥೆಯನ್ನು ಇಲ್ಲಿಯೂ ಅನುಷ್ಠಾನಕ್ಕೆ ತರಲು ಚಿಂತಿಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 750 ಗ್ರಾಮಗಳನ್ನು ಅಮೃತ ಯೋಜನೆಯಡಿ ತರುತ್ತಿದ್ದಾರೆ.

ಮುಂದಿನ ಬಜೆಟ್‍ನಲ್ಲಿ 5,500 ಗ್ರಾಮ ಪಂಚಾಯಿತಿಗಳನ್ನು ಇದೇ ಯೋಜನೆಯಡಿ ತರಲಾಗುವುದು. ಪಂಚಾಯಿತಿ ಸದಸ್ಯರನ್ನು ಸ್ವಾಭಿಮಾನಿಗಳನ್ನಾಗಿ ಮಾಡಲು 10 ಸಾವಿರ ರೂಪಾಯಿ ಗೌರವಧನ ನೀಡಲು ಯೋಜಿಸಲಾಗಿದೆ ಎಂದು ತಿಳಿಸಿದರು. ಪಂಚಾಯಿತಿ ಅಧ್ಯಕ್ಷರಿಗೆ ಕೇರಳದ ಮಾದರಿಯಲ್ಲಿ ವಾಹನ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ ಎಂದರು. ಜನಸ್ವರಾಜ್ ಯಾತ್ರೆಗೆ ಅಭೂತಪೂರ್ವ ಬೆಂಬಲ ಲಭಿಸಿದೆ. ವರುಣದೇವನ ಆಶೀರ್ವಾದ ಈ ಯಾತ್ರೆಗೆ ಲಭಿಸಿದೆ ಎಂದು ಅವರು ತಿಳಿಸಿದರು. ವಿಧಾನಪರಿಷತ್‍ನಲ್ಲಿ ಬಿಜೆಪಿ ಬಲ ಹೆಚ್ಚಾಗಬೇಕಿದೆ. ಬಹುಮತವೂ ಸಿಕ್ಕಿ ನಿಮ್ಮೆಲ್ಲರ ಸಮಸ್ಯೆಗಳೂ ಪರಿಹಾರವಾಗಲಿದೆ ಎಂದರು.
ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಸಚಿವರಾದ ಹಾಲಪ್ಪ ಆಚಾರ್, ಪಕ್ಷದ ಜಿಲ್ಲಾಧ್ಯಕ್ಷರಾದ ರಮಾನಂದ ಯಾದವ್, ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ, ರಾಜಾ ಅಮರೇಶ್ ನಾಯಕ್, ಶಾಸಕರು, ಮಾಜಿ ಶಾಸಕರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.
