ರೈತರ ಬದುಕು ಮತ್ತು ಬವಣೆಗಳ ಬಗ್ಗೆ ಚೆಲ್ಲಾಟ ಆಡಿದರೆ ಹುಷಾರ್ : ಸಿಎಂ ಎಚ್ಚರಿಕೆ

ವಿಜಯನಗರ: ರೈತರಿಗೆ ಬೀಜ ಗೊಬ್ಬರದ ಕೊರತೆ ಆಗಬಾರದು. ಆದರೆ ನಿಮ್ಮನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಆಗಿರುವ ಮಳೆ ಮತ್ತು ಕೃಷಿ ಚಟುವಟಿಕೆಗಳ ಮಾಹಿತಿ ಪಡೆಯುವ ಮೂಲಕ ಮುಖ್ಯಮಂತ್ರಿಗಳು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಆರಂಭಿಸಿದರು. ಸಮಾಧಾನಕರವಾಗಿ ಮಳೆ ಆಗಿದ್ದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ರೈತರಿಗೆ ಅಗತ್ಯವಾದ ಬೀಜ, ರಸಗೊಬ್ಬರ ಇತ್ಯಾದಿ ಅಗತ್ಯಗಳ ಸಂಗ್ರಹದ ಪ್ರಮಾಣ ಎಷ್ಟಿದೆ ಎನ್ನುವ ಕುರಿತಂತೆ ಒಂದೊಂದಾಗಿ ಮಾಹಿತಿ ಪಡೆದು ಒಮ್ಮೆ ಕೊಟ್ಟ ಬೀಜ ಮೊಳಕೆಯೊಡೆಯದಿದ್ದರೆ ಎರಡನೇ ಸುತ್ತು ಕೂಡ ಬೀಜಗಳನ್ನು ಕಡ್ಡಾಯವಾಗಿ ರೈತರಿಗೆ ವಿತರಿಸಬೇಕು. ರೈತರಿಂದ ದೂರು ಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ ಎಂದು ಎಚ್ಚರಿಸಿದರು. 

ಉಪ ರೈತ ಸಂಪರ್ಕಗಳನ್ನು ಹೆಚ್ಚೆಚ್ಚು ತೆರೆದು ರೈತರಿಗೆ ಬೀಜ, ರಸಗೊಬ್ಬರ ವಿತರಣೆ ಮಾಡಲು ಏನು ಸಮಸ್ಯೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಹಗರಿಬೊಮ್ಮನಹಳ್ಳಿ ಸೇರಿ ನಾನಾ ತಾಲ್ಲೂಕುಗಳಲ್ಲಿ ಈ ವ್ಯವಸ್ಥೆ  ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಬರ ಪರಿಹಾರ 130 ಕೋಟಿ ವಿತರಣೆಯಾಗಿದೆ: ಜಿಲ್ಲೆಯಲ್ಲಿ ಬಾಕಿ ಇಲ್ಲ : ರಾಜ್ಯ ಸರ್ಕಾರದಿಂದ ನೀಡಿದ ಬರ ಪರಿಹಾರದ ಮೊತ್ತ 130 ಕೋಟಿ ರೂಪಾಯಿಗಳನ್ನು ಸಂಪೂರ್ಣವಾಗಿ ವಿತರಣೆಯಾಗಿದೆ. ಜಿಲ್ಲೆಯಲ್ಲಿ ಯಾವ ಅರ್ಹ ರೈತರಿಗೂ ಬಾಕಿ ಉಳಿಸಿಕೊಂಡಿಲ್ಲ ಎಂದು ಅಧಿಕಾರಿಗಳು ದಾಖಲೆ ಮುಂದಿಟ್ಟು ವಿವರಿಸಿದರು. ಬೆಳೆ ಸಮೀಕ್ಷೆಗಳನ್ನು ವೈಜ್ಞಾನಿಕವಾಗಿ ನಡೆಸಿ ಒಬ್ಬರಿಗೂ ಅನ್ಯಾಯ ಆಗದಂತೆ ಪ್ರತಿಯೊಬ್ಬ ರೈತರಿಗೂ ಡಿಬಿಟಿ ಮೂಲಕ ಒಬ್ಬರಿಗೂ ಬಾಕಿ ಉಳಿಯಂತೆ ಅವರ ಖಾತೆಗಳಿಗೆ ಹಣ ಜಮೆ ಆಗಿರುವುದನ್ನು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಬೆಳೆ ವಿಮೆ ಸಮರ್ಪಕವಾಗಿ ದೊರಕಿಸಲಾಗಿದೆ: ಅತಿ ಹೆಚ್ಚುಮಳೆಯಿಂದ ಆದ ಹಾನಿ, ನೋಂದಣಿ ಮಾಡಿಕೊಂಡ ಎಲ್ಲಾ ರೈತರಿಗೂ, ಬೆಳೆ ಕಟಾವು ಹೊತ್ತಲ್ಲೂ ಅಗತ್ಯಕ್ಕೆ ತಕ್ಕಂತೆ ಬೆಳೆ ವಿಮೆ ವಿತರಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ರೈತರ ಜಮೀನುಗಳಿಗೆ ಹೋಗಿ ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ರೈತರಿಗೆ ತಿಳಿವಳಿಕೆ ನೀಡಿದ್ದೀರಾ ಎಂದು ಪ್ರಶ್ನಿಸಿದ ಅಧಿಕಾರಿಗಳು, ಯಾವ ಯಾವ ಅಧಿಕಾರಿಗಳು ಯಾವ ಯಾವ ಹಳ್ಳಿಗೆ ಹೋಗಿದ್ದೀರಿ? ಎಷ್ಟು ರೈತರಿಗೆ ತಿಳಿವಳಿಕೆ ನೀಡಿದ್ದೀರಿ? ನೀವು ಭೇಟಿ ನೀಡಿ ತಿಳಿವಳಿಕೆ ನೀಡಿದ ಡೈರಿ ಎಲ್ಲಿದೆ ಎಂದು ಪ್ರಶ್ನಿಸಿದರು. ಡೈರಿ ಬರೆದಿದ್ದೀನಿ. ಆದರೆ ಅದನ್ನು ಕಚೇರಿಯಲ್ಲೇ ಬಿಟ್ಟು ಬಂದಿದ್ದೀನಿ  ಎಂದು ಮಾಹಿತಿ ನೀಡಿದ ಅಧಿಕಾರಿ ವಿರುದ್ಧ ಸಿಎಂ ಗರಂ ಆದರು. ಡೈರಿ ಇಲ್ಲದೆ ಬರಿ ಕೈಲಿ ಬಂದಿದ್ದಕ್ಕೆ ತರಾಟೆಗೆ ತೆಗೆದುಕೊಂಡು ಮುಂದೆ ಹೀಗಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದರು. 

