ಮುಂದೆ ಮುಖ್ಯಮಂತ್ರಿ ಆಗಬೇಕು ಎಂದು ಪಕ್ಷ ಸಂಘಟನೆ ಮಾಡುತ್ತಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

Kannada Nadu
ಮುಂದೆ ಮುಖ್ಯಮಂತ್ರಿ ಆಗಬೇಕು ಎಂದು ಪಕ್ಷ ಸಂಘಟನೆ ಮಾಡುತ್ತಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬೆಂಗಳೂರು: ನಾನು ಮುಂದೆ ಮುಖ್ಯಮಂತ್ರಿ ಆಗಬೇಕು ಎಂಬ ಆಲೋಚನೆಯನ್ನು ತಲೆಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಸುಧಾಕರ್ ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ, ಖಂಡಿತ ಆ ರೀತಿ ಮಾತನಾಡಬಾರದು ಎಂಬುದಾಗಿ ಮನವಿ ಮಾಡುತ್ತೇನೆ. ಲಕ್ಷಾಂತರ ಕಾರ್ಯಕರ್ತರು ದುಡಿಯುತ್ತಿದ್ದಾರೆ ಎಂದರು.
ಅವರನ್ನು ಭೇಟಿ ಮಾಡುತ್ತೇನೆ, ನಾನೂ ತಿದ್ದಿಕೊಳ್ಳುತ್ತೇನೆ, ನಾನು ರಾಜ್ಯಾಧ್ಯಕ್ಷ, ಮಂತ್ರಿ ಅಲ್ಲ, ಮನೆ, ಮಠ ಬಿಟ್ಟು ಕೆಲಸ ಮಾಡುತ್ತಿದ್ದೇನೆ, ಪಕ್ಷ ಅವರ ಸ್ವತ್ತೂ ಅಲ್ಲ, ನನ್ನ ಸ್ವತ್ತೂ ಅಲ್ಲ, ಲಕ್ಷಾಂತರ ಕಾರ್ಯಕರ್ತರು ಪಕ್ಷಕ್ಕೋಸ್ಕರ ದುಡಿಯುತ್ತಿದ್ದಾರೆ.

ಮಾಜಿ ಸಚಿವರಾಗಿ ಅವರಿಗೂ ಜವಾಬ್ದಾರಿಗಳಿವೆ, ಪಕ್ಷ ಏನು ತೀರ್ಮಾನ ಮಾಡಿದೆಯೋ ಅದಕ್ಕೆ ಕೇಂದ್ರದ ಸಮ್ಮತಿ ಇದೆ, ಇದರಲ್ಲಿ ಯಾರೂ ಮೂಗು ತೂರಿಸುವುದಿಲ್ಲ. ಈ ರೀತಿ ಹೇಳಿಕೆಗಳು ಪಕ್ಷಕ್ಕೂ ಗೌರವ ತರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ನನ್ನ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕೆಂದು ಹೇಳಿದ್ದಾರೆ, ತಪ್ಪುಗಳಿದ್ದರೆ ತಿದ್ದಿಕೊಳ್ಳಲು ನಾನು ಸಿದ್ಧ ಎಂದರು.
ಕೇಂದ್ರ ಘಟಕ ಎಲ್ಲವನ್ನೂ ಗಮನಿಸುತ್ತಿದೆ, ಡಾ.ಸುಧಾಕರ್ ಅವರ ಆಕ್ರೋಶಭರಿತ ಮಾತುಗಳನ್ನು ಕೇಳಿದ್ದೇನೆ, ನಮ್ಮನ್ನು ಸಮಾಧಿ ಮಾಡಲು ಹೊರಟಿದ್ದಾರೆ ಎಂಬ ಮಾತನ್ನು ಆಡಿದ್ದಾರೆ, ಇಂತಹ ಹೇಳಿಕೆಗಳನ್ನು ದಯವಿಟ್ಟು ಕೊಡಬೇಡಿ, ಅದು ನಿಮಗೂ, ನನಗೂ ಗೌರವ ತರುವುದಿಲ್ಲ ಎಂದರು.

ಚುನಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದನ್ನು ಗೌರವಾನ್ವಿತ ಹಿರಿಯರಿಗೆ ತಿಳಿಯಪಡಿಸಲು ಇಚ್ಛಿಸುತ್ತೇನೆ, ರಾಜ್ಯಾಧ್ಯಕ್ಷನಾಗಿ ಜಿಲ್ಲಾ ಚುನಾವಣೆಗೆ ಅಭಿಪ್ರಾಯ ಕೊಟ್ಟಿಲ್ಲ, ಕೊಡುವುದಕ್ಕೆ ಅವಕಾಶವೂ ಇಲ್ಲ. ಪಕ್ಷದ ಕೇಂದ್ರ ಘಟಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ಚುನಾವಣಾ ಜವಾಬ್ದಾರಿ ಕೊಟ್ಟಿದೆ, 13 ಜನ ವೀಕ್ಷಕರನ್ನೂ ನೇಮಿಸಿದೆ, ಪ್ರತಿಯೊಬ್ಬ ವೀಕ್ಷಕರಿಗೂ ತಲಾ ಮೂರು ಜಿಲ್ಲೆಗಳ ಜವಾಬ್ದಾರಿ ನೀಡಲಾಗಿತ್ತು ಎಂದು ತಿಳಿಸಿದರು.
ಪ್ರತಿ ಜಿಲ್ಲೆಗೂ ಚುನಾವಣಾಧಿಕಾರಿ, ರಿಟರ್ನಿಂಗ್ ಆಫೀಸರ್, ಕೋ-ರಿಟರ್ನಿಂಗ್ ಆಫೀಸರ್ ನೇಮಕಾತಿ ಆಗಿದೆ, ಇವರ ಸಮಕ್ಷಮದಲ್ಲಿ ಆಯಾ ಜಿಲ್ಲೆಗಳಲ್ಲಿ ಎಲ್ಲ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೂರು ಹೆಸರುಗಳನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಜಿಲ್ಲಾ ತಂಡದಿಂದ ಕಳುಹಿಸಿದ 3 ಹೆಸರುಗಳನ್ನು ಹೈಕಮಾಂಡ್‌ಗೆ ಕಳುಹಿಸಿಕೊಟ್ಟು ಅಲ್ಲಿ ಅಂತಿಮ ತೀರ್ಮಾನದ ಬಳಿಕ ಚುನಾವಣಾ ಪ್ರಕ್ರಿಯೆ ನಡೆದಿದೆ, ಅಧ್ಯಕ್ಷರ ಹೆಸರುಗಳ ಘೋಷಣೆಯಾಗಿದೆ, ಈ ಪ್ರಕ್ರಿಯೆಯಲ್ಲಿ ನನ್ನ ಪಾತ್ರ ಶೂನ್ಯ.

