ದೇವನಹಳ್ಳಿ,ಮಾ,10 : ಕೆಲವರು ಹಣಕ್ಕಾಗಿ ರಕ್ತದಾನ ಮಾಡುತ್ತಾರೆ ಸ್ವಯಿಚ್ಚೆಯಿಂದ ರಕ್ತದಾನ ಮಾಡಿ ಸಂಕಷ್ಟದಲ್ಲಿರುವ ಪ್ರಾಣವನ್ನು ಉಳಿಸಲು ರಕ್ತದಾನ ಮಾಡಬೇಕು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಎಂದು ಸಮಾಜ ಸೇವಕ ಹಾಗೂ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್ ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಕೊಯಿರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮನಾಥಪುರ ಗ್ರಾಮದಲ್ಲಿ ಕೊಯಿರಾ ಗ್ರಾಮ ಪಂಚಾಯತಿ, ಕೆನರಾ ಬ್ಯಾಂಕ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಿ.ವಿಜಯ್ ಕುಮಾರ್ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತ ದಾನ ಶಿಬಿದಲ್ಲಿ ಮಾತನಾಡಿ, ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ,
ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯತತ್ಪರತೆ , ಜ್ಞಾಪನ ಶಕ್ತಿ ವೃದ್ಧಿಯಾಗುತ್ತದೆ , ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ, ಹೃದಯಾಘಾತವನ್ನು ಶೇ 80 ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ, ರಕ್ತದ ಒತ್ತಡ ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ ಆದ್ದರಿಂದ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬೇಕೆಂದು ತಿಳಿಸಿದರು. ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಿಜಯ್ ಕುಮಾರ್ ರವರ ಭಾವಚಿತ್ರಕ್ಕೆ ಮುಖಂಡರು ಗಣ್ಯರು ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಮುಖಂಡರು ಹಾಜರಿದ್ದರು.