ಬೌದ್ಧಿಕ ಆಸ್ತಿ ಹಕ್ಕುಗಳ ಅರಿವು ಇಲ್ಲದಿರುವುದು ಹಿನ್ನಡೆಗೆ ಕಾರಣ: ಕುಲಪತಿ ಪ್ರೊ. ಸಿದ್ದು ಆಲಗೂರ
ಬಳ್ಳಾರಿ,ಫೆ.೧೧(ಕರ್ನಾಟಕ ವಾರ್ತೆ): ವಿಶ್ವವಿದ್ಯಾಲಯ ಅಥವಾ ಇನ್ನಿತರ ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಅನೇಕ ಬೋಧಕರು ಗುಣಮಟ್ಟದ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಬರೆದರೂ ಅವುಗಳ ಬೌದ್ಧಿಕ ಆಸ್ತಿ ಹಕ್ಕುಗಳು(ಐಪಿಆರ್) ಕುರಿತು ಅರಿವು ಇಲ್ಲದಿರುವುದು ಹಿನ್ನಡೆಗೆ ಕಾರಣವಾಗುತ್ತದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ವತಿಯಿಂದ ಶುಕ್ರವಾರ ಆಯೋಜಿಸಿದ್ದ ಬೌದ್ಧಿಕ ಆಸ್ತಿ ಹಕ್ಕುಗಳು (ಐಪಿಆರ್) ಮತ್ತು ಪೇಟೆಂಟ್ ಫೈಲಿಂಗ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರಲ್ಲಿ ಬಹುಶಿಸ್ತೀಯ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಪ್ರತಿಯೊಬ್ಬರು ತಮ್ಮ ಬರಹಗಳನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ದೇಶದ ಬಹುತೇಕ ಸರ್ಕಾರಿ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳು ಇಂದು ಸಂಶೋಧನಾ ಲೇಖನಗಳಿಗೆ, ಪೇಟೆಂಟ್‌ಗಳಿಗೆ, ಉತ್ತಮ ಪಿಹೆಚ್.ಡಿ ಮಾರ್ಗದರ್ಶನಗಳನ್ನು ನೇಮಕಾತಿಗೆ ಪರಿಗಣಿಸುತ್ತವೆ. ಇವುಗಳ ಪ್ರಕಟಣೆ ಜೊತೆಗೆ ನಮ್ಮದೇ ಕೃತಿಸ್ವಾಮ್ಯವನ್ನು ಹೊಂದಿದರೆ ಲೇಖಕರಿಗೆ ವಿಶೇಷ ಪ್ರಾತಿನಿಧ್ಯ ದೊರೆಯುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರುದ್ರೇಶ್ ಮಾತನಾಡಿ, ಭಾರತದಲ್ಲಿ ಐಪಿಆರ್ ಕುರಿತು ತಿಳುವಳಿಕೆ ಕಡಿಮೆಯಿದ್ದು, ನಮ್ಮ ನೆರೆ ರಾಷ್ಟ್ರವಾದ ಚೀನಾ ಐಪಿಆರ್ ಫೈಲಿಂಗ್ ಹಾಗೂ ಪೇಟೆಂಟ್ ಪಡೆಯುವಲ್ಲಿ ಮುಂದೆ ಇದೆ ಎಂದರು.
ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಯಾವುದೇ ಚೌಕಟ್ಟಿಲ್ಲ, ಕೃಷಿಕರಿಂದ ಹಿಡಿದು ವಾಣಿಜ್ಯೋದ್ಯಮಿಯವರೆಗೆ ಎಲ್ಲರಿಗೂ ಇದು ಅನ್ವಯವಾಗುತ್ತದೆ. ಬೌದ್ಧಿಕ ಆಸ್ತಿ ಹಕ್ಕುಗಳಿಂದ ಆರ್ಥಿಕ ಪ್ರಯೋಜನೆಗಳ ಪಡೆಯಬಹುದು. ಇದು ಒಂದು ಮಾದರಿಯಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣೀಭೂತವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿವಿ ಮೌಲ್ಯಮಾನಪ ಕುಲಸಚಿವ ಪ್ರೊ. ಶಶಿಕಾಂತ್ ಉಡಿಕೇರಿ, ವಿತ್ತಾಧಿಕಾರಿ ಡಾ. ಕೆ.ಸಿ.ಪ್ರಶಾಂತ್, ಐಕ್ಯೂಎಸಿ ನಿರ್ದೇಶಕರಾದ ಪ್ರೊ. ತಿಪ್ಪೇರುದ್ರಪ್ಪ ಜೆ. ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನ ಐಪಿಆರ್ ಸಲಹೆಗಾರ ಡಾ. ಪ್ರವೀಣ್ ಕುಮಾರ್ ಎಂ ವಿ, ಮತ್ತು ಎಲ್ಲ ಸ್ನಾತಕೋತ್ತರ ಕೇಂದ್ರಗಳ ಖಾಯಂ ಬೋಧಕ ಸಿಬ್ಬಂದಿ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.