ಬಳ್ಳಾರಿ ಲೋಕಸಭಾ ಕ್ಷೇತ್ರ: ಒಂದು ಹಿನ್ನೋಟ

ಬಳ್ಳಾರಿ :        ಗಣಿನಾಡು ಎಂದೇ ಖ್ಯಾತಿ ಹಾಗೂ ಬಿಸಿಲ ನಾಡು ಎಂಬ ಕುಖ್ಯಾತಿ ಹೊಂದಿರುವ ಅಖಂಡ (ಈಗಿನ ವಿಜಯನಗರ ಜಿಲ್ಲೆ ಒಳಗೊಂಡಂತೆ) ಬಳ್ಳಾರಿ ಜಿಲ್ಲೆಯು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿದ್ದು, ಇಂತಹ ಜಿಲ್ಲೆಯಲ್ಲಿ ೧೯೫೧-೫೨ ರಿಂದ ೨೦೧೯ ವರೆಗಿನ ಲೋಕಸಭಾ ಚುನಾವಣಾ ಇತಿಹಾಸವನ್ನು ಗಮನಿಸಿದಾಗ ಚುನಾವಣೆಯಿಂದ ಚುನಾವಣೆಗೆ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿರುವುದು ವಿಶೇಷ. ಇದೀಗ ಮತ್ತೊಮ್ಮೆ ಲೋಕಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಬೇಸಿಗೆಯ ಬಿಸಿ ಏರುತ್ತಿರುವಂತೆಯೇ, ಚುನಾವಣಾ ಕಣವೂ ಕೂಡ ರಂಗೇರುತ್ತಿದೆ.

          ಅಖಂಡ ಬಳ್ಳಾರಿ ಕ್ಷೇತ್ರ:

          ಅಖಂಡ ೦೯-ಬಳ್ಳಾರಿ ಲೋಕಸಭಾ ಕ್ಷೇತ್ರವು ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಸಂಡೂರು, ಹಾಗೂ ಕೂಡ್ಲಿಗಿ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರವು ಮಾತ್ರ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ.

          ಮತದಾರರ ಅಂಕಿ-ಅಂಶ:

          ಇತ್ತೀಚೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ನಂತರ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ ಪುರುಷ-೯೨೦೦೨೨, ಮಹಿಳೆ-೯೪೫೦೫೩, ಇತರೆ-೨೬೬ ಸೇರಿದಂತೆ ಒಟ್ಟು ೧೮,೬೫,೩೪೧ ಮತದಾರರಿದ್ದಾರೆ.

 ಹಡಗಲಿ ಕ್ಷೇತ್ರದಲ್ಲಿ ಪುರುಷ- ೯೮೨೩೨, ಮಹಿಳೆ-೯೬೭೧೪, ಇತರೆ-೧೩, ಒಟ್ಟು-೧೯೪೯೫೯ ಮತದಾರರು ಮತ್ತು ೨೧೮ ಮತಗಟ್ಟೆಗಳು.

ಹಗರಿಬೊಮ್ಮನಹಳ್ಳಿ: ಪುರುಷ-೧೧೬೯೩೩, ಮಹಿಳೆ-೧೧೮೫೯೨, ಇತರೆ-೨೨, ಒಟ್ಟು-೨೩೫೫೪೭ ಮತದಾರರು ಮತ್ತು ೨೫೪ ಮತಗಟ್ಟೆಗಳು.

ವಿಜಯನಗರ: ಪುರುಷ- ೧೨೪೬೫೫, ಮಹಿಳೆ-೧೩೨೪೧೬, ಇತರೆ-೭೭, ಒಟ್ಟು-೨೫೭೧೪೮ ಮತದಾರರು ಮತ್ತು ೨೫೯ ಮತಗಟ್ಟೆಗಳು.

ಕಂಪ್ಲಿ: ಪುರುಷ- ೧೦೯೪೯೦, ಮಹಿಳೆ-೧೧೨೨೯೫, ಇತರೆ-೩೫, ಒಟ್ಟು-೨೨೧೮೨೦ ಮತದಾರರು, ೨೪೨-ಮತಗಟ್ಟೆಗಳು.

ಬಳ್ಳಾರಿ ಗ್ರಾಮೀಣ: ಪುರುಷ- ೧೨೦೦೪೬, ಮಹಿಳೆ-೧೨೭೪೧೭, ಇತರೆ-೫೦, ಒಟ್ಟು-೨೪೭೫೧೩ ಮತದಾರರು, ೨೩೫-ಮತಗಟ್ಟೆಗಳು.

