ಕುಷ್ಟಗಿ: ಹಜರತ್ ಹೈದರಾಲಿ ನೌಜವಾನ್ ಕಮಿಟಿ ಕುಷ್ಟಗಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಮಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಪ್ರಯುಕ್ತ ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 90 ಜನರು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಈದ್ ಮಿಲಾದ್ ಹಬ್ಬಕ್ಕೆ ಮೆರಗು ನೀಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಶ್ರೀ ಮದ್ದಾನೇಶ್ವರ ಸ್ವಾಮಿಗಳು ವಹಿಸಿಕೊಂಡು ಮಾತನಾಡಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಶಾಂತಿಗಾಗಿ, ಸೌಹಾರ್ಧತೆಗಾಗಿ, ಸಾಮಾಜಿಕವಾಗಿ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಬಿತ್ತರಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಇವರು ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಈದ್ ಮಿಲಾದ್ ಪ್ರಯುಕ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ರಕ್ತ ಪ್ರತಿಯೊಬ್ಬ ವ್ಯಕ್ತಿಗೂ ಭಗವಂತನು ನೀಡಿದ ಒಂದು ಕೊಡುಗೆಯಾಗಿದೆ ಯಾವುದೇ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದಾಗ ಹಣ ಕೊಟ್ಟರು ಸಿಗದಿರುವ ವಸ್ತು ರಕ್ತ ಆದ್ದರಿಂದ ಉಚಿತ ರಕ್ತದಾನ ಶಿಬಿರದಿಂದ ಅನೇಕ ಜೀವಗಳನ್ನು ಉಳಿಸುವ ಜೀವಾಮೃತ ಎಂದು ಹೇಳಿದರೂ ತಪ್ಪಾಗಲಾರದು ಪ್ರತಿಯೊಬ್ಬರೂ ರಕ್ತದಾನದಲ್ಲಿ ಪಾಲ್ಗೊಂಡು ಒಂದು ಜೀವವನ್ನು ಉಳಿಸುವ ಶಕ್ತಿಯಾಗಬೇಕೆಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಮಹಮ್ಮದ್ ಅಫ್ತಾಬ್ ಮಮ್ಮದ್ ಪೈಗಂಬರ್ ಹಾಗೂ ಅವರು ಈ ಮನುಕುಲಕ್ಕೆ ನೀಡಿರುವ ಸಂದೇಶಗಳ ಕುರಿತು ಮಾತನಾಡಿದರು.
ಇದೇ ವೇಳೆ ವಿವಿಧ ಸಮುದಾಯಗಳಲ್ಲಿ ತೀರಿಹೋದವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಿಧಿವಿಧಾನಗಳಿಗೆ ಸಹಕರಿಸುವವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಜಿಕೆ ಹಿರೇಮಠ್ ದೊಡ್ಡ ಬಸವನಗೌಡ ಬಯ್ಯಾಪುರ, ಲಾಡಸಾಬ್ ಯಲಬುರ್ಗಿ, ತಾಜುದ್ದೀನ್ ದಳಪತಿ, ಮೈನುದ್ದಿನ್ ಮುಲ್ಲಾ, ಬಸವರಾಜ ಬುಡಕುಂಟಿ, ಮೈಬುಸಾಬ ಕಮ್ಮಾರ, ರಾಜು ಮಾಟಲದಿನ್ನಿ, ಸುಬಾನಿ ಆರ್.ಟಿ, ಸದ್ದಾಂ ಗುಮಗೇರಿ, ಹುಸೇನ, ರಸೂಲ, ಹಸನ ನದಾಫ ಸೇರಿದಂತೆ ಮತ್ತಿತರರು ಇದ್ದರು.