ಬಳ್ಳಾರಿ: ಬಿಜೆಪಿ ಪಕ್ಷದಂತೆ ಕಾಂಗ್ರೇಸ್ ಪಕ್ಷವೂ ಸಹ ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನದಲ್ಲಿ ರೂ. 1 ಸಾವಿರ ಕೋಟಿಯನ್ನು ಕಲಂ 70 ಅನ್ವಯ ಬೇರೆ ಯೋಜನೆಗಳಿಗೆ ಬಳಸುತ್ತಾ ಪರಿಶಿಷ್ಟ ಜಾತಿ/ವರ್ಗದವರಿಗೆ ವಂಚನೆ ಮಾಡಿರುವುದು ಖಂಡನೀಯ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹ ವ್ಯಕ್ತಪಡಿಸಿದರು.
ನಗರದ ಪತ್ರಿಕಾಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023-24 ಸಾಲಿನಲ್ಲಿ ನೂತನವಾಗಿ ಆಯ್ಕೆಯಾದ ಕಾಂಗ್ರೇಸ್ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು 34,429 ಕೋಟಿ, ಎ.ಪಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ಅನುದಾನ ಘೋಷಣಿ ಮಾಡಿ ಈ ಸಮಾಜಕ್ಕೆ ಭರವಸೆ ಮೂಡಿಸಿದರು. ಎಸ್‌ಸಿಪಿ/ ಟಿಎಸ್‌ಪಿ ಕಾಯ್ದೆಯಡಿಯಲ್ಲಿ ಈ ಹಣವನ್ನು ಬೇರೆ ಬಾಬ್ತುಗಳಿಗೆ ಬಳಸುವ 7ಡಿ ಕಲಂ ಅನ್ನು ರದ್ದುಪಡಿಸಬೇಕೆಂದು ಬಹುಜನ ಸಮಾಜ ಪಾರ್ಟಿ ಮತ್ತು ಎಲ್ಲಾ ಸಾಮಾಜಿಕ ಸಂಘಟನೆಗಳು ಹಲವು ವರ್ಷಗಳಿಂದ ಹೋರಾಡುತ್ತಾ ಬಂದಿವೆ. ಈ 7ಡಿ ಕಲಂ ಅನ್ನು ಈ ಹಿಂದಿನ ಕಾಂಗ್ರೇಸ್ ಸರ್ಕಾರವೇ ಕಾಯ್ದೆಯಲ್ಲಿ ಅಳವಡಿಸಿತ್ತು, ಈ 7ಡಿ ಕಾಲಂ ಅನ್ನು ಬಳಸಿಕೊಂಡು ಎಸ್.ಸಿ.ಪಿ/ಟಿಎಸ್‌ಪಿ ಅನುದಾನದ ಸಾವಿರಾರು ಕೋಟಿಗಳ ಮೊತ್ತವನ್ನು ಬೇರೆ ಯೋಜನೆಗಳಿಗೆ ದುರ್ಬಳಕೆ ಆಗಿ ಪರಿಶಿಷ್ಠ ಜಾತಿ/ವರ್ಗದವರಿಗೆ, ಬಹಳ ವಂಚನೆ ಆಗುತಿತ್ತು, ಕಾಂಗ್ರೇಸ್ ಪಕ್ಷ 2023ರ ಚುನಾವಣಾ ಪ್ರಕಟಣೆಯಲ್ಲಿ ಕಲಂಅನ್ನು ರದ್ದುಮಾಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಮುಖ್ಯಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿಯೂ ಸಹ 7ಡಿ ಅನ್ನು ರದ್ದುಮಾಡುವ ಘೋಷಣೆ ಮಾಡಿದ್ದರು.
ಆದರೆ, ಅಧಿಕಾರಕ್ಕೆ ಬಂದ ಕಾಂಗ್ರೇಸ್ ವಾಗ್ದಾನದಿಂದ ಹಿಂದೆ ಸರಿದಿದೆ. ಪರಿಶಿಷ್ಟ ಜಾತಿ/ವರ್ಗಕ್ಕೆ ವಂಚನೆ ಮಾಡುವ ತನ್ನ ಆಂತರ್ಯದ ಸ್ವಭಾವವನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ/ವರ್ಗಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅನುದಾನದ ಪೈಕಿ 11 ಸಾವಿರ ಕೋಟಿಯನ್ನು ಬೇರೆ ಬಾಬ್ತುಗಳಿಗೆ ಬಳಕೆ ಮಾಡಿಕೊಳ್ಳಲು ಮನಸ್ಸಿಲ್ಲದಿದ್ದರೂ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಒತ್ತಡಕ್ಕೆ ಮಣಿದು ಅನುಮತಿ ನೀಡುವ ಮೂಲಕ 75 ಕಲಂ ಅನ್ನು ಮುಂದುವರಿಸುವ ತಮ್ಮ ಪರಿಶಿಷ್ಟ ಜಾತಿ/ವರ್ಗದ ವಿರೋಧಿ ನೀತಿಯನ್ನು ಸಾಭೀತುಮಾಡಿದ್ದಾರೆ. ಇದನ್ನು ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಎಸ್.