ಬಳ್ಳಾರಿ ನಗರ: ಪುರುಷ- ೧೩೦೩೧೫, ಮಹಿಳೆ-೧೩೯೦೪೫, ಇತರೆ-೩೩, ಒಟ್ಟು-೨೬೯೩೯೩ ಮತದಾರರು, ೨೬೧-ಮತಗಟ್ಟೆಗಳು.

ಸಂಡೂರು: ಪುರುಷ- ೧೧೪೯೨೮, ಮಹಿಳೆ- ೧೧೫೩೦೯, ಇತರೆ-೨೫, ಒಟ್ಟು- ೨೩೦೨೬೨ ಮತದಾರರು, ೨೫೩-ಮತಗಟ್ಟೆಗಳು.

 

ಕೂಡ್ಲಿಗಿ: ಪುರುಷ-೧೦೫೪೨೩, ಮಹಿಳೆ-೧೦೩೨೬೫, ಇತರೆ-೧೧, ಒಟ್ಟು ೨೦೮೬೯೯ ಮತದಾರರಿದ್ದು, ೨೫೦ ಮತಗಟ್ಟೆ ಕೇಂದ್ರಗಳಿವೆ. 

ಭಾರತ ದೇಶ ಸ್ವಾತಂತ್ರ್ಯ ನಂತರ ೧೯೫೧-೫೨ ರಲ್ಲಿ ದೇಶದಲ್ಲಿ ಜರುಗಿದ ಮೊದಲ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ (ಈ ಕ್ಷೇತ್ರವು ಮದ್ರಾಸ್ ಪ್ರಾಂತ್ಯ ವ್ಯಾಪ್ತಿಗೊಳಪಟ್ಟಿದ್ದು, ಬಳ್ಳಾರಿ, ರಾಯದುರ್ಗ, ಕೂಡ್ಲಿಗಿ, ಹೊಸಪೇಟೆ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿತ್ತು) ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಟಿ.ಸುಬ್ರಮಣ್ಯಂ ಅವರು, ಪಕ್ಷೇತರ ಅಭ್ಯರ್ಥಿ ವೈ.ಮಹಾಬಳೇಶ್ವರಪ್ಪ ಅವರನ್ನು ೩೦,೩೬೧  ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು.

         

          ೧೯೫೭ ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಿದ್ದ ಟಿ.ಸುಬ್ರಮಣ್ಯಂ ಅವರು ಪಕ್ಷೇತರ ಅಭ್ಯರ್ಥಿ ವೈ.ಮಹಾಬಳೇಶ್ವರಪ್ಪ ಅವರಿಗಿಂತ ೨೬,೨೮೮ ಹೆಚ್ಚು ಮತಗಳನ್ನು ಪಡೆದು  ಪುನಃ ವಿಜಯಿಯಾದರು. 

 

          ೧೯೬೨ ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಟಿ.ಸುಬ್ರಮಣ್ಯಂ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಸ್ವತಂತ್ರ (ಎಸ್‌ಡಬ್ಲ್ಯೂಎ)  ಪಕ್ಷದ ಅಭ್ಯರ್ಥಿಯಾದ ಜೆ.ಮಹ್ಮದ್ ಇಮಾಮ್ ಅವರನ್ನು  ೧೧,೩೧೭ ಮತಗಳ ಅಂತರದಿಂದ ಪರಾಭವಗೊಳಿಸಿ ಸತತ ಹ್ಯಾಟ್ರಿಕ್ ಗೆಲುವು ಪಡೆದುಕೊಂಡು ಆಯ್ಕೆಯಾದರು. 

 

          ೧೯೬೭ ರ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ವಿ.ಕೆ.ಆರ್.ವಿ.ರಾವ್ ಅವರು, ಸ್ವತಂತ್ರ (ಎಸ್‌ಡಬ್ಲ್ಯೂಎ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೈ.ಮಹಾಬಳೇಶ್ವರಪ್ಪ ಅವರನ್ನು ೨೪,೩೮೦ ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರು.

