ಲಂಚ: ಬುಡಾ ಆಯುಕ್ತ ಸೇರಿ 6 ಮಂದಿ ಲೋಕಾಯುಕ್ತ ಬಲೆಗೆ

ಬಳ್ಳಾರಿ: ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರಿಂದ ₹5ಲಕ್ಷ  ಲಂಚ ಸ್ವೀಕರಿಸುತ್ತಿದ್ದ ‘ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ’(ಬುಡಾ)ದ ಆಯುಕ್ತ ರಮೇಶ್‌ ವಟಗಲ್‌ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಇವರ ಜತೆಗೆ, ಇನ್ನೂ ಐದು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೂ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ದರಾಜು ಸಿ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

 

20 ಎಕರೆ ಭೂಮಿ ಅಭಿವೃದ್ಧಿಗೆ ತಾತ್ಕಾಲಿಕ ಅನುಮೋದನೆ ನೀಡಲು ಬಳ್ಳಾರಿಯ ರಿಯಲ್‌ ಎಸ್ಟೇಟ್‌ ಉದ್ಯಮಿ ಈರೇಶಿ ಎಂಬುವರ ಬಳಿ ಬುಡಾದ ಆಯುಕ್ತ ರಮೇಶ್‌ ವಟಗಲ್‌, ಅಧಿಕಾರಿ ಮತ್ತು ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಈರೇಶಿ ಲೋಕಾಯುಕ್ತ ಪೊಲೀಸರಿಗೆ ಬುಧವಾರ ದೂರು ನೀಡಿದ್ದರು. ಈರೇಶಿ ದೂರಿನ ಆಧಾರದಲ್ಲಿ ಗುರುವಾರ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ₹5ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ರಮೇಶ್‌ ವಟಗಲ್‌ ಅವರನ್ನು ಬಂಧಿಸಿದರು.

ಜತೆಗೆ ₹6 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ನಗರ ಯೋಜನಾ ವಿಭಾಗದ ಸದಸ್ಯ ಕಲ್ಲಿನಾಥ, ₹3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಸಹಾಯಕ ನಗರ ಯೋಜನಾಧಿಕಾರಿ ಯಶಸ್ವಿನಿ, ₹10 ಸಾವಿರ ಲಂಚ ಸ್ವೀಕರಿಸಿದ ವ್ಯವಸ್ಥಾಪಕ ನಾರಾಯಣ, ₹60 ಸಾವಿರಕ್ಕೆ ಬೇಡಿಕೆ ಇಟ್ಟು ₹20 ಸಾವಿರ ಹಣವನ್ನು ಫೋನ್‌ಪೇ ಮೂಲಕ ಪಡೆದ ಕೇಸ್‌ ವರ್ಕರ್‌ ಶಂಕರ್‌, ಫೋನ್‌ ಪೇ ಮೂಲಕ ₹20 ಸಾವಿರ ಸ್ವೀಕರಿಸಿದ ಕಿರಿಯ ಎಂಜಿನಿಯರ್‌ ಖಾಜಿ ಖಾಜಾ ಹುಸೇನ್‌ ಅವರನ್ನೂ ಬಂಧಿಸಲಾಗಿದೆ ಎಂದು ಅವರು ಹೇಳಿದರು. 

 

ಬಂಧಿತರಿಂದ ಆರು ಜನರಿಂದಲೂ ಲಂಚದ ಹಣವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಎಸ್‌ಪಿ ಸಿದ್ದರಾಜು ತಿಳಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top