ರಾಜ್ಯದಲ್ಲಿ ಕೋವಿಡ್ ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್ಸಿಗರೇ ಕಾರಣ : ಸಚಿವ ಸುಧಾಕರ್

ಬೆಂಗಳೂರು,ಜ,4-ಮೇಕೆದಾಟು ಪಾದಯಾತ್ರೆಯ ವಿಷಯ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಭಾರೀ ವಾಗ್ಯುದ್ಧಕ್ಕೆ ಕಾರಣವಾಗಿದ್ದು,ರಾಜ್ಯದಲ್ಲಿ ಕೋವಿಡ್ ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್ಸಿಗರೇ ಕಾರಣ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರೆ,ಮದುವೆ,ರ್ಯಾಲಿಗಳಲ್ಲಿ ಕಾಲ ಕಳೆಯುತ್ತಿರುವ ಬಿಜೆಪಿ ನಾಯಕರ ಮೇಲೆ ಮೊದಲು ಮೊಕದ್ದಮೆ ಹೂಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇಂದು ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂತಹ ಟೀಕೆ-ಪ್ರತಿಟೀಕೆ ಮಾಡುವುದರೊಂದಿಗೆ ಮೇಕೆದಾಟು ಪಾದಯಾತ್ರೆಯ ವಿಷಯ ರೋಚಕ ಹಣಾಹಣಿಗೆ ಕಾರಣವಾಗಿದೆ.ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಿ.ಸುಧಾಕರ್:ಮೇಕೆದಾಟು ಪಾದಯಾತ್ರೆ ಮಾಡುವುದು ಸರಿಯಲ್ಲ ಎಂದರಲ್ಲದೇ ಕೋವಿಡ್ ಸಂಕಷ್ಟ ಶುರುವಾಗುತ್ತಿರುವಾಗ ಇಂತಹ ಪಾದಯಾತ್ರೆ ಮಾಡಿದರೆ ಕೋವಿಡ್ ಮತ್ತಷ್ಟು ಹೆಚ್ಚಳವಾಗುತ್ತದೆ.ಹೀಗಾಗಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಒಂದು ವೇಳೆ ಇವರು ಪಾದಯಾತ್ರೆ ಮಾಡಿ ಕೋವಿಡ್ ಹೆಚ್ಚಳವಾದರೆ ಅದಕ್ಕೆ ಇವರೇ ನೇರ ಹೊಣೆ ಎಂದು ಎಚ್ಚರಿಸಿದ ಅವರು,ಯಾವ ಕಾರಣಕ್ಕೂ ಇವತ್ತಿನ ಪರಿಸ್ಥಿತಿಯನ್ನು ನಿರ್ಲಕ್ಷಿಸಲಾಗದು ಎಂದು ವಿವರಿಸಿದರು.
ಇಂತಹ ಕಾಲದಲ್ಲಿ ಯಾವ ಸಭೆ,ಸಮಾರಂಭಗಳನ್ನು ಮಾಡಬೇಡಿ ಎಂದು ಇದೇ ಸಂದರ್ಭದಲ್ಲಿ ಅವರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು.
ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು,ನಮ್ಮ ಮೇಲೆ ನೂರು ಮೊಕದ್ದಮೆ ಹೂಡಿದರೂ,ನೂರು ಬಾರಿ ಜೈಲಿಗೆ ಕಳಿಸಿದರೂ ಜನಹಿತಕ್ಕಾಗಿ ಮೇಕೆದಾಟು ಪಾದಯಾತ್ರೆ ಮಾಡುತ್ತೇವೆ ಎಂದರು.