ಮಳೆಗಾಲವನ್ನು ಜಯಿಸಿರಿ : ಡಯಾಲಿಸಿಸ್ ರೋಗಿಗಳಿಗೆ ಕಿಡ್ನಿ ಆರೈಕೆಯ ಸಲಹೆಗಳು

ಉಷ್ಣವಲಯದ ಹವಾಮಾನವು ಹೆಚ್ಚಾಗಿ ಕಂಡುಬರುವ ಭಾರತದಂತಹ ದೇಶದಲ್ಲಿ ಮಳೆಗಾಲವು ಉಪಶಮನ ನೀಡುವುದರ ಜೊತೆಗೆ,  ತನ್ನದೇ ಆದ ಆರೋಗ್ಯ-ಸಂಬಂಧಿತ ಸವಾಲುಗಳನ್ನು ಸಹ ತರುತ್ತದೆ, ವಿಶೇಷವಾಗಿ ಮೂತ್ರಪಿಂಡ ರೋಗಿಗಳಲ್ಲಿ. ಈ ಅವಧಿಯಲ್ಲಿ ಟೈಫಾಯಿಡ್, ಮಲೇರಿಯಾ, ಡೆಂಗ್ಯೂ ಮುಂತಾದ ಅತಿಸಾರ ಮತ್ತು ನೀರಿನಿಂದ ಹರಡುವ ಸೋಂಕುಗಳಲ್ಲಿನ ಉಲ್ಬಣವನ್ನು ನಾವು ಪ್ರತಿ ವರ್ಷ ನೋಡುತ್ತೇವೆ. ಮೂತ್ರಪಿಂಡದ ರೋಗಿಗೆ, ಈ ರೋಗಗಳು ಹೆಚ್ಚಿನ ಅಪಾಯಗಳನ್ನು ಉಂಟುಮಾಡಬಹುದು ಏಕೆಂದರೆ ಅವುಗಳಿಂದ ಮೂತ್ರಪಿಂಡದ ಉರಿಯೂತ ಮತ್ತು ಮೂತ್ರಪಿಂಡದ ಅಪಸಾಮಾನ್ಯ ಕ್ರಿಯೆಗಳು ಉಂಟಾಗಬಹುದು. ವಯಸ್ಸಾದ ಜನರು ಬಹಳ ಮಟ್ಟಿಗೆ ಜಡ ಜೀವನವನ್ನು ನಡೆಸುವುದರಿಂದ ಅವರು ಹಲವಾರು ಸೋಂಕುಗಳಿಗೆ ಹೆಚ್ಚಾಗಿ ಒಳಗಾಗುತ್ತಾರೆ, ಪ್ರತಿ ವರ್ಷ ಭಾರತದಲ್ಲಿ ಸುಮಾರು 2.2 ಲಕ್ಷ ಹೊಸ ರೋಗಿಗಳು ಕೊನೆಯ ಹಂತದ ಮೂತ್ರಪಿಂಡ ಕಾಯಿಲೆ (ESRD) ಯ ಪಟ್ಟಿಗೆ ಸೇರ್ಪಡೆಗೊಳ್ಳುತ್ತಾರೆ, ಇದರ ಪರಿಣಾಮವಾಗಿ ಪ್ರತಿ ವರ್ಷ ಡಯಾಲಿಸಿಸ್ಗೆ 3.4 ಕೋಟಿ ಹೆಚ್ಚುವರಿ ಬೇಡಿಕೆ ಉಂಟಾಗುತ್ತಿದೆ. 

ಮೂತ್ರಪಿಂಡವು ಮಾನವ ದೇಹಕ್ಕೆ ಬಹುಮುಖ್ಯ ಅಂಗವಾಗಿದೆ ಮತ್ತು ದೇಹದಿಂದ ಹಾನಿಕಾರಕ ವಸ್ತುಗಳನ್ನು ಬೇರ್ಪಡಿಸುವಲ್ಲಿ ಮತ್ತು ಸಾಮಾನ್ಯ ರಕ್ತದೊತ್ತಡವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಳೆಗಾಲದ ಸಮಯದಲ್ಲಿ ಸೋಂಕಿಗೆ ಒಳಗಾಗುವ ಹೆಚ್ಚಿನ ಅವಕಾಶವಿದೆ ಎಂಬುದನ್ನು ಗಮನಿಸುವುದು ಮುಖ್ಯ ಏಕೆಂದರೆ ಇದು ಸೂಕ್ಷ್ಮ ಜೀವಿಗಳು ಬೆಳೆಯಲು ಹಾಗೂ ಸೊಳ್ಳೆಗಳು ಮತ್ತು ಕಲುಷಿತ ಆಹಾರ / ನೀರಿನಂತಹ ವಿವಿಧ ಏಜೆಂಟ್ಗಳ ಮೂಲಕ ಮತ್ತು ಕಾಯಿಲೆಗಳನ್ನು ಉಂಟುಮಾಡಲು ಸೂಕ್ತ ಸಮಯವಾಗಿದೆ.

