ವರ್ಗಾವಣೆಗೊಂಡು 15 ದಿನ ಕಳೆದರೂ ಕುರ್ಚಿ ಬಿಡದ ಬಿಡಿಎ ಮುಖ್ಯ ಎಂಜಿನಿಯರ್‌….!

ಬೆಂಗಳೂರು :  ವರ್ಗಾವಣೆಗೊಂಡು 15 ದಿನ ಕಳೆದರೂ ಬಿಡಿಎ ಮುಖ್ಯ ಎಂಜಿನಿಯರ್‌ ಎಚ್.ಆರ್.‌ ಶಾಂತರಾಜಣ್ಣ ಕುರ್ಚಿ ಬಿಟ್ಟು ಕದಲುತ್ತಿಲ್ಲ…..

ಇದೇನು ಬಿಡಿಎ ಮಹಿಮೆಯೂ?… ಗುತ್ತಿಗೆದಾರ ಲಾಬಿಯೋ ಅಥವಾ ಇಲ್ಲಿನ ಕಮಾಯಿ ಕಾರಣವೋ ಗೊತ್ತಿಲ್ಲ… ಈ ಅಧಿಕಾರಿಯ ಕುರ್ಚಿ ವ್ಯಾಮೋಹ ಮಾತ್ರ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿಯವರ ಆದೇಶದ ಮೇರೆಗೆ ಕಳೆದ ತಿಂಗಳ 22 ರಂದು ಇವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಇಲಾಖೆ ಪ್ರಸ್ತುತ ಸ್ಥಳ ನಿರೀಕ್ಷಣೆಯಲ್ಲಿರುವ ಟಿ.ಡಿ. ನಂಜುಂಡಪ್ಪ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಎಚ್.ಆರ್.‌ ಶಾಂತರಾಜಣ್ಣ, ಅಭಿಯಂತರ ಸದಸ್ಯರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ಹುದ್ದೆಗೆ ನಿಯೋಜನೆ ಮೇರೆಗೆ ವರ್ಗಾಯಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಎಚ್.ಆರ್.‌ ಶಾಂತರಾಜಣ್ಣ ಅವರಿಗೆ ಮುಂದಿನ ಸ್ಥಳ ನಿಯುಕ್ತಿಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳತಕ್ಕದ್ದು ಎಂದು ಆದೇಶಿಸಲಾಗಿದೆ.

 

ಇದು ಸರ್ಕಾರಿ ಆದೇಶ. ಸರ್ಕಾರದ ನಿಯಮದ ಪ್ರಕಾರ, ಸರ್ಕಾರಿ ನೌಕರರ ವರ್ಗಕ್ಕೆ ಮಾರ್ಗಸೂಚಿ ಸೂಚಿಸುವಂತೆ ಕಡ್ಡಾಯ ನಿರೀಕ್ಷಣಾವಧಿಯಲ್ಲಿ ಉಳಿಯಬಾರದು. ಈ ನಿಯಮ ಎಲ್ಲ ನೌಕರರಿಗೂ ಅನ್ವಯವಾಗಲಿದೆ. ಇದನ್ನು ಎಲ್ಲ ಇಲಾಖೆ ಮುಖ್ಯಸ್ಥರಿಗೆ 2018ರಲ್ಲೇ ಆದೇಶ ನೀಡಲಾಗಿದೆ. ಇದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಹೀಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ, ಸರ್ಕಾರಿ ಆದೇಶವಿದ್ದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಚ್.ಆರ್.‌ ಶಾಂತರಾಜಣ್ಣ ಅವರು, ಅವರ ಸ್ಥಾನಕ್ಕೆ ವರ್ಗಾವಣೆಗೊಂಡು ಬಂದ ಟಿ.ಡಿ. ನಂಜುಂಡಪ್ಪ ಅವರಿಗೆ, ಸರ್ಕಾರಿ ಆದೇಶವಾಗಿ ಇಲ್ಲಿಗೆ 15 ದಿನ ಕಳೆದರೂ  ಅಧಿಕಾರ ಹಸ್ತಾಂತರಿಸಿದೇ ಸತಾಯಿಸುತ್ತಿದ್ದಾರೆ.