ಸಿ.ಪಿ/ಟಿಎಸ್‌ಪಿ ತಂದ ಬಾಕಿ 11 ಸಾವಿರ ಕೋಟಿಯನ್ನು ಪರಿಶಿಷ್ಟ ಜಾತಿ/ವರ್ಗದ ಕುಟುಂಬಗಳಿಗೆ ಬಳಸಿ ತಲಾ 5 ಲಕ್ಷ ರೂಪಾಯಿಗಳಂತೆ ಮನೆ ಕಟ್ಟಕೊಳ್ಳಲು ಅನುದಾನ ನೀಡಿದ್ದರೆ 2,20,000 ಮನೆಗಳನ್ನು ಕಟ್ಟಬಹುದಿತ್ತು. ಇದರಿಂದ ಸುಮಾರು 11 ಲಕ್ಷ ಜನರಿಗೆ ವಸತಿ ಸಮಸ್ಯೆ ಪರಿಹಾರವಾಗುತಿತ್ತು ಅಥವಾ ಪರಿಶಿಷ್ಟ ಜಾತಿ/ವರ್ಗದ ನಿರುದ್ಯೋಗಿಗೆ ಉದ್ದಿಮೆ ನಡೆಸಲು ತಲಾ 5 ಲಕ್ಷ ರೂಪಾಯಿ ಬಂಡವಾಳ ನೀಡಿದ್ದರೆ ಸುಮಾರು 2 ಲಕ್ಷ ಕುಟುಂಬಗಳು ತಮ್ಮ ಕಾಲ ಮೇಲೆ ತಾವು ನಿಲ್ಲಬಹುದಾದ ಅವಕಾಶವಿತ್ತು, ಅಥವಾ ಸಾವಿರಾರು ಕುಟುಂಬಗಳಿಗೆ ಭೂಮಿ ಕೊಳ್ಳಲು ಅನುದಾನ ನೀಡಬಹುದಾಗಿತ್ತು. ಆದರೆ, ಪರಿಶಿಷ್ಟ ಜಾತಿ/ವರ್ಗದವರನ್ನು ಮೊದಲಿನಿಂದಲೂ ಯಾಮಾರಿಸಿಕೊಂಡು ಬಂದಿರುವ ಕಾಂಗ್ರೇಸ್ ಪಕ್ಷ ಈ ಬಾರಿಯೂ ಪರಿಶಿಷ್ಟ ಜಾತಿ/ವರ್ಗದವರಿಗೆ ಘೋರ ಅನ್ಯಾಯ ಮಾಡಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅನುದಾನದ ಸುಮಾರು 9 ಸಾವಿರ ಕೋಟಿಯನ್ನು ಹಿಂದಿನ ಬಿಜೆಪಿ ಸರ್ಕಾರ ಬೇರೆ ಬಾಬ್ತುಗಳಿಗೆ ವರ್ಗಾವಣೆ ಮಾಡಿ ಎಸ್‌ಸಿ/ಎಸ್ಟಿಗಳಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಒಟ್ಟಾರೆಯಾಗಿ ಬಿಜೆಪಿ ಮತ್ತು ಕಾಂಗ್ರೇಸ್ ಪಾರ್ಟಿಗಳು ಪರಿಶಿಷ್ಟ ಜಾತಿ/ವರ್ಗಗಳನ್ನು ವಂಚಿಸುವಲ್ಲಿ ಒಂದೇ ಮನೋಭಾವನೆಯನ್ನು ಹೊಂದಿರುವ ಭಕ್ತಿಗಳಾಗಿವೆ. ಇದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಮಾನವಾ ಉದ್ದೀರಾಂ ಸಾಹೇಬರು ಬಾಬಾಸಾಹೇಬರ ಸಿದ್ಧಾಂತದ ಅಡಿಯಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಕಟ್ಟಿಕೊಟ್ಟಿದ್ದಾರೆ. ಇಂದು ಅಕ್ಕ ಮಾಯಾವತಿಯವರ ಸಮರ್ಥ ನಾಯಕತ್ವದಲ್ಲಿ ಬಿಎಸ್‌ಪಿ ಆಂದೋಲನ ದೇಶದಾದ್ಯಂತ ನಡೆಯುತ್ತಿದೆ. ಬಹುಜನ ಸಮಾಜ ಪಾರ್ಟಿ ಮಾತ್ರ ಬಹುಜನರ ಹಿತವನ್ನು ಕಾಯುವ ಏಕೈಕ ಪಾರ್ಟಿ ಎನ್ನುವುದನ್ನು ಜನತ ಮನಗಾಣಬೇಕಾಗಿದೆ ಎಂದು ತಿಳಿಸಿದರು.
ಕಾಂಗ್ರೇಸ್ ಸರ್ಕಾರವು ಕೂಡಲೇ 7ಡಿ ಕಲಂ ಅನ್ನು ರದ್ದುಪಡಿಸಿ 11 ಸಾವಿರ ಕೋಟಿ ಹಣವನ್ನು ಯಾವುದೇ ಬಾಬ್ತುಗಳಿಗೆ ವರ್ಗಾವಣೆ ಮಾಡದೆ ವಾರ್ಷಿಕ ಬಜೆಟ್‌ನಲ್ಲಿ ಮೀಸಲಿಟ್ಟ 34 ಸಾವಿರ ಕೋಟಿ ಅನುದಾನವನ್ನು ಮಾಸಿಕ ಕಂತುಗಳಲ್ಲಿ ಪರಿಶಿಷ್ಟ ಜಾತಿ/ವರ್ಗದ ಕುಟುಂಬಗಳು ವೈಯಕ್ತಿಕವಾಗಿ ಅಭಿವೃದ್ಧಿಯಾಗಲು ಪೂರಕವಾದ ಯೋಜನೆಯನ್ನು ರೂಪಿಸಬೇಕೆಂದು ಬಹುಜನ ಸಮಾಜ ಪಾರ್ಟಿ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಎಸ್‍ಪಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.