ಕಿಡ್ನಿ ರೋಗಿಗಳಿಗೆ ಈ ರೋಗಗಳು ಅಂಟಿಕೊಂಡರೆ ಅವರು ತೀವ್ರ ಅಪಾಯಕ್ಕೆ ಒಳಗಾಗುತ್ತಾರೆ. ಮಳೆಗಾಲದಲ್ಲಿ ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಹಲವಾರು ಆರೋಗ್ಯ ಕ್ರಮಗಳನ್ನು ಕೈಗೊಳ್ಳಬೇಕು.

1.ಎಲ್ಲಕ್ಕಿಂತ ಹೆಚ್ಚಾಗಿ ನೈರ್ಮಲ್ಯಕ್ಕೆ ಆದ್ಯತೆ ಕೊಡುವುದು: ನಮ್ಮಲ್ಲಿ ಹೆಚ್ಚಿನವರು ನಮ್ಮ ಮನೆಗಳು ಮತ್ತು ಸುತ್ತಮುತ್ತಲಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳುತ್ತೇವಾದರೂ, ಮಳೆಗಾಲದಲ್ಲಿ ನಾವು ಮತ್ತಷ್ಟು ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ, ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಮತ್ತು ನಮ್ಮ ಕುಡಿಯುವ ನೀರನ್ನು ಫಿಲ್ಟರ್ ಮಾಡುವುದು ಅಥವಾ ಕಾಯಿಸಿ ಆರಿಸಿದ ನೀರನ್ನು ಮಾತ್ರ ಕುಡಿಯುವುದು ನಮ್ಮ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಮಳೆಯಲ್ಲಿ ಒದ್ದೆಯಾಗುವುದು ಎಷ್ಟು ಪ್ರಲೋಭನಕಾರಿಯಾದರೂ, ಸಾಧ್ಯವಾದಷ್ಟು ತ್ವರಿತವಾಗಿ ನಿಮ್ಮ ಬಟ್ಟೆಗಳನ್ನು ಬದಲಿಸಲು ಜಾಗರೂಕತೆ ವಹಿಸಿರಿ ಏಕೆಂದರೆ ಒದ್ದೆಯಾದ ಬಟ್ಟೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯುವ ಸ್ಥಳವಾಗಿರುತ್ತದೆ. ಕೊಳಕನ್ನು ತಪ್ಪಿಸಲು ನಿಮ್ಮ ಬೂಟುಗಳನ್ನು ನಿಮ್ಮ ಕೋಣೆಯ ಹೊರಗೇ ತೆಗೆದಿಡುವುದನ್ನು ಮರೆಯಬೇಡಿ.

