ಬಳ್ಳಾರಿ-ಹರಿಹರ ವಿಶೇಷ ಡೆಮೋ ರೈಲಿಗೆ ಹಸಿರು ನಿಶಾನೆ
ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯ ರೈಲ್ವೆ ನಿಲ್ದಾಣದ ಆವರಣದಲ್ಲಿ ರೈಲು ಸಂಖ್ಯೆ 07395 ಬಳ್ಳಾರಿ-ಹರಿಹರ(ದಾವಣಗೆರೆ ಮಾರ್ಗ)ಸಂಖ್ಯೆಯ ವಿಶೇಷ ಡೆಮೋ ರೈಲು ಬಳ್ಳಾರಿ ಇಂದ ಹರಿಹರಕ್ಕೆ ದಾವಣಗೆರೆ ಮಾರ್ಗವಾಗಿ ಆರಂಭಗೊಂಡ ರೈಲುಗೆ ಪ್ರವಾಸೋದ್ಯಮ, ಪರಿಸರ ಹಾಗೂ ಜೀವ ವೈವಿಧ್ಯ ಸಚಿವರಾದ ಆನಂದ್‍ಸಿಂಗ್ ಅವರು ಸೋಮವಾರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಚಾಲನೆ ನೀಡಿ ನಂತರ ಮಾತನಾಡಿದ ಸಚಿವ ಆನಂದ್‍ಸಿಂಗ್ ಅವರು, ಹೊಸಪೇಟೆಯಿಂದ ಹರಿಹರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಲು ರೂ.197 ವೆಚ್ಚವಾಗಲಿದ್ದು, ಅದೇ ರೈಲಿನಲ್ಲಿ 35 ರೂ.ಗಳಲ್ಲಿ ಪ್ರಯಾಣಿಸಬಹುದಾಗಿದೆ ಎಂದರು.
ಬಳ್ಳಾರಿಯಿಂದ ಹರಿಹರಕ್ಕೆ ಚಲಿಸಲುವ ಈ ರೈಲಿಗೆ ಹೊಸಪೇಟೆಯಲ್ಲಿಯೇ ಚಾಲನೆ ನೀಡಲಾಗುತ್ತಿದ್ದು, ಈ ಹೊಸಪೇಟೆ ಮಣ್ಣಿನ ವಿಶೇಷತೆ ಅಂತಹದ್ದು. ಈ ಹಿಂದೆ ವಿಜಯನಗರ ಸ್ಥಾಪಿಸಲು ವಿದ್ಯಾರಣ್ಯರು ಆಯ್ಕೆ ಮಾಡಿಕೊಂಡ ಪ್ರದೇಶವು ಇದಾಗಿದೆ ಎಂದರು.
ಇದೇ ಮೊದಲಬಾರಿ ರೈಲಿಗೆ ಚಾಲನೆ ನೀಡುತ್ತಿರುವುದಕ್ಕೆ ತಂಬಾ ಸಂತೋಷವಾಗಿದೆ. ಈ ಭಾಗದ ಬಹುದಿನಗಳ ಬೇಡಿಕೆ ಶ್ರಮಿಸಿದ ಎಲ್ಲರಿಗೂ ವಂದನೆಗಳನ್ನು ತಿಳಿಸಿದ ಸಚಿವ ಆನಂದಸಿಂಗ್ ಅವರು ಈ ರೈಲು ಪ್ರಾರಂಭದಿಂದ ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಅವರು ಹೇಳಿದರು.