 

 

          ೧೯೭೧ ರ ಚುನಾವಣೆಯಲ್ಲಿ ಕಾಂಗ್ರೆಸ್ (ಜಗಜೀವನರಾಂ ಗ್ರೂಪ್) ಪಕ್ಷದಿಂದ ವಿ.ಕೆ.ಆರ್.ವಿ.ರಾವ್, ಸ್ವತಂತ್ರ ಪಕ್ಷ (ಎಸ್‌ಡಬ್ಲ್ಯುಎ) ದಿಂದ ವೈ.ಮಹಾಬಳೇಶ್ವರಪ್ಪ, ಪಕ್ಷೇತರ ಅಭ್ಯರ್ಥಿಗಳಾಗಿ ಎಸ್.ಗುರುನಾಥ ಮತ್ತು ಎ.ಎನ್.ಗಂಗಪ್ಪ ಸ್ವಾಮಿ ಅವರು ಸ್ವರ್ಧಿಸಿದ್ದು, ವಿ.ಕೆ.ಆರ್.ವಿ.ರಾವ್ ಅವರು ವೈ.ಮಹಾಬಳೇಶ್ವರಪ್ಪ ಅವರಿಗಿಂತ ೧,೫೨,೮೬೦ ಹೆಚ್ಚು ಮತ ಗಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ವೈ.ಮಹಾಬಳೇಶ್ವರಪ್ಪ ಅವರು ೭೮,೦೪೧ ಮತ, ಪಕ್ಷೇತರ ಅಭ್ಯರ್ಥಿಗಳಾದ ಎಸ್.ಗುರುನಾಥ ೫,೭೯೯ ಮತ ಪಡೆದರೆ, ಎ.ಎನ್.ಗಂಗಪ್ಪಸ್ವಾಮಿ ಅವರು ೨,೮೯೬ ಮತಗಳನ್ನು ಪಡೆದಿದ್ದರು.

೧೯೭೭ ರ ಲೋಕಸಭಾ ಚುನಾವಣೆಯಲ್ಲಿ ಕೆ.ಎಸ್.ವೀರಭದ್ರಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾದರು.  ಈ ಚುನಾವಣೆಯಲ್ಲಿ ಅವರು ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿ ಎನ್.ತಿಪ್ಪಣ್ಣ ಅವರಿಗಿಂತ  ೧,೪೫,೫೪೪ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು.

 

          ೧೯೮೦ ರ ಚುನಾವಣೆಯಲ್ಲಿ ಕಾಂಗ್ರೆಸ್ (ಇಂದಿರಾ) ಪಕ್ಷದ ಅಭ್ಯರ್ಥಿಯಾಗಿ ಆರ್.ವೈ.ಘೋರ್ಪಡೆ ಅವರು, ಕಾಂಗ್ರೆಸ್ (ಅರಸು) ಪಕ್ಷದ ಅಭ್ಯರ್ಥಿ ಎಂ.ವೈ.ಘೋರ್ಪಡೆ ಅವರನ್ನು  ೧,೩೬,೦೩೭ ಮತಗಳಿಂದ ಸೋಲಿಸಿ ಆಯ್ಕೆಯಾದರು, ಈ ಚುನಾವಣೆಯಲ್ಲಿ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ರಾಚಯ್ಯ ಮೂರನೇಯ ಸ್ಥಾನ ಹಾಗೂ ಪಕ್ಷೇತರ ಅಭ್ಯರ್ಥಿ ಡಿ.ಮಹ್ಮದ್ ಗೌಸ್ ನಾಲ್ಕನೇ ಸ್ಥಾನ ಗಳಿಸಿದರು. ಪಕ್ಷೇತರ ಅಭ್ಯರ್ಥಿ ಎ.ಎಂ.ಗಂಗಪ್ಪಸ್ವಾಮಿ ಅವರು ಐದನೇ ಸ್ಥಾನ ಪಡೆದುಕೊಂಡರು.

 

          ೧೯೮೪ ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಬಸವರಾಜೇಶ್ವರಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನತಾ ಪಾರ್ಟಿ ಅಭ್ಯರ್ಥಿ ಎಂ.ಪಿ.ಪ್ರಕಾಶ ಅವರನ್ನು  ೭೨,೨೮೬ ಮತಗಳಿಂದ ಪರಾಭವಗೊಳಿಸಿ ಅಚ್ಚರಿಯ ರೀತಿಯಲ್ಲಿ ಆಯ್ಕೆಯಾದರು.  ಈ ಚುನಾವಣೆಯಲ್ಲಿ ಒಟ್ಟು ೮ ಅಭ್ಯರ್ಥಿಗಳು ಕಣದಲ್ಲಿದ್ದರು. 

 

          ೧೯೮೯ ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜೇಶ್ವರಿ ಅವರು ತಮ್ಮ ಪ್ರತಿಸ್ಪರ್ಧಿಯಾದ ಜನತಾದಳ ಪಕ್ಷದ ಅಭ್ಯರ್ಥಿ ಎನ್.ತಿಪ್ಪಣ್ಣ ಅವರನ್ನು  ೭೬,೦೮೫ ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ಎರಡನೆ ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದರು.

