ಕಿವಿಯಲ್ಲಿ ಗುಟ್ಟಾಗಿ ಹೇಳಿದ ಕೋರಿಕೆಯನ್ನು ಈಡೇರಿಸುವ ಬಸವಣ್ಣ

ದೇವನಹಳ್ಳಿ : ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಬಹಳ ಪುರಾತನ ದೇವಾಲಯ ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇಗುಲ. ಈ ಸ್ಥಳದಲ್ಲಿ ಜನ ವಾಸ ಮಾಡಲು ಆರಂಭಿಸಿದಾಗಿಂದ ಇಲ್ಲಿನ ಬಯಲೊಂದರಲ್ಲಿ ಕಾಣಿಸಿಕೊಂಡ ಬಸವನ ವಿಗ್ರಹವಿದು. ಜನ ಇದಕ್ಕೆ ಪೂಜಿಸುತ್ತಾ, ಕೈಮುಗಿಯುತ್ತಾ ಬಸವಣ್ಣನ ಪಕ್ಕದಲ್ಲಿ ಕೂತು ತಮ್ಮ ಕೋರಿಕೆಗಳನ್ನು ಈಡೇರಿಸು ಎಂದು ಕೇಳಿಕೊಂಡರೆ ಕೆಲ ದಿನಗಳಲ್ಲಿ ಕೋರಿಕೆ ಈಡೇರುತ್ತಿತ್ತು. ಗುಟ್ಟಾಗಿ ಬಸಬಣ್ಣನ ಕಿವಿಯಲ್ಲಿ ಕೇಳಿದ ಕೋರಿಕೆ ಸದ್ದಿಲ್ಲದೇ ಈಡೇರುತ್ತಿತ್ತು.ಬಸವಣ್ಣನಿಗೆ ಆಶ್ರಯ: ಮುಂದಿನ ದಿನಗಳಲ್ಲಿ ಜನ ನಮ್ಮನ್ನು ಕಾಯುವ ದೇವರು ಬಯಲಲ್ಲಿ ಇದ್ದಾನೆ ಎಂದು ಒಂದು ಸೂರು ಕಟ್ಟಿದರು. ಅದಾದ ನಂತರ ಗುಡಿ ಭದ್ರವಾಗಿರಲೆಂದು ಬಾಗಿಲು ಇಡಲಾಯಿತು. ಆದರೆ ಮರುದಿನ ಬೆಳಗ್ಗೆ ನೋಡುವಷ್ಟರಲ್ಲಿ ಇರಿಸಿದ ಬಾಗಿಲು ಪಕ್ಕದಲ್ಲಿ ಇದ್ದ ಕಲ್ಯಾಣಿಯ ನೀರಿನಲ್ಲಿ ಬಿದ್ದಿರುತ್ತಿತ್ತು. ರಾತ್ರೋ ರಾತ್ರಿ ಆಗುವ ಈ ವಿಚಿತ್ರ ಭಕ್ತರಿಗೆ ಯಕ್ಷಪ್ರಶ್ನೆ ಯಾಯಿತು. ಮತ್ತೆ ಮತ್ತೆ ಗರ್ಭಗುಡಿಗೆ ಬಾಗಿಲಿನ ವ್ಯವಸ್ಥೆ ಮಾಡಲಾಯಿತು. ಆದರೆ ಪ್ರತಿಸಲವೂ ಬಾಗಿಲು ಕಳಚಿ ಬೀಳುತ್ತಿತ್ತು. ಕೊನೆಗೆ ಭಕ್ತಾದಿಗಳು, ಊರಿನ ಜನರು ಬಯಲು ಬಸವೇಶ್ವರನಿಗೆ ಬಾಗಿಲು ಹಾಕಿ ಬಂಧನ ಮಾಡಬಾರದೆಂಬ ತೀರ್ಮಾನಕ್ಕೆ ಬಂದು ಗರ್ಭಗುಡಿ ಮಾತ್ರವೇ ಇರುವಂತೆ ವ್ಯವಸ್ಥೆ ಮಾಡಲಾಯಿತು.ಬಸವಣ್ಣನಿಂದ ಸಿಗುವ ಹೂ ಪ್ರಸಾದ: ತಮ್ಮ ಕಾರ್ಯಸಿದ್ದಿ ಆಗುವ ಬಗ್ಗೆ ದೇವರ ಬಳಿ ಹೂ ಪ್ರಸಾದ ಕೇಳಬಹುದು. ದೇವರು ಬಲದಿಂದ ಹೂ ಬೀಳಿಸಿದರೆ ಕಾರ್ಯ ಶೀಘ್ರ ಫಲ ನೀಡುತ್ತದೆ ಎಂದು ಅರ್ಥ. ಎಡ ಭಾಗದಿಂದ ಪ್ರಸಾದ ನೀಡಿದರೆ ಕಾರ್ಯ ತಡವಾಗುತ್ತದೆ ಎಂದು ಅರ್ಥ.

