ಗಾನ ಸರಸ್ವತಿ ಲತಾ ಮಂಗೇಶ್ಕರ್ ಅವರ ಅಗಲಿಕೆಗೆ ಬಸವರಾಜ ಬೊಮ್ಮಾಯಿ ಸಂತಾಪ

ಬೆಂಗಳೂರು:ಗಾನ ಸರಸ್ವತಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಲತಾ ಮಂಗೇಶ್ಕರ ಅವರು ಭಾರತ ದೇಶದ ಸಾರಸ್ವತ ಲೋಕದ ಮಿನುಗುವ ತಾರೆ. ಕಾಲಾತೀತವಾಗಿ ಗಾನ ಸ್ವರವನ್ನು ಶ್ರೀಮಂತ ಗೊಳಿಸಿದವರು. ಅವರ ಗಾಯನ ಕೇವಲ ಸಿನಿಮಾ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಭಜನೆಗಳು, ದೇಶಭಕ್ತಿ ಗೀತೆಗಳು, ಅದರಲ್ಲೂ ಎ ಮೆರೆ ವತನ್ ಕೇ ಲೋಗೋ ಹಾಡು ಹಿಮಾಲಯದಷ್ಟೇ ಚಿರಸ್ಥಾಯಿ. ಇಂದಿಗೂ ಆ ಹಾಡು ಕೇಳಿದರೆ ಕಣ್ಣಲ್ಲಿ ನೀರು ಹರಿದು, ದೇಶಭಕ್ತಿ ಉಕ್ಕಿ ಹರಿಯುತ್ತದೆ. ಅಷ್ಟು  ಪ್ರೇರಣಾದಾಯಕವಾದ ಧ್ವನಿ ಮತ್ತು ಹಾಡುಗಾರಿಕೆ ಅವರದ್ದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಲತಾ ಅವರನ್ನು ಸ್ಮರಿಸಿದರು.

ಅವರು ಸಾವಿರಾರು ಹಾಡುಗಳನ್ನು ಹಾಡಿ ಗಾನಸುಧೆಯನ್ನೇ ಹರಿಸಿದ್ದಾರೆ. ಎಲ್ಲಿವರೆಗೂ ಭೂಮಿಯ ಮೇಲೆ ಸಂಗೀತ, ಹಾಡುಗಾರಿಕೆ ಇರುತ್ತದೆಯೋ, ಅಲ್ಲಿವವರೆಗೂ ಲತಾ ಮಂಗೇಶ್ಕರ್ ಅವರು ಎಲ್ಲರ ಮನಗಳಲ್ಲಿ , ಹೃದಯಗಳಲ್ಲಿ ನೆಲೆಸಿರುತ್ತಾರೆ. ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ ಎಂದರು.

ಲತಾ ಮಂಗೇಶ್ಕರ್ ಅವರು ಕನ್ನಡದಲ್ಲಿಯೂ ಹಾಡಿದ್ದು, ಕನ್ನಡದ ನಂಟನ್ನು ಹೊಂದಿದ್ದರು. ಅವರ ಹಾಡುಗಳು ಅತ್ಯಂತ ಪ್ರಸಿದ್ಧವಾಗಿವೆ. ಅವರ ಅಗಲಿಕೆಯಿಂದ ನಮ್ಮೆಲ್ಲರಿಗೂ ಅಪಾರ ದುಃಖವಾಗಿದೆ. ಭಾರತದ ಕೋಗಿಲೆ ಹಾಡನ್ನು ನಿಲ್ಲಿಸಿರುವುದು ದುಃಖದ ಸಂಗತಿ. ನಾವೆಲ್ಲ ಅವರ ಹಾಡು ಕೇಳಿಯೇ ಬೆಳದಿದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಹಾಗೂ ಅಸಂಖ್ಯ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ. ಸಂಗೀತ ಲೋಕದ ತಾರೆಯಾಗಿದ್ದ ಅವರು ಸದಾ ಕಾಲ ಮೀನುಗುತ್ತಿರಲಿ. ಪ್ರತಿ ಕ್ಷಣವೂ ಅವರ ಹಾಡು ದೇಶದಲ್ಲಿ ಎಲ್ಲಿಯಾದರೂ ಕೇಳಿಬರುತ್ತದೆ. ಪ್ರತಿಕ್ಷಣವೂ ಲತಾ ಮಂಗೇಶ್ಕರ್ ಅವರು ನಮ್ಮ ನೆನೆಪಿನ ಸದಾ ಅಂಗಳದಲ್ಲಿ ಇರುತ್ತಾರೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top