ಕೋವಿಡ್ ಅನ್ನು ಹೇಗೆ ಹೈಪ್ ಮಾಡಲಾಗುತ್ತದೆ ಎಂಬುದನ್ನು ನೋಡಬೇಕೆಂದರೆ ವಿಮಾನ ನಿಲ್ದಾಣಕ್ಕೆ ಹೋಗಿ ನೋಡಿ,ಅಲ್ಲಿ ಪ್ರವಾಸಿಗರಿಂದ ವಿನಾಕಾರಣ ಮೂರೂವರೆ ಸಾವಿರ ರೂಪಾಯಿಗಳಿಂದ ಐದು ಸಾವಿರ ರೂಪಾಯಿಗಳ ತನಕ ಹಣವನ್ನು ದಬ್ಬಾಳಿಕೆಯಿಂದ ವಸೂಲು ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಇವರು ಆಸ್ಪತ್ರೆಗಳು ಮತ್ತು ಹೋಟೆಲ್ಲುಗಳ ಜತೆ ಒಳ ಒಪ್ಪಂದ ಮಾಡಿಕೊಂಡು ಕೋವಿಡ್ ಅನ್ನು ಹೇಗೆ ಹೈಪ್ ಮಾಡುತ್ತಿದ್ದಾರೆ,ವಸೂಲು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಕೋವಿಡ್ ಬಗ್ಗೆ ನಮಗೆ ಹೇಳುತ್ತಾರೆ,ನಾವು ಕಾರ್ಯಕ್ರಮ ಮಾಡಿದೆವು ಎಂದು ನಮಗೆ ಸಮನ್ಸ್ ನೀಡಿದ್ದಾರೆ.ಆದರೆ ಮುಖ್ಯಮಂತ್ರಿಗಳು,ಮಂತ್ರಿಗಳು ಸೇರಿದಂತೆ ಬಿಜೆಪಿಯ ನಾಯಕರು ಮದುವೆ,ರ್ಯಾಲಿಗಳಿಗೆ ತಿರುಗುತ್ತಲೇ ಇದ್ದಾರೆ.ಅವರ ಮೇಲೇಕೆ ಮೊಕದ್ದಮೆ ಹೂಡಿಲ್ಲ ಎಂದು ಪ್ರಶ್ನಿಸಿದರು.
ಇವರೇನೇ ಹೇಳಲಿ,ಮೇಕೆದಾಟು ಪಾದಯಾತ್ರೆ ನಡೆದೇ ನಡೆಯುತ್ತದೆ ಎಂದು ಹೇಳಿದ ಅವರು,ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.ತಡೆದರೆ ಕೇಳುವವರೂ ಇಲ್ಲ.ಅವರು ಏನು ಬೇಕಿದ್ದರೂ ಮಾಡಲಿ ಎಂದು ಪ್ರತಿ ಸವಾಲು ಎಸೆದರು.ಇವರು ಅದೇನೇನೋ ಮಾತನಾಡುವ ಬದಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆಯಲ್ಲ?ಆ ಹಣವನ್ನು ತಂದು ಜನರಿಗೆ ಒಳ್ಳೆಯದನ್ನು ಮಾಡಲಿ ಎಂದವರು ಕಿವಿ ಮಾತು ಹೇಳಿದರು.ಸೋಮವಾರ ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಬೆಳವಣಿಗೆಯ ಕುರಿತು ಮಾತನಾಡಿದ ಅವರು,ಸಚಿವ ಅಶ್ವಥ್ಥನಾರಾಯಣ ಅವರು ಅಣಿಮುತ್ತುಗಳನ್ನು ಉದುರಿಸಿ ಈಗ ನಮಗೆ ಸರ್ಟಿಫಿಕೇಟ್ ಕೊಡಲು ಹೊರಟಿದ್ದಾರೆ.ಅವರಿಗೆ ಮುಖ್ಯಮಂತ್ರಿಗಳು,ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರು ಸರ್ಟಿಫಿಕೇಟ್ ನೀಡಿದ್ದಾರೆ.ಹೀಗೆಯೇ ಅವರು ಸರ್ಟಿಫಿಕೇಟ್ ನೀಡಲಿ ಎಂದರು.
ಸಚಿವ ಅಶ್ವಥ್ಥನಾರಾಯಣ ಅವರು ಡಿ.ಕೆ.ಶಿ ಬ್ರದರ್ಸ್ ದು ಕನಕಪುರ ರಿಪಬ್ಲಿಕ್ ಎಂದಿದ್ದಾರೆ.ಇಂತಹ ರಿಪಬ್ಲಿಕ್ ಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ ಅಂತ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಇದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದು ಹೇಳಿದರು

Leave a Comment

Your email address will not be published. Required fields are marked *

Translate »
Scroll to Top