ಕಿವಿಯಲ್ಲಿ ಹೇಳುವ ಕೋರಿಕೆ:
ಯಾವ ಜಾತಿ ಮತ ಬೇಧವೂ ಇಲ್ಲದೆ ಯಾರೂ ಬೇಕಾದರೂ ಗರ್ಭಗುಡಿಯ ಬಸವಣ್ಣನಿಗೆ ತಮ್ಮ ಕೋರಿಕೆಯನ್ನು ಕಿವಿಯಲ್ಲಿ ಹೇಳಿಕೊಳ್ಳಬಹುದು. ಕೋರಿಕೆ ಈಡೇರಿದ ಮೇಲೆ ಭಕ್ತರು ಬಂದು ಹರಕೆ ತೀರಿಸುತ್ತಾರೆ. ಬಹಳಷ್ಟು ಭಕ್ತಾದಿಗಳಿಗೆ ಈ ಅನುಭವವಾಗಿದ್ದು, ಹೆಚ್ಚು ಪ್ರಚುರತೆ ಪಡೆಯುತ್ತಿದೆ.ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ: ಶ್ರೀ ಬಯಲು ಬಸವೇಶ್ವರ ಅನೇಕರಿಗೆ ಮನೆ ದೇವರಾಗಿದ್ದಾನೆ. ಕಾರ್ತಿಕ ಮಾಸದ ಸೋಮವಾರಗಳಲ್ಲಿ ಸ್ವಾಮಿಯ ಮೂಲವಿಗ್ರಹಕ್ಕೆ ರುದ್ರಾಭಿಷೇಕ, ವಿಶೇಷ ಬೆಣ್ಣೆ ಅಲಂಕಾರ, ಹೂವಿನ ಅಲಂಕಾರವಾಗುತ್ತದೆ. ಮೂಲವಿಗ್ರಹಕ್ಕೆ ಹೊಂದುವಂತಹ ಬೆಳ್ಳಿಯ ಕವಚ ಮಾಡಿಸಿದ್ದು, ವಿಶೇಷ ದಿನಗಳಂದು ದೇವರಿಗೆ ಬೆಳ್ಳಿಯ ಕವಚ ಧಾರಣೆ ಮಾಡುತ್ತಾರೆ.ಮೊದಲ ಆಹ್ವಾನ ಬಸವಣ್ಣನಿಗೆ:
ಕೋರಿಕೆ ಈಡೇರಿದವರು ಹರಕೆ ತೀರಿಸಲು ಬರುತ್ತಾರೆ. ಹಣ್ಣು ಕಾಯಿ ಮಾಡಿಸುತ್ತಾರೆ. ಮದುವೆಯ ಕರೆಯೋಲೆಯನ್ನು ಮೊದಲು ದೇವರಿಗೆ ನೀಡಿ ಆಹ್ವಾನಿಸಿ ಹರಸು ಎಂದು ಕೈ ಮುಗಿಯುತ್ತಾರೆ.ಅಭಿವೃದ್ಧಿ ಸಮಿತಿಯ ಕಾರ್ಯಕ್ಕೆ ಶ್ಲಾಘನೆ:
ದೇಗುಲದಲ್ಲಿ ಪೂಜೆ ಪುರಸ್ಕಾರಗಳು ನಿರಂತರವಾಗಿ ನಡೆಯುವಂತೆ ಮತ್ತು ಅಭಿವೃದ್ಧಿ ಕೆಲಸದ ಹೊಣೆಹೊತ್ತ ಬಸವರಾಜ್ ಒಡೆಯರ್ ಅರ್ಚಕರ ಕುಟುಂಬ ದೇವಾಲಯದ ಸಂಪೂರ್ಣ ಜವಾಬ್ದಾರಿ ಹೊತ್ತಿದೆ. ದೂರದ ಊರಿನಿಂದ ಬರುವ ಭಕ್ತಾದಿಗಳಿಗೆ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಿದೆ. ಸರಳ ಮದುವೆ, ನಾಮಕರಣ, ಹೂ ಮುಡಿಸುವ ಶಾಸ್ತ್ರ ಹೀಗೆ ಭಕ್ತಾದಿಗಳ ಅನುಕೂಲಕ್ಕೆ ಅಣಿಮಾಡಿಕೊಡಲಾಗುತ್ತದೆ.ಗರ್ಭಗುಡಿಗೆ ಪ್ರವೇಶ : ವಿಶೇಷವಾಗಿ ಬೆಣ್ಣೆ ಮತ್ತು ಹೂವಿನ ಅಲಂಕಾರ ಮಾಡಿದ ದಿನಗಳನ್ನು ಹೊರತು ಪಡಿಸಿ ಇತರೆ ಸಾಮಾನ್ಯ ದಿನಗಳಲ್ಲಿ ಗರ್ಭಗುಡಿಯ ಬಸವಣ್ಣನ ಪಾದ ಸ್ಪರ್ಶ ಮಾಡಿ ಕೋರಿಕೆ ಈಡೇರಿಸುವಂತೆ ಕೇಳಿಕೊಳ್ಳುವ ಅವಕಾಶವಿದೆ.

ಕಡಲೆಕಾಯಿ ಪರಿಷೆ: ಕಾರ್ತೀಕ ಮಾಸದ ಕಡೆಯ ಸೋಮವಾರ ದೇವಾಲಯದಲ್ಲಿ ಪ್ರತಿ ವರ್ಷ ಕಡಲೆಕಾಯಿ ಪರಿಷೆ ನಡೆಯುತ್ತದೆ. ಬಸವಣ್ಣನಿಗೆ ಪ್ರಿಯವಾದ ಕಡಲೆಕಾಯಿಯನ್ನು ಮೊದಲು ದೇವರಿಗೆ ನೈವೇದ್ಯ ಸಲ್ಲಿಸಿ ದೇವಾಲಯಕ್ಕೆ ಬಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ.ಭಕ್ತಾದಿಗಳು ತಮ್ಮ ಆರೋಗ್ಯ, ಅಭಿವೃದ್ಧಿ, ಯಶಸ್ಸು, ಐಶ್ವರ್ಯ, ಸುಖ, ಶಾಂತಿ ಬಯಸಿ ಬಯಲು ಬಸವೇಶ್ವರ ಸ್ವಾಮಿಯ ಮೊರೆ ಹೋಗುತ್ತಾರೆ. ಸಿದ್ದಿ ಪಡೆಯುತ್ತಾರೆ.

Leave a Comment

Your email address will not be published. Required fields are marked *

Translate »
Scroll to Top