ಭುವನೇಶ್ವರ್: ಪ್ರಧಾನಿ ನರೇಂದ್ರ ಮೋದಿ ಒಡಿಶಾದಲ್ಲಿ ನಡೆದಿದ ರೋಡ್ ಶೋ ಯಶಸ್ವಿಯಾಗಿದ್ದನ್ನು ಬಣ್ಣಿಸಲು ಹೋಗಿ, ಬಿಜೆಪಿ ರಾಷ್ಟ್ರೀಯ ವಕ್ತಾರ, ಪಕ್ಷದ ಪುರಿ ಲೋಕಸಭಾ ಕ್ಷೇತ್ರದ ಅಭ್ರ‍್ಥಿ ಸಂಬಿತ್ ಪಾತ್ರ ಯಡವಟ್ಟು ಮಾಡಿಕೊಂಡಿದ್ದಾರೆ.
ಪ್ರಧಾನಿ ರೋಡ್ ಶೋ ಬಗ್ಗೆ ಮಾತನಾಡುತ್ತಿದ್ದ ಸಂಬಿತ್ ಪಾತ್ರ, ಭಗವಾನ್ ಜಗನ್ನಾಥ ಪ್ರಧಾನಿ ಮೋದಿಯ ಭಕ್ತ ಎಂದು ಹೇಳಿಕೆ ನೀಡಿದ್ದು ಈಗ ಒಡಿಶಾದಲ್ಲಿ ಬಿಜೆಪಿ ವಿರೋಧಿಗಳಿಗೆ ಎದುರಾಳಿ ಪಕ್ಷವನ್ನು ಟೀಕಿಸಲು ರ‍್ಜರಿ ಅಸ್ತ್ರ ದೊರೆತಂತಾಗಿದ್ದು, ಸಂಬಿತ್ ಪಾತ್ರ ಹೇಳಿಕೆ ವಿವಾದಕ್ಕೆ ತಿರುಗಿದೆ
ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ರೋಡ್ ಶೋನಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಬಗ್ಗೆ ಮಾತನಾಡಿದ್ದ ಸಂಬಿತ್ ಪಾತ್ರ, ಜಗನ್ನಾಥ ಮೋದಿಯ ಭಕ್ತ, ಆದ್ದರಿಂದ ರೋಡ್ ಶೋ ಯಶಸ್ವಿಯಾಗಿದೆ ಎಂದು ಹೇಳಿದ್ದರು.
ಆಡಳಿತಾರೂಢ ಬಿಜೆಡಿ ನಾಯಕ ನವೀನ್ ಪಟ್ನಾಯಕ್ ಸಂಬಿತ್ ಪಾತ್ರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಒಡಿಶಾ ಅಸ್ಮಿತೆ ಹಾಗೂ ಜನರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ಇದಾಗಿದೆ, ಭಗವಾನ್ ಜಗನ್ನಾಥನನ್ನು ಮನುಷ್ಯನ ಭಕ್ತ ಎಂದು ಹೇಳುವ ಮೂಲಕ ಸಂಬಿತ್ ಪಾತ್ರ ಪ್ರಮಾದವೆಸಗಿದ್ದಾರೆ, ಈ ಹೇಳಿಕೆ ಖಂಡನೀಯ ಎಂದು ಹೇಳಿದ್ದರು.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಈ ಹೇಳಿಕೆಯನ್ನು ಖಂಡಿಸಿ, ಬಿಜೆಪಿಗರು ತಾವು ಭಗವಂತನಿಗಿಂತಲೂ ಮೇಲಿನವರು ಎಂಬ ಯೋಚನೆಯಲ್ಲಿದ್ದಾರೆ, ದೇವರನ್ನೇ ಮೋದಿಯ ಭಕ್ತ ಎಂದು ಹೇಳುವುದು ದೇವರಿಗೆ ಮಾಡಿದ ಅವಮಾನ ಎಂದು ಹೇಳಿದ್ದರು.
ತಮ್ಮ ಹೇಳಿಕೆ ಬಗ್ಗೆ ಸಂಬಿತ್ ಪಾತ್ರ ಸ್ಪಷ್ಟನೆ ನೀಡಿದ್ದು, ಪ್ರತಿ ಬಾರಿಯೂ ನಾನು ಪ್ರಧಾನಿ ಮೋದಿ ಅವರನ್ನು ಜಗನ್ನಾಥ ಪ್ರಭುವಿನ ಭಕ್ತ ಎಂದು ಹೇಳುತ್ತೇನೆ. ಆದರೆ ಅಚಾನಕ್ ಆಗಿ ಬಾಯಿತಪ್ಪಿನಿಂದ ನಾನು ಜಗನ್ನಾಥ ಪ್ರಭು ಮೋದಿಯ ಭಕ್ತ ಎಂದು ಹೇಳಿಬಿಟ್ಟೆ, ಇದು ನಿಮಗೂ ರ‍್ಥವಾಗುತ್ತದೆ ಎಂದು ಭಾವಿಸುತ್ತೇನೆ. ಆದ್ದರಿಂದ ಈ ವಿಷಯವನ್ನು ದೊಡ್ಡದು ಮಾಡುವುದು ಬೇಡ, ನಾವೆಲ್ಲರೂ ಕೆಲವೊಮ್ಮೆ ಬಾಯಿತಪ್ಪು ಮಾಡುತ್ತೇವೆ ಎಂದು ವಿಪಕ್ಷಗಳಿಗೆ ಮನವಿ ಮಾಡಿದ್ದಾರೆ.
ತಮ್ಮ ಅಚಾನಕ್ ಹೇಳಿಕೆಯಿಂದ ಉಂಟಾದ ತಪ್ಪಿಗೆ ಪಶ್ಚಾತ್ತಾಪಕ್ಕಾಗಿ ಸಂಬಿತ್ ಪಾತ್ರ ೩ ದಿನಗಳ ಉಪಸವಾಸ ಕೈಗೊಂಡು ಜಗನ್ನಾಥ ದೇವಾಲಯಕ್ಕೆ ತೆರಳಿ ಕ್ಷಮೆ ಕೋರುವುದಾಗಿ ಹೇಳಿದ್ದಾರೆ.