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ವಿಳಂಭ: ತರಾಟೆ ತೆಗೆದುಕೊಂಡ ಸಿಎಂ

2023-24 ರಲ್ಲಿ ಒಟ್ಟು 34 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಾಲಿನಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಅಧಿಕಾರಿಗಳ ಮಾಹಿತಿಗೆ ಪ್ರತಿಯಾಗಿ, ಇವರಲ್ಲಿ ಪ್ರತಿಯೊಬ್ಬ ರೈತರ ಕುಟುಂಬಕ್ಕೆ ಪರಿಹಾರ ದೊರಕಿದೆಯೇ ಎಂದು ಪ್ರಶ್ನಿಸಿದರು. ಉಳಿದೆಲ್ಲರಿಗೂ ಸರಿಯಾದ ಸಮಯಕ್ಕೆ ಆತ್ಮಹತ್ಯೆ ಪರಿಹಾರದ 5 ಲಕ್ಷ ಮೊತ್ತ ಜಮೆ ಆಗಿದೆ. ಐದು ಮಂದಿ ರೈತರ ಕುಟುಂಬಕ್ಕೆ ಮಾತ್ರ ತಾಂತ್ರಿಕ ತೊಂದರೆ ಆಗಿದ್ದು ಏಕೆ? ಎಫ್ಎಸ್ಎಲ್ ವರದಿ ೨೦ ದಿನದೊಳಗೆ ಬರುತ್ತದೆ. ಆದರೂ ಪ್ರಕ್ರಿಯೆ ತಡೆವಾಗಿದ್ದಕ್ಕೆ ಮುಖ್ಯಮಂತ್ರಿಗಳು ಗರಂ ಆಗಿ ತರಾಟೆಗೆ ತೆಗೆದುಕೊಂಡರು. ರೈತರ ಬದುಕು ಮತ್ತು ಬವಣೆಗಳ ಬಗ್ಗೆ ಚೆಲ್ಲಾಟ ಆಡಿದರೆ ಹುಷಾರ್ ಎಂದು ಎಚ್ಚರಿಸಿದರು.

ಸರ್ಕಾರ ಹಣ ಕೊಟ್ಟಿದೆ: ರೈತರಿಗೆ ತಲುಪಿಸಲು ಏನು ತೊಂದರೆ : ಸರ್ಕಾರ ಅಗತ್ಯವಿದ್ದಷ್ಟು ಹಣವನ್ನು ಕೊಟ್ಟು ಯಾವ ಕಾಲ ಆಯ್ತು. ಆದರೂ ಸರ್ಕಾರ ಕೊಟ್ಟ ಹಣವನ್ನು ರೈತರ ಕುಟುಂಬಗಳಿಗೆ ತಲುಪಿಸಲು ಏನು ತೊಂದರೆ ಆಗಿದೆ ಎಂದು ಪ್ರಶ್ನಿಸಿದ ಸಿಎಂ ಇದನ್ನು ಸಹಿಸುವುದಿಲ್ಲಎಂದರು. ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಗವಿಯಪ್ಪ, ಕಂಪ್ಲಿ ಗಣೇಶ್, ಲತಾ ಎಂ.ಪಿ.ಪ್ರಕಾಶ್, ಶ್ರೀನಿವಾಸ್ ಸಭೆಯಲ್ಲಿ ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top