ಶ್ರೀ ಸುಬ್ರಮಣ್ಯೇಶ್ವರ ಕೋ ಅಪರೇಟಿವ್ ಬ್ಯಾಂಕ್ ವ್ಯವಹಾರಿಕ ಲಾಭ 5 ಕೋಟಿ 76ಲಕ್ಷ ರೂ: ಆರ್ಥಿಕವಾಗಿ ಸದೃಢ, ವಿತ್ತೀಯ ಶಿಸ್ತಿಗೆ ಒತ್ತು - ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಡಾ. ಕೆ.ಎಂ. ರಂಗಧಾಮ ಶೆಟ್ಟಿ.
ಬೆಂಗಳೂರು : ಶ್ರೀ ಸುಬ್ರಮಣ್ಯೇಶ್ವರ ಕೋ ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಆರ್ಥಿಕವಾಗಿ ಸದೃಢವಾಗಿದ್ದು, ಕಳೆದ ಸಾಲಿನಲ್ಲಿ 5 ಕೋಟಿ 76ಲಕ್ಷ ರೂಪಾಯಿ ಲಾಭ ಗಳಿಸಿದೆ. ಅವಕಾಶಗಳು ಕಲ್ಪಿಸಿದ ನಂತರ 37 ಲಕ್ಷ ಲಾಭ ಗಳಿಸಿದೆ.
ಸಹಕಾರಿ ವ್ಯವಸ್ಥೆಯ ಬ್ಯಾಂಕ್ ನಲ್ಲಿ ಸದಸ್ಯರ ಹಿತ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಡಾ. ಕೆ.ಎಂ. ರಂಗಧಾಮ ಶೆಟ್ಟಿ ತಿಳಿಸಿದ್ದಾರೆ.
53 ನೇ ಸರ್ವ ಸದಸ್ಯರ ಸಭೆಯಲ್ಲಿ ಬ್ಯಾಂಕ್ ನ ಸಾಧನೆ, ಲೆಕ್ಕಪತ್ರ ಮಂಡಿಸಿ ಮಾತನಾಡಿದ ಅವರು, ಆರ್ಥಿಕ ಶಿಸ್ತಿಗೆ ಒತ್ತು ನೀಡಿ, ಸಾಲ ವಸೂಲಾತಿಗೆ ಆದ್ಯತೆ ಕೊಟ್ಟ ಪರಿಣಾಮ ಎನ್.ಪಿ.ಎ ಪ್ರಮಾಣ ಕಡಿಮೆಯಾಗುತ್ತಿದೆ. ಆರ್ಥಿಕವಾಗಿ ಮತ್ತಷ್ಟು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್ ಕಾರ್ಯೋನ್ಮುಖವಾಗಿದೆ ಎಂದರು.
ಷೇರು ಬಂಡವಾಳ, ನಿಧಿ, ಠೇವಣಿಗಳ ಮೂಲಕ 507.25 ಕೋಟಿ ರೂಪಾಯಿ ಸಂಪನ್ಮೂಲ ಕ್ರೋಢೀಕರಣ ಮಾಡಲಾಗಿದ್ದು, ಬ್ಯಾಂಕ್ ನ ಎಲ್ಲಾ 9 ಶಾಖೆಗಳನ್ನು ಡಿಜಿಟಲೀಕರಣಗೊಳಿಸಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ತರಲಾಗಿದೆ. ಇದೇ ಮೊದಲ ಬಾರಿಗೆ ಎಟಿಎಂ ಸೌಲಭ್ಯ ಕಲ್ಪಿಸುತ್ತಿದ್ದು, ಜೊತೆಗೆ ರುಪೇ ಕಾರ್ಡ್ ವಿತರಣೆ, ಬ್ಯಾಂಕ್ ನ ಪ್ರತ್ಯೇಕ ಮೊಬೈಲ್ ಆಪ್ ಸಹ ಸಿದ್ಧವಾಗುತ್ತಿದೆ ಎಂದರು.
ಕೋವಿಡ್ ಕಾರಣದಿಂದ ಬ್ಯಾಂಕ್ ನ ಸುವರ್ಣ ಮಹೋತ್ಸವ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜೊತೆಗೆ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಬ್ಯಾಂಕ್ ಸ್ವಂತ ಕಟ್ಟಡ ಹೊಂದುವ ಮೂಲಕ ಬಾಡಿಗೆ ಹಣ ಉಳಿತಾಯ ಮಾಡುತ್ತಿದ್ದು, ಸ್ವಯಂ ನಿವೃತ್ತಿ ಯೋಜನೆಯಿಂದ ವಾರ್ಷಿಕ 50 ಲಕ್ಷ ರೂಪಾಯಿ ಲಾಭವಾಗುತ್ತಿದೆ. ಸಹಕಾರಿ ಬ್ಯಾಂಕುಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಆರ್.ಬಿ.ಐ ನೀಡಿರುವ 7 ಅಂಶಗಳ ಪೈಕಿ ಎನ್.ಪಿ.ಎ ತಗ್ಗಿಸಲು “ರಾಜೀ ಪರಿಹಾರ ನೀತಿ – ಮತ್ತು ತಾಂತ್ರಿಕ ವಜಾ” ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದರು.
ಸದಸ್ಯರಿಗೆ ವೈದ್ಯಕೀಯ ಸಹಾಯಧನ ಹತ್ತು ಸಾವಿರ ರೂ ನೀಡುತ್ತಿದ್ದು, ಒಂದು ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ, ಹತ್ತು ಸಾವಿರ ಮರಣೋತ್ತರ ಸಹಾಯಧನ, ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಲಾಗಿದೆ ಎಂದು ಅಧ್ಯಕ್ಷ ಡಾ. ಕೆ.ಎಂ. ರಂಗಧಾಮ ಶೆಟ್ಟಿ ತಿಳಿಸಿದರು.
ಬ್ಯಾಂಕ್ ಉಪಾಧ್ಯಕ್ಷರಾದ ಡಿ.ಅರ್. ವಿಜಯ ಸಾರಥಿ, ನಿರ್ದೇಶಕರಾದ ಸಿ.ಎಲ್. ವೆಂಕಟಾಚಲಪತಿ, ಪಿ. ರುದ್ರಮೂರ್ತಿ, ಸತ್ಯಮೂರ್ತಿ, ನಂಜೇಗೌಡ, ಎಂ.ಕೆ. ಸುರೇಶ್ ಬಾಬು, ಮಹಾಲಕ್ಷ್ಮಿ, ಅನ್ನಪೂರ್ಣಮ್ಮ, ಜಯಲಕ್ಷ್ಮಿ ಜೆ. ತೋಟಗೆರೆ, ಡಾ. ರವೀಂದ್ರ ಪಿ.ಕೆ. ರವಿ.ಕೆ ಮತ್ತು ಎಚ್.ಮಾರುತಿ ಮತ್ತು ಪ್ರಧಾನ ವ್ಯವಸ್ಥಾಪಕರು ಕೆ ಏನ್ ಕೃಷ್ಣಯ್ಯಶೆಟ್ಟಿ, ಪೂರ್ಣ ಪ್ರಮಾಣದ ಸಲಹೆಗಾರರ ಬಿ ಆರ್ ನಾಗರಾಜ್ ರವರು ಉಪಸ್ಥಿತರಿದ್ದರು.