2.ಆಹಾರದ ಚತುರ ಆಯ್ಕೆಗಳು: ಕಟ್ಟಿಕೊಂಡಿರುವ ಒಳಚರಂಡಿ, ನೀರು-ನಿಂತಿರುವ ಬೀದಿಗಳು ಮತ್ತು ನೀರಿನ ಕೊಚ್ಚೆಗುಂಡಿಗಳು ಅಪಾಯಕಾರಿ ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದು. ಅಂತಹ ಸನ್ನಿವೇಶದಲ್ಲಿ ನೀವು ನಿಮ್ಮ ಆಹಾರ ಪದಾರ್ಥಗಳನ್ನು ಎಲ್ಲಿಂದ ತರುತ್ತೀರಿ ಮತ್ತು ಎಲ್ಲಿ ತಯಾರಿಸುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಸೂಕ್ತ. ನೀವು ಏನು ತಿನ್ನುತ್ತೀರಿ ಮತ್ತು ಎಲ್ಲಿ ತಿನ್ನುತ್ತೀರಿ ಎಂಬುದರ ಆಯ್ಕೆಯ ವಿವೇಚನೆಯು ಅತ್ಯಂತ ಮಹತ್ವದ್ದಾಗಿದೆ. ಮನೆಯಲ್ಲಿ ತಯಾರಿಸಿದ ಆಹಾರ ಮತ್ತು ಚೆನ್ನಾಗಿ ತೊಳೆದ ಹಣ್ಣುಗಳು ಕಲುಷಿತ ಆಹಾರದಿಂದ ನಿಮ್ಮನ್ನು ಪಾರುಮಾಡಬಹುದು. ವಿಶೇಷವಾಗಿ ಕಿಡ್ನಿ ರೋಗಿಗಳ ಆರೋಗ್ಯ ಕ್ರಮಗಳ ಪಟ್ಟಿಯಲ್ಲಿ ಆರೋಗ್ಯಕರ ಆಹಾರ ಪದ್ಧತಿಗಳು ಅಗ್ರಸ್ಥಾನದಲ್ಲಿರಬೇಕು.

3.ಸಮರ್ಪಕವಾಗಿ ಹೈಡ್ರೇಟ್ ಆಗಿರಿ: ಕಣ್ಣೆದುರಿನಲ್ಲಿ ಹೇರಳವಾದ ನೀರು ಮತ್ತು ಕನಿಷ್ಠ ಬೆವರುವಿಕೆಯೊಂದಿಗೆ, ನೀರನ್ನು ಕುಡಿಯುವುದನ್ನು ಮರೆತುಬಿಡುವುದು ಸಹಜವೇ. ನೀರಿನ ಸೇವನೆಯು ಕಾಯಿಲೆಗಳನ್ನು ದೂರವಿರಿಸುವ ಒಂದು   ಪ್ರಮಾಣೀಕೃತ ಕ್ರಮವಾಗಿದೆ, ಅಲ್ಲದೆ ಅದು ಮೂತ್ರಪಿಂಡದ ಕಾರ್ಯಚಟುವಟಿಕೆಗೆ ಮಾತ್ರವಲ್ಲದೆ ಮಳೆಗಾಲದ ಸಮಯದಲ್ಲಿ ಕೀಲು ನೋವು ಮತ್ತು ನಿಶ್ಶಕ್ತಿಯನ್ನು ತಪ್ಪಿಸುವಲ್ಲಿಯೂ ಸಹ ಉಪಯುಕ್ತವಾಗಿದೆ. ದಿನವಿಡೀ ನಿಗದಿತ ಪ್ರಮಾಣದ ನೀರನ್ನು ಕುಡಿಯುವ ಮುಖಾಂತರ ನಿಮ್ಮ ದೇಹವನ್ನು ಮರುಪೂರಣಗೊಳಿಸುವುದನ್ನು ಹೆಚ್ಚು ಶಿಫಾರಸು ಮಾಡಲಾಗಿದೆ ಏಕೆಂದರೆ ನೀರಿನ ನಿರ್ಬಂಧವು ಡಯಾಲಿಸಿಸ್ ರೋಗಿಗಳ ನಿರ್ವಹಣೆಯ ಮೂಲಾಧಾರವಾಗಿದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳು ಅಥವಾ ಡಯಾಲಿಸಿಸ್ ರೋಗಿಗಳು ತಮ್ಮ ವೈದ್ಯರು ಸೂಚಿಸಿದ ಪ್ರಮಾಣದ ದ್ರವಗಳ ಸೇವನೆಯ ಬಗ್ಗೆ ಗಮನ ಹರಿಸಬೇಕು ಏಕೆಂದರೆ ದ್ರವಗಳ ಅತಿಯಾದ ಸೇವನೆಯು ಮೂತ್ರಪಿಂಡದ ರೋಗಿಗಳಿಗೆ ಹಾನಿಕಾರಕವಾಗಿದೆ.

