ಪ್ರಾಣಿಗಳ ಹಕ್ಕುಗಳ ಬಗ್ಗೆ ಚರ್ಚೆ ಆರಂಭ : ಮಾಂಸಾಹಾರಿಗಳಲ್ಲಿ ಕಳವಳ

ನಂಜುಂಡಪ್ಪ.ವಿ

ಬೆಂಗಳೂರು, ಜ, 3 : ಶಾಲಾ ಮಕ್ಕಳಿಗೆ ಕೋಳಿ ಮೊಟ್ಟೆ ನೀಡುವ ವಿಚಾರದಲ್ಲಿ ತೀವ್ರ ವಿವಾದ ಒಂದೆಡೆಯಾದರೆ, ಸಸ್ಯಹಾರ ಮತ್ತು ಮಾಂಸಹಾರದ ಪರ – ವಿರುದ್ಧದ ವಾದ, ಪ್ರತಿವಾದ ನಡೆಯುತ್ತಿದೆ. ಇದೀಗ ಇದೆಲ್ಲವನ್ನೂ ಮೀರಿಸುವಂತೆ ಮಾನವ ಹಕ್ಕುಗಳ ಮಾದರಿಯಲ್ಲಿ ಪ್ರಾಣಿ ಹಕ್ಕುಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹಾಗೇನಾದರೂ ಆದಲ್ಲಿ ಮಾಂಸಹಾರಿಗಳಿಗೆ ಮಾಂಸವೂ ಸಿಗುವುದಿಲ್ಲ. ಮೊಟ್ಟೆಯೂ ದೊರೆಯುವುದಿಲ್ಲ.

ಹೀಗೆಂದು ಮಾಹಿತಿ ನೀಡಿದ್ದು ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಸಿಬಿಐನ ನಿವೃತ್ತ ವಿಶೇಷ ನಿರ್ದೇಶಕ, ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪ್ ಕುಮಾರ್ ದತ್ತ.ಮಾಂಸಾಹಾರ, ಶಾಖಾಹಾರ, ಮೊಟ್ಟೆ ವಿವಾದ, ಮಾನವ ಹಕ್ಕುಗಳ ರಕ್ಷಣೆ ಹೀಗೆ ಹಲವು ವಿಷಯಗಳ ಕುರಿತು ಆರ್.ಕೆ. ದತ್ತಾ ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.ಮನುಷ್ಯನಿಗೆ ಜನ್ಮತಃ ಮಾನವ ಹಕ್ಕುಗಳು ಬರುತ್ತವೆ. ಮನುಷ್ಯನಿಗಿರುವಂತೆ ಪ್ರಾಣಿಗಳಿಗೂ ಸಹ ತನ್ನ ಹಕ್ಕುಗಳನ್ನು ನೀಡಬೇಕು. ಪ್ರಾಣಿಗಳು ಸಹ ಮನುಷ್ಯನಂತೆ ಘತನೆ ಮತ್ತು ಗೌರವದಿಂದ ಬದುಕಬೇಕು. ಜೀವಿಸುವ ಹಕ್ಕು ಪ್ರಾಣಿಗಳಿಗೂ ಇರಬೇಕು. ಪ್ರಾಣಿಗಳನ್ನು ವಧೆ ಮಾಡಬಾರದು ಎನ್ನುವ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇಂತಹ ವಾದಗಳು ತೀವ್ರಗೊಂಡಿವೆ. ಭಾರತದಲ್ಲೂ ಅಲ್ಲಲ್ಲಿ ಇಂತಹ ಚರ್ಚೆಗಳು ಟಿಸಿಲೊಡೆದಿವೆ.

set of chicken egg isolated on white background

· ಇಲ್ಲಿ ಮಾಂಸ ಇರಲಿ, ಮೊಟ್ಟೆ ನೀಡಲು ತೀವ್ರ ಪರ – ವಿರೋಧ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಪ್ರಾಣಿಗಳ ಜೀವಿಸುವ ಹಕ್ಕುಗಳು ಅಸ್ಥಿತ್ವಕ್ಕೆ ಬಂದರೆ ಮಾಂಸಹಾರಿಗಳ ಕಥೆ ಏನು?. ತಲಾ ತಲಾಂತರದಿಂದ ಮಾಂಸಾಹಾರ ಜೀವನದ ಅವಿಭಾಜ್ಯ ಅಂಗವಾಗಿದೆ.

