BMTC ಎಂಡಿ, ನಿರ್ದೇಶಕರ ನಕಲಿ ಸಹಿ ಮಾಡಿ ಕೋಟ್ಯಂತರ ರೂ. ವಂಚನೆ; 7 ಅಧಿಕಾರಿಗಳ ವಿರುದ್ಧ FIR

ಬೆಂಗಳೂರು : ಬಿಎಂಟಿಸಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಸೇರಿ ಅಕ್ರಮ ನಡೆಸಿದ್ದಾರೆ ಎಂದು ಬಿಎಂಟಿಸಿ ಸಹಾಯಕ ಭದ್ರತಾ-ಜಾಗೃತಾಧಿಕಾರಿ ಸಿ.ಕೆ.ರಮ್ಯಾರವರು ದೂರು ದಾಖಲಿಸಿದ್ದು BMTC ವಾಣಿಜ್ಯ ವಿಭಾಗದ ಮುಖ್ಯ ಸಂಚಾರಕ ಸೇರಿ 6 ಜನರ ಮೇಲೆ ಬೆಂಗಳೂರಿನ ವಿಲ್ಸನ್ಗಾರ್ಡನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಬಿಎಂಟಿಸಿಯ ಟೆಂಡರ್‌ಗಳ ನೀಡಿಕೆ, ಫ್ಲ್ಯಾಟ್‌ಗಳು ಮತ್ತು ವಾಣಿಜ್ಯ ಮಳಿಗೆಗಳ ಹಂಚಿಕೆ, ಟೆಂಡರ್‌ ಅವಧಿ ವಿಸ್ತರಣೆಗೆ ಸಂಬಂಧಪಟ್ಟ ಕಡತಗಳಿಗೆ BMTC ಎಂಡಿ, ನಿರ್ದೇಶಕರ ಹೆಸರಿನಲ್ಲಿ ನಕಲು ಸಹಿ ಮಾಡಿ ಸಂಸ್ಥೆಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಎಂಟಿಸಿ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಸೂರ್ಯಸೇನ್, ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ರೇಜು, ಸಿ. ಶಿಖಾ, ಭದ್ರತಾ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಕೆ ಅರುಣ ಸಹಿ ನಕಲು ಮಾಡಲಾಗಿದೆ. ವಾಣಿಜ್ಯ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ ಮುಲ್ಕಾವನ್, ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ ಎಸ್ ಮುದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಬಿ.ಕೆ.ಮಮತಾ, ಸಹಾಯಕ ಸಂಚಾರ ಅಧೀಕ್ಷಕಿ ಟಿ. ಅನಿತಾ, ಸಂಚಾರ ನೀರೀಕ್ಷಕ ಸತೀಶ್, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ ವಿರುದ್ಧ ಪ್ರಕರಣ ದಾಖಲಾಗಿದೆ.

ಕಳೆದ ಮೂರು ವರ್ಷಗಳಿಂದ ನಿಗಮದ ಕೆಲ ಬಸ್ ನಿಲ್ದಾಣಗಳ ವಾಣಿಜ್ಯ ಸಂಕೀರ್ಣ, ಸ್ವಚ್ಛತಾ ನಿರ್ವಹವಣಾ ಗುತ್ತಿಗೆ ಸೇರಿ 4 ಟೆಂಡರ್ಗಳಲ್ಲಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಸೇರಿ ಅವ್ಯವಹಾರ ನಡೆಸಿದ್ದಾರೆ. ದಾಖಲೆಗಳಲ್ಲಿ ಬಿಎಂಟಿಸಿ ಅಧಿಕಾರಿಗಳ ಸಹಿ ನಕಲು ಮಾಡಿ ಬಿಎಂಟಿಸಿ ನಿಗಮಕ್ಕೆ ₹76.57 ಲಕ್ಷ ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಬಿಎಂಟಿಸಿ ಬಸ್‌ ನಿಲ್ದಾಣಗಳ ಆವರಣದಲ್ಲಿ ಜಾಹೀರಾತು ನೀಡಿಕೆ, ಬ್ಯಾಂಕ್‌ ಎಟಿಎಂ ಘಟಕಗಳ ಜಾಗದ ಪರವಾನಗಿ ಅವಧಿ ವಿಸ್ತರಣೆ, ಬಿಎಂಟಿಸಿಯ ಫ್ಲ್ಯಾಟ್‌ಗಳ ಹಂಚಿಕೆಗೆ ಸಂಬಂಧಪಟ್ಟ ಕಡತಗಳಿಗೆ ತಪ್ಪಿತಸ್ಥ ಅಧಿಕಾರಿಗಳು ಸಂಸ್ಥೆಯ ಹಾಲಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕರ ಹೆಸರಿನಲ್ಲಿ ನಕಲಿ ಸಹಿ ಮಾಡಿ ವಂಚಿಸಿದ್ದಾರೆ. ಇದರಿಂದ ಸಂಸ್ಥೆಗೆ ಸಾಕಷ್ಟು ವಂಚನೆಯಾಗಿದೆ. ಅಧಿಕಾರಿಗಳ ಅಕ್ರಮವು ಈಗಾಗಲೇ ಇಲಾಖಾ ತನಿಖೆಯಲ್ಲಿ ದೃಢಪಟ್ಟಿದೆ ಎಂದು ರಮ್ಯಾ ಅವರು ದೂರಿನಲ್ಲಿ ತಿಳಿಸಿದ್ದಾರೆ.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top