ಬಿಪಿಎಲ್ ಕಾರ್ಡ್ ವಾರ್ಷಿಕ ಆದಾಯ ಮಿತಿ 3 ಲಕ್ಷಕ್ಕೆ ಏರಿಸಲು ಚಿಂತನೆ

Kannada Nadu
ಬಿಪಿಎಲ್ ಕಾರ್ಡ್ ವಾರ್ಷಿಕ ಆದಾಯ ಮಿತಿ 3 ಲಕ್ಷಕ್ಕೆ ಏರಿಸಲು ಚಿಂತನೆ

ಬೆಂಗಳೂರು: ಬಿಪಿಎಲ್‌ ಕಾರ್ಡ್‌ ಪಡೆಯಲು ನಿಗದಿಪಡಿಸಲಾಗಿರುವ ವಾರ್ಷಿಕ ಆದಾಯ ಮಿತಿಯನ್ನು 1.20 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ ಏರಿಸಲು ರಾಜ್ಯ ಸರ್ಕಾರ ಪರಿಶೀಲನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ವಿಧಾನಸಭೆಗಿಂದು ತಿಳಿಸಿದ್ದಾರೆ.

ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿ ಶಾಸಕ ಡಾ.ಸಿ.ಎನ್‌. ಅಶ್ವತ್ಥ‍್ ನಾರಾಯಣ್ ಪ್ರಶ್ನೆ ಕೇಳಿ, ಎಂಟು ವರ್ಷಗಳ ಹಿಂದೆ ಆದಾಯ ಮಿತಿಯನ್ನು ನಿಗದಿ ಮಾಡಲಾಗಿದೆ. ಆದರೆ ಈಗ ಆದಾಯದ ಪ್ರಮಾಣ ಏರಿಕೆಯಾಗಿದೆ. ಹಳೆಯ ಮಿತಿಯನ್ನೇ ಮುಂದುವರೆಸುವುದು ಅಗತ್ಯ ಇಲ್ಲ. ನಗರ ಪ್ರದೇಶ ಮತ್ತು ಗ್ರಾಮೀಣ ಭಾಗಕ್ಕೆ ಆದಾಯ ಮಿತಿಯನ್ನು ಏಕರೂಪವಾಗಿ ನಿಗದಿಪಡಿಸಿರುವುದು ಸರಿಯಲ್ಲ ಎಂದರು.

ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆಯ ಆಡಿ ಗ್ರಾಮೀಣ ಭಾಗದಲ್ಲಿ ಶೇ. 75ರಷ್ಟು, ನಗರ ಪ್ರದೇಶದಲ್ಲಿ ಶೇ. 50ರಷ್ಟು ಬಿಪಿಎಲ್‌ ಕಾರ್ಡ್‌ಗಳು ಇರಬಹುದು ಎಂದು ತಿಳಿಸಲಾಗಿದೆ. ನಗರ ಪ್ರದೇಶದಲ್ಲಿನ ಅರ್ಹರಿಗೆ ಆದ್ಯತಾ ಕಾರ್ಡು ಸಿಗುತ್ತಿಲ್ಲ ಎಂದು ವಿವರಿಸಿದರು.

ಮಹಾಲಕ್ಷಿ ಲೇಔಟ್‌ ಕ್ಷೇತ್ರದ ಶಾಸಕ ಎನ್‌.ಗೋಪಾಲಯ್ಯ, ಪ್ರತಿ ಕ್ಷೇತ್ರದಲ್ಲೂ ಆರರಿಂದ ಎಂಟು ಸಾವಿರ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಬಡವರಿಗೆ ಅನ್ಯಾಯವಾಗಿದೆ. ಮನೆಮನೆ ಸಮೀಕ್ಷೆ ನಡೆಸದ ಹೊರತು ಕಾರ್ಡ್‌ಗಳನ್ನು ರದ್ದುಗೊಳಿಸಬಾರದು ಎಂದು ಮನವಿ ಮಾಡಿದರು.

ಜೆಡಿಎಸ್ಸಿನ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶಬಾಬು, ಚಾಲಕ ವೃತ್ತಿ ನಡೆಸುವವರಿಗೆ ಕಡಿಮೆ ಆದಾಯ ಇರುತ್ತದೆ. ಅವರಿಗೂ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ. ಪಡಿತರ ಚೀಟಿಗಳು ಕೇವಲ ಆಹಾರ ಪಡೆಯಲು ಸೀಮಿತವಾಗಿಲ್ಲ, ಆರೋಗ್ಯ ಸೇವೆ ಸೇರಿದಂತೆ ವಿವಿಧ ಅಗತ್ಯಗಳಿಗೆ ಬಳಕೆಯಾಗುತ್ತಿವೆ ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಪರವಾಗಿ ಉತ್ತರ ನೀಡಿದ ಸಚಿವ ದಿನೇಶ್‌ ಗುಂಡೂರಾವ್‌, ವಾರ್ಷಿಕ ಆದಾಯ ಮಿತಿ ಪರಿಷ್ಕರಣೆಯಾಗಬೇಕು ಎಂಬ ಅಭಿಪ್ರಾಯ ಸರ್ಕಾರದ್ದು ಆಗಿದೆ. ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗ ನೀಡಿರುವ ವರದಿಯಲ್ಲಿ ಬಿಪಿಎಲ್‌ ಕಾರ್ಡುಗಳನ್ನು ಪಡೆಯಲು ವಾರ್ಷಿಕ ಆದಾಯ ನೀತಿಯನ್ನು ಮೂರು ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂಬ ಶಿಫಾರಸ್ಸು ಇದೆ. ಅದನ್ನು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದರು.

ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ರಾಜ್ಯದಲ್ಲಿ 1.09 ಕೋಟಿ ಬಿಪಿಎಲ್‌ ಕಾರ್ಡ್‌ಗಳು ಇರಬೇಕು. ಆದರೆ ನಮಲ್ಲಿ ಇನ್ನೂ 15-20 ಲಕ್ಷ ಹೆಚ್ಚಿವೆ. ಅವುಗಳಿಗೆ ರಾಜ್ಯ ಸರ್ಕಾರವೇ ಸ್ವಂತ ಖರ್ಚಿನಲ್ಲಿ ಪಡಿತರ ನೀಡುತ್ತಿದೆ ಎಂದು ಹೇಳಿದರು.

ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಆದ್ಯತೆ ಕಾರ್ಡ್‌ಗಳು ಎಂದು ಪರಿಗಣಿಸಲಾಗಿದೆ. ಇವುಗಳನ್ನು ಪಡೆಯಲು 2017ರಲ್ಲಿ ಮಾನದಂಡಗಳನ್ನು ರೂಪಿಸಲಾಗಿದೆ ಎಂದರು.

ಶಾಸಕರುಗಳು ಈ ವಿಚಾರವಾಗಿ ಪದೇಪದೇ ಪ್ರಶ್ನೆ ಕೇಳಿದಾಗ, ಇದೊಂದು ಗಂಭೀರ ವಿಚಾರವಾಗಿದೆ. ಸಂಬಂಧಪಟ್ಟ ಸಚಿವರಿಂದಲೇ ಉತ್ತರ ಕೊಡಿಸಿ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಸಲಹೆ ನೀಡಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";