ಸಂಸದರಾದ ವೈ.ದೇವೆಂದ್ರಪ್ಪ ಅವರು ಮಾತನಾಡಿ ಈ ಭಾಗದ ಜನರಿಗೆ ಸಾರಿಗೆಗೆ ಸಂಬಂಧಿಸಿದಂತೆ ಇನ್ನೂ ಏನೆಲ್ಲಾ ಅನುಕೂಲಗಳು ಬೇಕೊ ಅವನೆಲ್ಲ ಈಡೇರಿಸಲು ನಿಮ್ಮೆಲರ ಸಹಕಾರದೊಂದಿಗೆ ಪ್ರ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ರಾಸಾಯನಿಕ ಗೊಬ್ಬರÀಗಳು ಫ್ಯಾಕ್ಟರಿಯಿಂದ ಗೂಡ್ಸ್ ಮುಖಾಂತರ ನೇರವಾಗಿ ಬಳ್ಳಾರಿ ಹಾಗೂ ಹೊಸಪೇಟೆ ನಗರಕ್ಕೆ ಬಂದು ಆನ್‍ಲೋಡ್ ಮಾಡುವಂತೆ ನಾವು ಮನವಿ ಮಾಡಿಕೊಂಡಿದ್ದು, ಅದಕ್ಕೆ ಪ್ರಧಾನಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಬಳ್ಳಾರಿ ಇಂದ ಹರಿಹರಕ್ಕೆ 07395 ಸಂಖ್ಯೆಯ ರೈಲು ಬೆಳಗ್ಗೆ 7.30ಕ್ಕೆ ಬಳ್ಳಾರಿಯಿಂದ ಹೊರಟು ಕುಡತಿನಿ, ತೋರಣಗಲ್ಲು ಮುಖಾಂತರ ಬೆಳಗ್ಗೆ 9.10ಕ್ಕೆ ಹೊಸಪೇಟೆಗೆ ತಲುಪಿ ಅಲ್ಲಿಂದ 9.15ಕ್ಕೆ ಹೊರಟು ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ, ಮಾರ್ಗವಾಣಿ ಮಧ್ಯಾಹ್ನ 12.50ಕ್ಕೆ ದಾವಣಗೆರೆಗೆ ತಲುಪಿ ಅಲ್ಲಿಂದ ಮಧ್ಯಾಹ್ನ 1ಕ್ಕೆ ಹೊರಟು ಮಧ್ಯಾಹ್ನ 1.50ಕ್ಕೆ ಹರಿಹರಕ್ಕೆ ತಲುಪುತ್ತದೆ. ಪುನಃ ಹರಿಹರದಿಂದ 07396 ಸಂಖ್ಯೆಯ ರೈಲು ಮಧ್ಯಾಹ್ನ 2ಕ್ಕೆ ಹೊರಟು ದಾವಣಗೆರೆ, ಹರಪನಹಳ್ಳಿ, ಕೊಟ್ಟುರು, ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಹೊಸಪೇಟೆಗೆ ಸಂಜೆ 5.25ಕ್ಕೆ ತಲುಪಿ ಅಲ್ಲಿಂದ 6.30ಕ್ಕೆ ಹೊರಟು ತೋರಣಗಲ್ಲು, ಕುಡತಿನಿ ಮಾರ್ಗವಾಗಿ ಬಳ್ಳಾರಿಗೆ ರಾತ್ರಿ 8ಗಂಟೆಗೆ ಬಂದು ತಲುಪುತ್ತದೆ. ಈ ವಿಶೇಷ ಡೆಮೋ ಪ್ಯಾಸೆಂಜರ್ ರೈಲು 10ಭೋಗಿಗಳನ್ನು ಹೊಂದಿದ್ದು, ಏ.12ರಿಂದ ಅ.15ರವರೆಗೆ ಬಾನುವಾರ ಹೊರತುಪಡಿಸಿ ಸಂಚರಿಸಲಿದೆ.