 

          ೧೯೯೧ ರ ಚುನಾವಣೆಯಲ್ಲಿ ಮತ್ತೆ ಬಸವರಾಜೇಶ್ವರಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿ ಜನತಾದಳ ಪಕ್ಷದ ವೈ.ನೆಟ್ಟಕಲ್ಲಪ್ಪ ಅವರನ್ನು  ೬೫,೯೮೧ ಮತಗಳ ಅಂತರದಿಂದ ಸೋಲಿಸಿ ಸತತ ಮೂರನೇ ಬಾರಿಗೆ ಆಯ್ಕೆಯಾದರು.  ಈ ಚುನಾವಣೆಯಲ್ಲಿ ಒಟ್ಟು ೧೪ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

 

          ಅತ್ಯಂತ ಜಿದ್ದಾಜಿದ್ದಿಯಿಂದ ಹಾಗೂ ಕುತೂಹಲದಿಂದ ಕೂಡಿದ್ದ ೧೯೯೬ ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೆ.ಸಿ. ಕೊಂಡಯ್ಯ ಅವರು ತಮ್ಮ ಪ್ರತಿಸ್ಪರ್ಧಿ ಜನತಾದಳ ಪಕ್ಷದಿಂದ ಸ್ಪರ್ಧಿಸಿದ ಎನ್.ತಿಪ್ಪಣ್ಣ ಅವರನ್ನು  ಕೇವಲ ೪,೫೧೯ ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದರು.  ಈ ಚುನಾವಣೆಯಲ್ಲಿ ಬರೋಬ್ಬರಿ ೨೫ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು.

 

          ೧೯೯೮ ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರು ಲೋಕಶಕ್ತಿ ಪಕ್ಷದ ಅಭ್ಯರ್ಥಿ ಎನ್.ತಿಪ್ಪಣ್ಣ ಅವರನ್ನು ೬೩,೭೩೮ ಮತಗಳಿಂದ ಪರಾಭವಗೊಳಿಸಿ ಎರಡನೇ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.

         

 

          ೧೯೯೯ ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಇಡೀ ದೇಶದ ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋನಿಯಾ ಗಾಂಧಿ ಹಾಗೂ ಬಿಜೆಪಿ ಪಕ್ಷದಿಂದ ಸುಷ್ಮಾ ಸ್ವರಾಜ್ ಅವರು ಸ್ಪರ್ಧಿಸಿದ್ದರು.  ಅತ್ಯಂತ ಕುತೂಹಲಕಾರಿಯಾಗಿದ್ದ ಈ ಚುನಾವಣೆಯಲ್ಲಿ  ಸೋನಿಯಾ ಗಾಂಧಿಯವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಸುಷ್ಮಾ ಸ್ವರಾಜ್ ಅವರನ್ನು ೫೬,೧೦೦ ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.  ಈ ಚುನಾವಣೆಯಲ್ಲಿ ಜನತಾದಳ (ಎಸ್) ಪಕ್ಷದಿಂದ ಕೆ. ಮಹಾಲಿಂಗಪ್ಪ ಕೂಡ ಸ್ಪರ್ಧಿಸಿ ೨೮,೮೫೫ ಮತಗಳನ್ನು ಗಳಿಸಿದರು.

 ಸೋನಿಯಾಗಾಂಧಿ ಅವರು ಉತ್ತರಪ್ರದೇಶ ರಾಜ್ಯದ ಅಮೇಥಿ ಹಾಗೂ ಕರ್ನಾಟಕದ ಬಳ್ಳಾರಿ ಕ್ಷೇತ್ರಗಳೆರಡರಲ್ಲೂ ಸ್ಪರ್ಧಿಸಿ, ಎರಡೂ ಕ್ಷೇತ್ರಗಳಲ್ಲಿ ವಿಜಯಿಯಾಗಿದ್ದರು.  ಅವರು ಬಳ್ಳಾರಿ ಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದ ತೆರವಾದ ಸ್ಥಾನಕ್ಕೆ ೨೦೦೦ ರಲ್ಲಿ ಉಪ ಚುನಾವಣೆ ಜರುಗಿತು.  ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಬಸವನಗೌಡ ಅವರು ಹಾಗೂ ಬಿಜೆಪಿ ಪಕ್ಷದಿಂದ ಕೆ.ಎಸ್.ವೀರಭದ್ರಪ್ಪ ಅವರು ಸ್ಪರ್ಧಿಸಿದರು.  ಕೆ. ಬಸವನಗೌಡ ಅವರು ಬಿಜೆಪಿಯ ವೀರಭದ್ರಪ್ಪ ಅವರಿಗಿಂತ ೯೬,೦೨೦ ಮತ ಹೆಚ್ಚು ಪಡೆದು ವಿಜಯಶಾಲಿಯಾದರು. ಈ ಚುನಾವಣೆ ಕಣದಲ್ಲಿ ಒಟ್ಟು ೦೭ ಅಭ್ಯರ್ಥಿಗಳು ಉಳಿದಿದ್ದರು.

