ಬಳ್ಳಾರಿ: ಬಳ್ಳಾರಿ ನಗರಲ್ಲಿ ಹಾಡುಹಗಲೇ ಕಿಡ್ನಾಪ್ ಆಗಿದ್ದ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಸುನೀಲ್ ಶನಿವಾರ ರಾತ್ರಿ ಪತ್ತೆಯಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ಮಕ್ಕಳ ವೈದ್ಯ ಡಾ.ಪಿ.ಸುನೀಲ್ಕುಮಾರ್ ಅವರನ್ನು ಶನಿವಾರ ರಾತ್ರಿ 9ರ ಸುಮಾರಿಗೆ ಕುರುಗೋಡು ತಾಲೂಕು ಸೋಮಸಮುದ್ರ ಗ್ರಾಮದ ಹೊಲವೊಂದರಲ್ಲಿ ಅಪಹರಣಾಕಾರರು ಬಿಟ್ಟು ಹೋಗಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸ್ರು ಡಾಕ್ಟರ್ ಅವರನ್ನು ಪತ್ತೆ ಮಾಡಿ, ಗಾಯಗೊಂಡಿದ್ದ ಡಾಕ್ಟರ್ಗೆ ಚಿಕಿತ್ಸೆ ಕೊಡಿಸಿ, ಮನೆಗೆ ಕಳುಹಿಸಿದ್ದಾರೆ. ಅಪಹರಣಕಾರರು ಮುನ್ನೂರು ರೂಪಾಯಿ ಕೊಟ್ಟು ಸುರಕ್ಷಿತವಾಗಿ ಮನೆ ತಲುಪು ಎಂದು ವೈದ್ಯರಿಗೆ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಅಪಹರಣ ಮಾಡಿದವರು ಯಾರು ಎಂಬ ಬಗ್ಗೆ ಇದುವರೆಗೂ ಸುಳಿವು ಸಿಕ್ಕಿಲ್ಲ.
ವೈದ್ಯ ಸುನೀಲ್ ಬೆಳಿಗ್ಗೆ ವಾಕಿಂಗ್ ಹೋಗಿದ್ದ ವೇಳೆ ಇಂಡಿಗೋ ಕಾರಿನಲ್ಲಿ ಬಂದ ಅಪರಿಚಿತರು ಅಪಹರಣ ಮಾಡಿದ್ದರು. ಬಳಿಕ ಬಿಡುಗಡೆಗೆ 6 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬAಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತುರ್ತು ಸಭೆ ನಡೆಸಿ, ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿದ್ದರು.
ಇದೀಗ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದ್ದು, ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.