ಪ್ರಾಣಿಗಳ ಹಕ್ಕುಗಳ ಕುರಿತಂತೆ ಚರ್ಚೆ ನಡೆಯುತ್ತಿರುವುದು ವಾಸ್ತವ. ಹಾಗೆಂದು ಏಕಾಏಕಿ ಇದು ಜಾರಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಈ ರೀತಿಯ ಚರ್ಚೆಗಳು ಯಾವ ಸ್ವರೂಪ ಬೇಕಾದರೂ ಪಡೆಯಬಹುದು. ಮಾಂಸಹಾರಿಗಳಿಗಾಗಿ ಪ್ರಯೋಗಾಲಯದಲ್ಲಿ ಮಾಂಸ ಉತ್ಪಾದನೆ ಮಾಡುವ ಸಂಶೋಧನೆಗಳು ಸಹ ನಡೆಯುತ್ತಿವೆ.

· ಜೈಲಿನಲ್ಲಿರುವವರಿಗೂ ಮಾನವ ಹಕ್ಕುಗಳಿವೆಯೇ?. ಇದ್ದರೆ ಹೇಗೆ?

ನೋಡಿ ಮಾನವ ಹಕ್ಕುಗಳು ಎಲ್ಲರಿಗೂ ಅನ್ವಯಿಸುವಂತಹದ್ದು, ತಪ್ಪು ಮಾಡಿ ಅಪರಾಧಿ ಆದ ಮಾತ್ರಕ್ಕೆ ಆತನ ಮಾನವ ಹಕ್ಕುಗಳನ್ನು ಹನನ ಮಾಡಲು ಸಾಧ್ಯವಿಲ್ಲ. ಮಾಡಲು ಅವಕಾಶವೂ ಇಲ್ಲ. ಸೆರೆ ಮನೆ ವಾಸಿಗಳ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಲ್ಲಿ ಜೈಲಿನ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಆಯೋಗ ಸೆರೆಮನೆಗಳ ಸುಧಾರಣೆಗೆ ಆದ್ಯತೆ ನೀಡಿದ್ದು, ಇವು ಬಂಧಿಗಳ ಮನಃಪರಿವರ್ತನೆ ಮಾಡುವ ಕೇಂದ್ರಗಳಾಗಬೇಕು. ಆಯೋಗ ಸೆರೆಮನೆಗಳಲ್ಲಿನ ಪರಿಸ್ಥಿತಿಯನ್ನು ಸದಾ ಕಾಲ ಪರಿಶೀಲನೆ ಮಾಡುತ್ತಿದ್ದು, ಲೋಪದೋಷಗಳನ್ನು ಸರಿಪಡಿಸುವಂತೆ ಆಗಿಂದಾಗ್ಗೆ ಸಲಹೆ, ಸೂಚನೆಗಳನ್ನು ನೀಡುತ್ತಿದೆ.

· ಮಾನವ ಹಕ್ಕುಗಳ ವ್ಯಾಖ್ಯಾನದಲ್ಲಿ ಏನಾದರೂ ಬದಲಾವಣೆಯಾಗಿದೆಯೇ?.

ಹುಟ್ಟಿನಿಂದಲೇ ಬರುವ ಮಾನವ ಹಕ್ಕುಗಳ ವ್ಯಾಖ್ಯಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ದಿನದಿಂದ ದಿನಕ್ಕೆ ಈ ಕುರಿತು ಜಾಗೃತಿ ಹೆಚ್ಚಾಗುತ್ತಿದೆ. ನಿಜಕ್ಕೂ ಇದು ಉತ್ತಮ ಬೆಳವಣಿಗೆಯಾಗಿದೆ.

assortment of fresh vegetables on white background

· ಮೂಲತಃ ಮಾನವ ಹಕ್ಕುಗಳು ಎಂದರೇನು?

