ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾನು ಸರ್ವಸಮ್ಮತ ಅಭ್ಯರ್ಥಿಯಾದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದ ಎಂದು ಬಿಜೆಪಿ ಖಾಯಂ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಣದಿಂದ ನನ್ನನ್ನೇ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ನಮ್ಮ ಪರ ಅಭ್ಯರ್ಥಿಗಳು ಒತ್ತಡ ಹಾಕಿದರೆ ನಾನು ಸ್ಪರ್ಧಿಸಲು ಸಿದ್ದನಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆಯೇ ಇಲ್ಲವೇ ಎಂಬುದನ್ನು ಕಾಲವೇ ತೀರ್ಮಾನಿಸುತ್ತದೆ. ಹಾಲಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕೆಂಬುದು ಹಲವರ ಒತ್ತಾಯವಾಗಿದೆ.
ಒಂದು ವೇಳೆ ಚುನಾವಣೆ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಬಯಸಿದರೆ ನಾವು ಸ್ಪರ್ಧೆ ಮಾಡುತ್ತೇವೆ. ವಿಜಯೇಂದ್ರ ವಿರುದ್ದ ನಾವು ಖಂಡಿತವಾಗಿಯೂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದರು.
ಹಲವರ ಬೆಂಬಲವಿದೆ ಎಂದು ವಿಜಯೇಂದ್ರ ಹೇಳಿರಬಹುದು. ಹಾಗಂದ ಮಾತ್ರಕ್ಕೆ ಚುನಾವಣೆ ನಡೆಯಲೇಬಾರದೆಂಬ ನಿಯಮವಿಲ್ಲ. ಯಾರಿಗೆ ಎಷ್ಟು ಬಹುಮತವಿದೆ ಎಂಬುದು ಚುನಾವಣೆ ನಡೆದಾಗ ಮಾತ್ರ ಗೊತ್ತಾಗುತ್ತದೆ. ಅಲ್ಲಿಯ ತನಕ ಅವರಿಗೆ ಕಾಯಲು ಹೇಳಿರಿ ಎಂದು ಸೂಚ್ಯವಾಗಿ ತಿರುಗೇಟು ನೀಡಿದರು. ಕೇವಲ ನಮ್ಮ ಬಣದಿಂದ ಮಾತ್ರ ವಿಜಯೇಂದ್ರ ಬದಲಾವಣೆಯಾಗಬೇಕೆಂಬ ಒತ್ತಡವಿಲ್ಲ. ಬಹುತೇಕ ಕಾರ್ಯಕರ್ತರ ಅಭಿಪ್ರಾಯವು ಇದೆ ಆಗಿದೆ. ಸಮಯ ಮತ್ತು ಕಾಲವು ಎಲ್ಲರ ಹಣೆಬರಹವನ್ನು ತೀರ್ಮಾನಿಸುತ್ತದೆ. ಅಲ್ಲಿಯ ತನಕ ಎಲ್ಲರೂ ಸಹನೆಯಿಂದ ವರ್ತಿಸಬೇಕೆಂದು ಮನವಿ ಮಾಡಿದರು.