ಅಷ್ಟೇ ಅಲ್ಲ, ಸರ್ಕಾರಿ ಆದೇಶದ ನಂತರವೂ ಮೂರು ದಿನಗಳ ಕಾಲ ಕುರ್ಚಿಯಲ್ಲಿ ಕುಳಿತು ಅಧಿಕಾರ ಚಲಾಯಿಸಿದ್ದಾರೆ. ಸಾಲದು ಎಂದು, ಕಚೇರಿಯ ಮುಂದಿನ ನೇಮ್‌ ಪ್ಲೇಟ್‌ ಬದಲಿಸಿಲ್ಲ. ಅವರಿಗೆ ಕೊಟ್ಟಿರುವ ವಾಹನವನ್ನು ಕಚೇರಿಗೆ ಹಿಂತಿರುಗಿಸಿಲ್ಲ.

ಕುತೂಹಲಕರ ಸಂಗತಿ ಎಂದರೆ, ಬಿಡಿಎ ಮುಖ್ಯ ಎಂಜಿನಿಯರ್‌ ಆಗಿರುವ ಎಚ್.ಆರ್.‌ ಶಾಂತರಾಜಣ್ಣ ಅವರು, ಕಳೆದ ನಾಲ್ಕು ವರ್ಷ, ಒಂದು ತಿಂಗಳ ಕಾಲ ಅದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸರ್ಕಾರದ ವರ್ಗಾವಣೆ ನಿಯಮವನ್ನು ಪಾಲಿಸಿ, ವರ್ಗಾವಣೆಗೊಂಡು ಬಂದ ನಂಜುಂಡಪ್ಪ ಅವರಿಗೆ ಅಧಿಕಾರ ನೀಡದೆ, ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ್ದಾರೆ.

ಈ ನಡುವೆ ಗುತ್ತಿಗೆದಾರರು ಮತ್ತು ಸಾರ್ವಜನಿಕರ ಎದುರು, ʼನಾನು ಮತ್ತೆ ಇದೇ ಹುದ್ದೆಗೆ ನಿಯುಕ್ತಿಗೊಳ್ಳುತ್ತೇನೆ. ಆ ಬಗ್ಗೆ ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಅವರಿಂದ ಲೆಟರ್‌ ಹಾಕಿಸುತ್ತೇನೆʼ ಎಂದು ಶಾಂತರಾಜಣ್ಣ ಹೇಳಿಕೊಂಡಿರುವುದನ್ನು ಬಿಡಿಎ ಬಳಿ ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯ ಎಂಜಿನಿಯರ್‌ ಟಿ.ಡಿ. ನಂಜುಂಡಪ್ಪ ಅವರು, ʼನಾನು ಸರ್ಕಾರದ ಆದೇಶ ಪಾಲಿಸುತ್ತಿದ್ದೇನೆ. ಸರ್ಕಾರದ ಅಧಿಸೂಚನೆಯಂತೆ ಬಿಡಿಎಗೆ ಬಂದಿದ್ದೇನೆ. ಆದರೆ ಶಾಂತರಾಜಣ್ಣ ಅವರು 15 ದಿನವಾದರೂ ಚಾರ್ಜ್‌ ನೀಡದೆ, ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ್ದಾರೆʼ ಎಂದರು.

ಇದರಿಂದ ಬಿಡಿಎನಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಗುತ್ತಿಗೆದಾರರು ಪ್ರತಿದಿನ ಕಚೇರಿಗಳಿಗೆ ಅಲೆಯುವಂತಾಗಿದೆ. ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳು ಒದುಗುತ್ತಿಲ್ಲ ಎಂದು ದೂರು ಕೇಳಿಬರತೊಡಗಿದೆ.

 

ಈ ಬಗ್ಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ ನವರು ತಕ್ಷಣ ಇತ್ತ ಗಮನ ಹರಿಸಬೇಕಾಗಿ ಸಾರ್ವಜನಿಕರು ವಿನಂತಿಸಿಕೊಂಡಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top