 

          ೨೦೦೪ ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಕರುಣಾಕರ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರಿಗಿಂತ  ೩೧,೬೭೬ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು.  ಈ ಚುನಾವಣೆಯಲ್ಲಿ ಒಟ್ಟು ೦೮ ಅಭ್ಯರ್ಥಿಗಳು ಕಣದಲ್ಲಿದ್ದರು.

         

          ೨೦೦೯ ರಲ್ಲಿ ಜರುಗಿದ ಚುನಾವಣೆ ಕೂಡ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು.  ಬಿಜೆಪಿ ಅಭ್ಯಥಿಯಾಗಿ ಸ್ಪರ್ಧಿಸಿದ ಜೆ.ಶಾಂತಾ ಅವರು, ಕಾಂಗ್ರೆಸ್‌ನ ಎನ್.ವೈ.ಹನುಮಂತಪ್ಪ ಅವರಿಗಿಂತ ಕೇವಲ ೨೨೪೩ ಹೆಚ್ಚು ಮತಗಳನ್ನು ಪಡೆದು ಜಯಶಾಲಿಯಾದರು.  ಈ ಚುನಾವಣೆಯಲ್ಲಿ ಒಟ್ಟು ೦೮ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

         

          ೨೦೧೪ ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಅವರು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎನ್.ವೈ.ಹನುಮಂತಪ್ಪ ಅವರನ್ನು ೮೫,೧೪೪ ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.  ಈ ಚುನಾವಣೆಯಲ್ಲಿ ಒಟ್ಟು ೧೨ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.  ಈ ಚುನಾವಣೆಯಲ್ಲಿ ನೋಟಾ ಗೆ ಒಟ್ಟು ೧೧,೩೨೦ ಮತಗಳು ಚಲಾವಣೆಯಾಗಿದ್ದವು.

 

          ೨೦೧೮ ರಲ್ಲಿ ಜರುಗಿದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಿ.ಎಸ್.ಉಗ್ರಪ್ಪ ಅವರು ಹಾಗೂ ಬಿಜೆಪಿ ಪಕ್ಷದಿಂದ ಜೆ.ಶಾಂತಾ ಅವರು ಸ್ಪರ್ಧಿಸಿದರು.  ಚುನಾವಣೆಯಲ್ಲಿ ವಿ.ಎಸ್. ಉಗ್ರಪ್ಪ ಅವರು ಬಿಜೆಪಿ ಪಕ್ಷದ ಜೆ. ಶಾಂತಾ ಅವರನ್ನು ೨,೪೩,೧೬೧ ಭಾರಿ ಮತಗಳ ಅಂತರದಿಂದ ಪರಭಾವಗೊಳಿಸಿದರು.  ಈ ಚುನಾವಣೆಯಲ್ಲ್ಲಿ ೦೫ ಅಭ್ಯರ್ಥಿಗಳು ಕಣದಲ್ಲಿದ್ದರು.

 

      ೨೦೧೯ ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ವೈ.ದೇವೆಂದ್ರಪ್ಪ ಅವರು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರಿಗಿಂತ ೫೫,೭೦೭ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು.  ಈ ಚುನಾವಣೆಯಲ್ಲಿ ಒಟ್ಟು ೧೧ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.  ಚುನಾವಣೆಯಲ್ಲಿ ನೋಟಾಗೆ ಒಟ್ಟು ೯೦೨೪ ಮತಗಳು ಚಲಾವಣೆಯಾಗಿದ್ದವು.

 

 

          ಈ ಬಾರಿಯ ಲೋಕಸಭೆ ಸಾರ್ವತ್ರಿಕ ಚುನಾವಣೆಯು ಶಾಂತಿ ಹಾಗೂ ನ್ಯಾಯಯುತವಾಗಿ ನಡೆಯಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ನೇತೃತ್ವದಲ್ಲಿ ಕೈಗೊಂಡಿದ್ದು, ಮೇ ೦೭ ರಂದು ಮತದಾನ ನಡೆಯಲಿದೆ.  ಎಲ್ಲ ಅರ್ಹ ಮತದಾರರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಅಲ್ಲದೆ ಮತದಾನ ದಿನದಂದು ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top