ಬಳ್ಳಾರಿ,: ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರ ಬಳ್ಳಾರಿ ನಗರ ಪ್ರದಕ್ಷಿಣೆ ಮುಂದುವರಿದಿದ್ದು,ಗುರುವಾರ ಬೆಳಗಿನ ಜಾವ ರಾಯಲ್ ವೃತ್ತ, ರಾಜಕುಮಾರ ಉದ್ಯಾನವನ, ಮೀನಾಕ್ಷಿ ವೃತ್ತ, ವಡ್ಡರಬಂಡ ಭೋವಿ ಕೆರೆ ಸರ್ಕಲ್, ರೂಪನಗುಡಿ ರಸ್ತೆ ವೀಕ್ಷಣೆ ಮಾಡಿದರು.
ಕಾಲುವೆಗಳ ಸ್ವಚ್ಛತೆ ಮಾಡಲು ಹಾಗೂ ರಾಜಕುಮಾರ ಉದ್ಯಾನವನದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲು ಹಾಗೂ ವಿದ್ಯುತ್ ದೀಪಗಳು ಅಳವಡಿಸಲು ಮತ್ತು ಸ್ವಚ್ಛತೆ ಮಾಡಲು ಸ್ಥಳದಲ್ಲಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಡ್ಡರಬಂಡೆ ರಸ್ತೆಬದಿ ಇರುವ ಲಾರಿಗಳನ್ನು ತೆರವುಗೊಳಿಸಲು ಟ್ರಾಫಿಕ್ ಪೊಲೀಸರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ: ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಗುರುವಾರ ಮದ್ಯಾಹ್ನ ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿರುವ ಬಳ್ಳಾರಿ ನಗರ ಶಾಸಕರ ಕಾರ್ಯಾಲಯದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಲೋಕೋಪಯೋಗಿ,ವಕ್ಫ್, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ಲಂಬೋರ್ಡ್‍ಗಳ ಪ್ರಗತಿಯನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿರುವ ಪ್ರಮುಖ ಕಾಮಗಾರಿಗಳ ಮಾಹಿತಿ ಪಡೆದ ಅವರು ಆದ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಿ; ಸರಕಾರದ ಮಟ್ಟದಲ್ಲಿ ಯಾವುದಾರೂ ಕಡತ ಅಥವಾ ಕೆಲಸ ಬಾಕಿ ಇದ್ದಲ್ಲಿ ತಿಳಿಸಿ;ಅದನ್ನು ಮಾಡಿಕೊಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.