ಮುಂಡರಗಿ ಆಶ್ರಯ ವಸತಿ ಬಡಾವಣೆಗೆ ಭೇಟಿ ಪರಿಶೀಲನೆ


ಬಡಫಲಾನುಭವಿಗಳಿಗೆ ಶೀಘ್ರ ಮನೆಗಳ ಹಂಚಿಕೆ: ಜಿಲ್ಲಾ ಸಚಿವ ಬಿ.ಶ್ರೀರಾಮುಲು


ಬಳ್ಳಾರಿ: ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ,ಎಎಚ್‌ಪಿ ಉಪಘಕದ ಅಡಿ ಬಳ್ಳಾರಿ ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಮುಂಡರಗಿ ಆಶ್ರಯ ಜಿ+೨ ಮಾದರಿ ಮನೆಗಳ ಸ್ಥಳಕ್ಕೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು ಬಡ ಫಲಾನುಭವಿಗಳಿಗೆ ಶೀಘ್ರ ಸೂರು ಒದಗಿಸಲು ಉದ್ದೇಶಿಸಲಾಗಿದೆ. ಮೂರು ತಿಂಗಳೊಳಗೆ ಸಕಲಸೌಲಭ್ಯಗಳೊಂದಿಗೆ ೬೦೦ ಮನೆಗಳನ್ನು ಪೂರ್ಣಗೊಳಿಸಿ ಒದಗಿಸುವಂತೆ ಗುತ್ತಿಗೆದಾರ ಹೊಣೆ ಹೊತ್ತ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಮೊದಲ ಹಂತದಲ್ಲಿ ೬೦೦ ಮನೆಗಳು ಒದಗಿಸಿದ್ದಲ್ಲಿ ನಿಯಮಾನುಸಾರ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು; ಇದರಿಂದ ಜನರಿಗೆ ಮನೆಗಳು ಶೀಘ್ರ ವಿತರಣೆ ಮಾಡುತ್ತಿದ್ದಾರೆ ಎಂಬ ವಿಶ್ವಾಸ ಮೂಡಲು ಸಾಧ್ಯ ಎಂದರು.


ಮನೆಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಿದ್ದಲ್ಲಿ ನಿಯಮಾನುಸಾರ ಹಣವನ್ನು ತಮ್ಮ ಸಂಸ್ಥೆಗೆ ಪಾವತಿಸಲಾಗುತ್ತದೆ;ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ ಅವರು ಮುಂಡರಗಿ ಆಶ್ರಯ ವಸತಿ ಯೋಜನೆ ಕಾಮಗಾರಿ ವೇಗವಾಗಿ ನಡೆಯಬೇಕಿತ್ತು;ಆದರೇ ನಿಧಾನಗತಿಯಲ್ಲಿ ನಡೆಯುತ್ತಿದೆ ಎನ್ನುವ ಅಭಿಪ್ರಾಯವಿದ್ದು,ಕೋವಿಡ್ ಸೇರಿದಂತೆ ಯಾವುದೇ ಸಬೂಬುಗಳನ್ನು ನೀಡದೇ ಅದ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಿ ಎಂದರು.
೫೬೧೬ ಜಿ+೨ ಮನೆಗಳನ್ನು ನಿರ್ಮಿಸಲಾಗುತ್ತಿದ್ದು,೧೧೪೬ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ೧೩೦೭ ಇತರೇ/ಅಲ್ಪಸಂಖ್ಯಾತರು ಸೇರಿದಂತೆ ೨೪೫೩ ಫಲಾನುಭವಿಗಳು ವಂತಿಗೆ ಪಾವತಿಸಿದ್ದಾರೆ. ಪ್ರತಿ ಮನೆಯ ಘಟಕ ವೆಚ್ಚ ೬.೬೨ಲಕ್ಷ ರೂ.ಗಳಾಗಿವೆ. ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಕೇಂದ್ರ/ರಾಜ್ಯ ಸಕಾರದಿಂದ ೩.೩೦ಲಕ್ಷ ರೂ.ಗಳು ಹಾಗೂ ಇತರೇ/ಅಲ್ಪಸಂಖ್ಯಾತರಿಗೆ ೨.೭೦ಲಕ್ಷ ರೂ. ಸಹಾಯಧನ ನೀಡುತ್ತಿದ್ದು,ಉಳಿದ ಹಣವನ್ನು ಫಲಾನುಭವಿಗಳಿಗೆ ಬ್ಯಾಂಕ್ ಸಾಲಸೌಲಭ್ಯದ ಮೂಲಕ ಒದಗಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದರು.
೩೦ ಕೋಟಿ ರೂ.ವೆಚ್ಚದಲ್ಲಿ ಈ ಪ್ರದೇಶದ ಒಳಚರಂಡಿ, ಕುಡಿಯುವ ನೀರು ಸರಬರಾಜು ಕಾಮಗಾರಿಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಅವರು ಸಚಿವರ ಗಮನಕ್ಕೆ ತಂದರು.


೩೨೯೮ ಫಲಾನುಭವಿಗಳನ್ನು ನಗರ ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದ್ದು,೨೪೫೩ ಫಲಾನುಭವಿಗಳ ಮಾಹಿತಿ ಬ್ಯಾಂಕ್‌ಗೆ ಸಲ್ಲಿಸಲಾಗಿದೆ ಎಂದರು.
ಮುಂಡರಗಿ ಆಶ್ರಯ ವಸತಿ ಬಡಾವಣೆಯ ಪ್ರಗತಿಗೆ ಸಂಬಂಧಿಸಿದ ಇನ್ನೀತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ,ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ಮಹಾನಗರ ಪಾಲಿಕೆ ಸದಸ್ಯರುಗಳು, ಪಾಲಿಕೆಯ ಮುಖ್ಯ ಎಂಜನಿಯರ್ ಖಾಜಾಮೋಹಿನಿದ್ದೀನ್ ಸೇರಿದಂತೆ ಇನ್ನೀತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top