4.ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು: ನಿಮ್ಮ ರಕ್ತದಲ್ಲಿನ ಸಕ್ಕರೆಯ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ವಿಶೇಷವಾಗಿ ನೀವು ಮಧುಮೇಹವಿರುವವರಾಗಿದ್ದರೆ. ಅಧಿಕ ರಕ್ತದ ಸಕ್ಕರೆಯ ಮಟ್ಟದಿಂದ ಮೂತ್ರಪಿಂಡಗಳಿಗೆ ಹಾನಿಯಾಗಬಹುದು. ಆದ್ದರಿಂದ ಜಾಗರೂಕರಾಗಿರಿ ಮತ್ತು ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ಔಷಧಿಯನ್ನು ತೆಗೆದುಕೊಳ್ಳುವ ಮೂಲಕ ಮಧುಮೇಹಕ್ಕೆ ಔಷಧೋಪಚಾರವನ್ನು ಮಾಡಿಕೊಳ್ಳಿ. ಅಲ್ಲದೆ, ನಿಮ್ಮ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಇರಿಸಿಕೊಳ್ಳುವುದು ಸೂಕ್ತ. ಪ್ರತಿದಿನ ವ್ಯಾಯಾಮ ಮಾಡಿ, ಮತ್ತು ಎಲ್ಲಾ ಅಗತ್ಯ ಪೋಷಕಾಂಶಗಳಿರುವ ಆಹಾರವನ್ನು ಸೇವಿಸಿ. ಯಾವುದೇ ವ್ಯಾಯಾಮ ಕ್ರಮವಿಧಿಯನ್ನು ಪ್ರಾರಂಭಿಸುವ ಮೊದಲು, ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ವೈದ್ಯರು ಅಥವಾ ಫಿಟ್ನೆಸ್ ವೃತ್ತಿಪರರ ಸಲಹೆಯಿಲ್ಲದೆ ಶ್ರಮದಾಯಕ ಫಿಟ್ನೆಸ್ ನಿಯಮಗಳನ್ನು ಅಳವಡಿಸಿಕೊಳ್ಳುವುದನ್ನು ತಪ್ಪಿಸಿ.

5.ವೈದ್ಯಕೀಯ ಆರೈಕೆ: ಈ ಕಷ್ಟಕರ ಸಮಯದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಕಷ್ಟವಾಗಬಹುದು ಆದರೆ ನಿಮಗೆ ಯಾವುದೇ ರೀತಿಯ ವೈರಲ್ ಸೋಂಕುಗಳು, ಫುಡ್ ಪಾಯ್ಸನ್, ಅತಿಸಾರ ಸೋಂಕುಗಳು ಅಥವಾ ಯಾವುದೇ ಆರೋಗ್ಯದ ತೊಂದರೆಗಳ ಯಾವುದೇ ಲಕ್ಷಣಗಳು ಕಂಡುಬಂದರೆ, ನಿಮ್ಮ ಚಿಕಿತ್ಸಕರನ್ನು ತ್ವರಿತವಾಗಿ ಭೇಟಿ ಮಾಡಿ. ಮೂತ್ರಪಿಂಡದ ಕಾಯಿಲೆ ಇರುವ ರೋಗಿಗಳಿಗೆ, ನಿಯಮಿತ ತಪಾಸಣೆಗೆ ಒಳಗಾಗುವುದು ಮತ್ತು ಶಿಫಾರಸು ಮಾಡಿದ ಪ್ರಮಾಣದ ಔಷಧಿಗಳನ್ನು ಬಳಸಲು ಲಭ್ಯವಿರುವಂತೆ ಇಟ್ಟುಕೊಂಡಿರುವುದು ಬಹಳ ಮುಖ್ಯ.

 

ಮಳೆಗಾಲದ ಸಮಯದಲ್ಲಿ ನಮ್ಮ ಕಿಡ್ನಿಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾವು ಕೆಲವು ಮೂಲಭೂತ ನೈರ್ಮಲ್ಯ ಸಲಹೆಗಳನ್ನು ಪಾಲಿಸುತ್ತಿದ್ದರೂ, ನಾವು ನಮ್ಮ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಯಾವುದೇ ಪ್ರಮುಖ ಬೆಳವಣಿಗೆಗಳಿಗಾಗಿ ನಮ್ಮ ಕಿಡ್ನಿಯ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳಬೇಕು.

Facebook
Twitter
LinkedIn
Email
WhatsApp
Telegram
Tumblr

Leave a Comment

Your email address will not be published. Required fields are marked *

Translate »
Scroll to Top