ಕೋವಿಡ್‌-19 ನಿಂದ ಮೃತ ಪಟ್ಟ ಬಿಪಿಎಲ್ ಕುಟುಂಬಕ್ಕೆ ಸರಕಾರದಿಂದ 1ಲಕ್ಷ ರೂ. ಪರಿಹಾರ

ದೇವನಹಳ್ಳಿ: ಕೋವಿಡ್-19 ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಕುಟುಂಬಗಳು ಮನೆಯ ಯಜಮಾನರನ್ನು ಮತ್ತು ಕುಟುಂಬದ ಸದಸ್ಯರನ್ನು ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟದ ಬದುಕು ನಡೆಸುವಂತೆ ಆಗಿದೆ. ಸರಕಾರದಿಂದ ಕೋವಿಡ್ ಸೋಂಕಿನಿಂದಾಗಿ ಮೃತ ಪಟ್ಟ ಕುಟುಂಬದ ಒಬ್ಬ ವ್ಯಕ್ತಿಗೆ ತಲಾ 1ಲಕ್ಷ ರೂ.ಗಳಂತೆ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಪೌರಾಡಳಿತ ಸಚಿವ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಆಡಿಟೋರಿಯಂ ಸಭಾಂಗಣದಲ್ಲಿ ಕೋವಿಡ್‌ನಿಂದ ಮೃತಪಟ್ಟಂತಹ ಕುಟುಂಬದ ಸಂತ್ರಸ್ತರಿಗೆ ಪರಿಹಾರದ ಚೆಕ್‌ಅನ್ನು ವಿತರಿಸಿ ಅವರು ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲೂಕುಗಳಲ್ಲಿ ಕೊರೊನಾ ಸೋಂಕು ತಗುಲಿ ಮೃತ ಪಟ್ಟಿರುವಂತಹ ಜಿಲ್ಲೆಯ 358 ಜನರು ಸಾವನ್ನಪ್ಪಿರುತ್ತಾರೆ. ಸುಮಾರು 3ಕೋಟಿ 70ಲಕ್ಷ ರೂ.ಗಳಷ್ಟು ಸರಕಾರದಿಂದ ಹಣವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಎಪಿಎಲ್ ಕಾರ್ಡು ಹೊಂದಿರುವ ಕುಟುಂಬದವರಲ್ಲಿ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದರೆ, ಸರಕಾರದ ಹಂತದಲ್ಲಿ ಅವರ ಕುಟುಂಬಗಳಿಗೂ ಧನ ಪರಿಹಾರದ ನೀಡುವಂತೆ ಚಳಿಗಾಲದ ಅಧಿವೇಶನದಲ್ಲಿ 10-15 ಮಂದಿ ಶಾಸಕರ ಸಮ್ಮೂಕದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಒತ್ತಾಯ ಮಾಡಲಾಗುತ್ತದೆ. ಇದೊಂದು ದುಃಖಭರಿತ ಕಾರ್ಯಕ್ರಮವಾಗಿದೆ. ಕೋವಿಡ್‌ನಿಂದಾಗಿ ಮೃತ ಪಟ್ಟಂತಹ ಎಲ್ಲಾ ಕುಟುಂಬದವರಿಗೂ ಭಗವಂತ ದುಃಖ ಭರಿಸುವ ಶಕ್ತಿ ನೀಡುವಂತಾಗಲೀ ಎಂದು ಪ್ರಾರ್ಥಿಸಿದರು.

ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಆಧಾರ್‌ಕಾರ್ಡು, ಫೋನ್‌ನಂಬರ್, ಏರು ಪೇರು ಇದ್ದಲ್ಲಿ ಅವರಿಗೂ ಸಹ ಮುಂದಿನ ದಿನಗಳಲ್ಲಿ ಪರಿಹಾರ ನೀಡುವಂತಾಗಬೇಕು. ಈಗಾಗಲೇ ಕೋವಿಡ್ ಮಹಾಮಾರಿಯಿಂದಾಗಿ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಚೇತರಿಕೆ ಕಾಣುವ ಮೊದಲೇ ಕೊವೀಡ್ ರೂಪಾಂತರಿ ಓಮಿಕ್ರಾನ್ ಎಂಬ ವೈರಸ್ ಒಕ್ಕರಿಸಿದೆ. ಇದು ಜಿಲ್ಲೆಗೆ ಬರದಂತೆ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿ ಸಮೀಪದಲ್ಲಿರುವುದರಿಂದ ತಾಲೂಕಿನ ಬಹಳಷ್ಟು ಜನರು ದುಡಿಮೆಗಾಗಿ ಅಲ್ಲಿಗೆ ಹೋಗಿ ಬರುತ್ತಿರುತ್ತಾರೆ. ಅವರ ಬಗ್ಗೆ ಮತ್ತು ಪ್ರಯಾಣಿಕರ ಮೇಲೆ ಹೆಚ್ಚಿನ ಆರೋಗ್ಯ ನಿರೀಕ್ಷೆಯನ್ನಿಡಬೇಕಾಗುತ್ತದೆ ಎಂದು ಹೇಳಿದರು.  ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಈಗಾಗಲೇ ಸುಮಾರು ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಆದರೆ, ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಸರಕಾರದಿಂದ ಪರಿಹಾರ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಎಪಿಎಲ್, ಬಿಪಿಎಲ್ ಮತ್ತು ಇತರೆ ಸಂತ್ರಸ್ತ ಕುಟುಂಬ ವರ್ಗದವರಿಗೂ ಸಹ ಸಮಾನವಾಗಿ ಸರಕಾರ ಪರಿಹಾರವನ್ನು ನೀಡಬೇಕು. ಮೃತ ಕುಟುಂಬಸ್ಥರ ಮನೆ ಬಾಗಿಲಿಗೆ ತೆರಳಿ ಪರಿಹಾರದ ಚೆಕ್ ಅನ್ನು ನೀಡಬೇಕಿತ್ತು. ಅವರನ್ನು ಇಲ್ಲಿಗೆ ಕರೆಸಿ ಕೊಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.  

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಕೋವಿಡ್ ಮೊದಲನೇ ಅಲೆ ಮತ್ತು ಎರಡನೇ ಅಲೆಯಿಂದಾಗಿ ಸಾಕಷ್ಟು ಜನರು ಸಾವಿಗೀಡಾಗಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯನ್ನು ಸಹ ಎದುರಿಸಿದ್ದೇವೆ. ಹಗಲುರಾತ್ರಿಯನ್ನದೆ ಕರ್ತವ್ಯ ನಿರ್ವಹಿಸಲಾಗುತ್ತಿತ್ತು. ಇದರ ಮಧ್ಯೆ ವೈರಸ್‌ನ ಅಟ್ಟಹಾಸದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ ಕೋವಿಡ್ ಸೋಂಕಿತರು ಜಿಲ್ಲೆಯಲ್ಲಿ 371 ಇದ್ದರು. 358 ಜನರಿಗೆ ಸರಕಾರದಿಂದ ಪರಿಹಾರದ ಚೆಕ್ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಂಕಷ್ಟದ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ಎಲ್ಲಾ ಜನಪ್ರತಿನಿಧಿಗಳು, ಶಾಸಕರು, ಸಮಾಜ ಸೇವಕರು ಕೋವಿಡ್ ನಿರ್ಮೂಲನೆಗಾಗಿ ಎಲ್ಲಾ ರೀತಿಯ ಸಹಕಾರ ನೀಡಿದ್ದರು ಎಂದು ಹೇಳಿದರು. ಈ ವೇಳೆ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಅಪರ ಜಿಲ್ಲಾಧಿಕಾರಿ ವಿಜಯ.ಇ.ರವಿಕುಮಾರ್, ಜಿಪಂ ಸಿಇಒ ರಮಣಪ್ಪ.ಕೆ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ತಹಶೀಲ್ದಾರ್‌ಗಳಾದ ಅನಿಲ್‌ಕುಮಾರ್ ಅರೋಲಿಕರ್, ಮಂಜುನಾಥ್, ಗೀತಾ, ಶಿವರಾಜ್, ಜಿಲ್ಲಾಡಳಿತ ಕಚೇರಿ ತಹಶೀಲ್ದಾರ್ ರಾಜುಲೋಚನಾ, ಕಚೇರಿ ಆರ್‌ಎಚ್‌ಎಂ ಗಂಗಾಧರ್, ಪುರಸಭಾಧ್ಯಕ್ಷೆ ರೇಖಾವೇಣುಗೋಪಾಲ್, ಪುರಸಭಾ ಮುಖ್ಯಾಧಿಕಾರಿ ನಾಗರಾಜ್, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. 

Leave a Comment

Your email address will not be published. Required fields are marked *

Translate »
Scroll to Top