ಹೊಸಪೇಟೆ ಇಂದ ಬಳ್ಳಾರಿಗೆ 07397 ಸಂಖ್ಯೆಯ ರೈಲು ಬೆಳಗ್ಗೆ 5.40ಕ್ಕೆ ಹೊಸಪೇಟೆಯಿಂದ ಹೊರಟು ಗಾದಿಗನೂರು, ತೋರಣಗಲ್ಲು, ದರೋಜಿ, ಕುಡತಿನಿ ಮಾರ್ಗವಾಗಿ ಬಳ್ಳಾರಿಗೆ ಬೆಳಗ್ಗೆ 7.20ಕ್ಕೆ ಬಂದು ತಲುಪುತ್ತದೆ. ಬಳ್ಳಾರಿ ಇಂದ ಹೊಸಪೇಟೆಗೆ 07398 ಸಂಖ್ಯೆ ರೈಲು ರಾತ್ರಿ 8.10ಕ್ಕೆ ಹೊರಟು ಕುಡತಿನಿ, ದರೋಜಿ, ತೋರಣಗಲ್ಲು, ಗಾದಿಗನೂರು ಮಾರ್ಗವಾಗಿ ರಾತ್ರಿ 9.45ಕ್ಕೆ ಹೊಸಪೇಟೆಗೆ ಬಂದು ತಲುಪುತ್ತದೆ. ಈ ಡೆಮೋ ರೈಲು ವ್ಯವಸ್ಥೆಯು ಏ.12 ರಿಂದ ಅ.15ರವರೆಗೆ ಭಾನುವಾರ ಹೊರತುಪಡಿಸಿ ಸಂಚರಿಸಲಿದೆ.
ಹೊಸಪೇಟೆ ಇಂದ ಎಸ್.ಎಸ್.ಎಸ್.ಹುಬ್ಬಳ್ಳಿಗೆ 07393 ಸಂಖ್ಯೆ ರೈಲು ಪ್ರತಿ ಶನಿವಾರದಂದು ರಾತ್ರಿ 10ಕ್ಕೆ ಹೊಸಪೇಟೆಯಿಂದ ಹೊರಟು ಮುನಿರಾಬಾದ್, ಗಿಣಿಗೇರಾ, ಕೊಪ್ಪಳ, ಭಾಣಾಪುರ, ಬನ್ನಿಕೊಪ್ಪ, ಗದಗ, ಅಣ್ಣಿಗೇರಿ ಶಿಶ್ವಿನಹಳ್ಳಿ ಮಾರ್ಗವಾಗಿ ಬೆಳಗ್ಗೆ 12.55ಕ್ಕೆ ಎಸ್.ಎಸ್.ಎಸ್.ಹುಬ್ಬಳ್ಳಿಗೆ ಬಂದು ತಲುಪಲಿದೆ. ಪುನಃ 07394 ಸಂಖ್ಯೆಯ ರೈಲು ಪ್ರತಿ ಭಾನುವಾರದಂದು ರಾತ್ರಿ 11.30ಕ್ಕೆ ಎಸ್.ಎಸ್.ಎಸ್.ಹುಬ್ಬಳ್ಳಿಯಿಂದ ಹೊರಟು ಶಿಶ್ವನಹಳ್ಳಿ, ಅಣ್ಣಿಗೇರಿ, ಗದಗ, ಬನ್ನಿಕೊಪ್ಪ, ಭಾಣಾಪುರ, ಕೊಪ್ಪಳ, ಗಿಣಿಗೇರಾ, ಮುನಿರಾಬಾದ್ ಮಾರ್ಗವಾಗಿ ಬೆಳಗ್ಗೆ 2.30ಕ್ಕೆ ಹೊಸಪೇಟೆಗೆ ಬಂದು ತಲುಪುತ್ತದೆ. ಈ ವಿಶೇಷ ಡೆಮೋ ಸಾಪ್ತಾಯಿಕ ಪ್ಯಾಸೆಂಜರ್ ರೈಲು ವ್ಯವಸ್ಥೆಯು ಏ.12 ರಿಂದ ಅ.15ರವರೆಗೆ ಸಂಚರಿಸಲಿದೆ.
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಆಶೋಕ್ ಜೀರೆ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹರೀತಾ, ಸಹಾಯಕ ವಿಭಾಗೀಯ ವ್ಯವಸ್ಥಾಪಕ ಸಂತೋಷ್ ಕುಮಾರ್, ಪ್ರಶಾಂತ್ ಹಾಗೂ ಇತರರು ಇದ್ದರು.