ಪಕ್ಷದ ರಾಜ್ಯಾಧ್ಯಕ್ಷನಾಗಿ ನನ್ನ ಜಿಲ್ಲೆ ಬಗ್ಗೆ ಅಭಿಪ್ರಾಯ ಕೊಡಬಹುದೇ ಹೊರತು ಬೇರೆ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಭಿಪ್ರಾಯ ಕೊಡುವ ಅಧಿಕಾರ ನನಗೂ ಇಲ್ಲ ಎಂದರು.ಸುಧಾಕರ್ ಸೇರಿದಂತೆ ಯಾರನ್ನೂ ದೂಷಿಸುವುದಿಲ್ಲ, ಚುನಾವಣಾ ಪ್ರಕ್ರಿಯೆಯ ಬಗ್ಗೆ ಅವರಲ್ಲಿ ಗೊಂದಲವಿದೆ, ಇಡೀ ದೇಶದಲ್ಲಿ ಪಕ್ಷದ ಸಂಘಟನಾತ್ಮಕ ಚುನಾವಣೆ ಇದೇ ರೀತಿಯಲ್ಲಿ ನಡೆಯುತ್ತಿದೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಹಾಗೆಯೇ ನಡೆದಿದೆ, ಹೊಸದಾಗಿ ಯಾವುದೇ ಪ್ರಕ್ರಿಯೆ ಮಾಡಲು ನನಗೆ ಅಧಿಕಾರವಿಲ್ಲ.

ಅವರ ಜಿಲ್ಲೆಯಲ್ಲಿ ಆಯ್ಕೆಯಾದವರೂ ಪಕ್ಷದ ಒಬ್ಬ ಕಾರ್ಯಕರ್ತ, ಅಲ್ಲದೆ, ಡಾ.ಸುಧಾಕರ್ ಸಂಬಂಧಿ, ಚುನಾವಣಾ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲಿ, ಅವರು ಏನೇ ಟೀಕೆ ಮಾಡಿದರೂ ನಾನು ಟೀಕಿಸುವುದಿಲ್ಲ. ಚಿಕ್ಕಬಳ್ಳಾಪುರದಲ್ಲಿ ರಾಮಚಂದ್ರ ಸಹಾ ಜಿಲ್ಲಾಧ್ಯಕ್ಷ ಸ್ಥಾನ ಅಪೇಕ್ಷಿತರು, ಚುನಾವಣಾ ಪ್ರಕ್ರಿಯೆಯನ್ನು ಅವರೂ ಗೌರವಿಸಿದ್ದಾರೆ, ಸುಧಾಕರ್ ತಪ್ಪು ತಿಳಿದುಕೊಳ್ಳಬಾರದು, ಒಬ್ಬ ಕಾರ್ಯಕರ್ತನಾಗಿ ಅವರಿಗೂ ಅಧಿಕಾರವಿದೆ.

ಜಿಲ್ಲೆಯಲ್ಲಿ ಯಾರ್ಯಾಾರನ್ನು ಪದಾಧಿಕಾರಿಗಳನ್ನಾಗಿ ಮಾಡಬೇಕು ಎಂಬ ಬಗ್ಗೆ ಸಲಹೆ ಕೊಡಲಿ, ಸಚಿವರಾಗಿ ಪಕ್ಷ ಸಂಘಟನೆ ಮಾಡಿದ್ದಾರೆ, ಕೋರ್ ಕಮಿಟಿ ಸಭೆ ನಂತರ ಅವರೊಂದಿಗೆ ಮಾತನಾಡಿದ್ದು, ರಾಜ್ಯಾಧ್ಯಕ್ಷನಾಗಿ ಮಾತನಾಡುವುದು ನನ್ನ ಕರ್ತವ್ಯ. ಮಾಧ್ಯಮದ ಮುಂದೆ ಅವರು ಚರ್ಚೆ ಮಾಡಬಾರದಿತ್ತು, ಏನೇ ಭಿನ್ನಾಭಿಪ್ರಾಯ ಇದ್ದರೂ ಹಿರಿಯರ ಜತೆಗೆ ಕೂತು ಬಗೆಹರಿಸಿಕೊಳ್ಳೋಣ ಎಂಬುದಾಗಿ ತಿಳಿಸಿದ್ದೇನೆ ಎಂದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";