ನಮ್ಮ ಬದುಕನ್ನು ಅರ್ಥಪೂರ್ಣವನ್ನಾಗಿಸಿ ತೃಪ್ತಿದಾಯಕ ವಾಗುವಂತೆ ಮಾಡುವಂತಹ ಮೂಲಭೂತ ಅರ್ಹತೆಗಳು ಹಾಗೂ ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳು ಎಂದು ಕರೆಯುತ್ತಾರೆ. ಮಾನವ ಹಕ್ಕುಗಳನ್ನು ಕೆಲವೊಮ್ಮೆ ಸಹಜವಾದ ಹಕ್ಕುಗಳೆಂದೂ ಕರೆಯಲಾಗುತ್ತದೆ. ಘನತೆಯಿಂದ ಜೀವಿಸುವ, ತಾರತಮ್ಯವಿಲ್ಲದೆ, ಮಾನವೀಯವಾಗಿ ಕಾಣುವ ಹಕ್ಕಾಗಿದೆ.

• ಜೀವಿಸುವ ಹಕ್ಕು

• ಮಾನವ ಘನತೆ ಹಕ್ಕು

• ಸಮಾನತೆಯ ಹಕ್ಕು

• ವೈಯಕ್ತಿಕ ಸ್ವಾತಂತ್ರ್ಯ ಹಕ್ಕು

• ಶೋಷಣೆಯ ವಿರುದ್ಧ ಹಕ್ಕು

• ಗುಲಾಮಗಿರಿ ವಿರುದ್ಧ ಹಕ್ಕು

• ಏಕಾಂತ ಗೌಪ್ಯ ಹಕ್ಕು

• ಪ್ರಾಮಾಣಿಕ ವಿಚಾರಣೆ ಹಕ್ಕು

• ಆರೋಗ್ಯ ಹಕ್ಕು

• ಧರ್ಮದ ಸ್ವಾತಂತ್ರ್ಯ ಹಕ್ಕು

• ಅಭಿವ್ಯಕ್ತಿ ಸ್ವಾತಂತ್ರ್ಯ

• ಸಭೆ ಸೇರುವ ಹಕ್ಕು

• ಸಂಚರಿಸುವ ಮತ್ತು ವಾಸಿಸುವ ಹಕ್ಕು

• ಶಿಕ್ಷಣದ ಹಕ್ಕು

• ಉಪಜೀವನದ ಹಕ್ಕು

• ಕಾನೂನಿನ ಮುಂದೆ ವ್ಯಕ್ತಿ ಗುರುತಿಸಿಕೊಳ್ಳುವ ಹಕ್ಕು

• ಪ್ರಾಣ ರಕ್ಷಣೆಯ ಹಕ್ಕು

• ನ್ಯಾಯ ದೊರಕಿಸಿಕೊಳ್ಳುವ ಹಕ್ಕು

• ಸಾರ್ವಜನಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವ ಹಕ್ಕು

• ಅನ್ಯಾಯಕ್ಕೆ ಒಳಗಾದವರಿಗೆ ಪರಿಹಾರ ಧನದ ಹಕ್ಕು ಹಾಗೂ

• ಯೋಗ್ಯ ಪರಿಸರದ ಹಕ್ಕು

· ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಯಾರ ವಿರುದ್ಧ ದೂರು ದಾಖಲಿಸಬಹುದು?

ಸಾರ್ವಜನಿಕ ಸೇವಕರ ವಿರುದ್ಧ ದೂರನ್ನು ದಾಖಲಿಸಬಹುದಾಗಿದೆ. ಸಾರ್ವಜನಿಕರೆಂದರೆ ಸರ್ಕಾರದ ಪರವಾಗಿ ಅಧಿಕಾರ ಹೊಂದಿದವರಾಗಿದ್ದಾರೆ.

· ಹಾಗಾದರೆ ಮಾನವ ಹಕ್ಕುಗಳ ಆಯೋಗದ ಧ್ಯೇಯೋದ್ಧೇಶಗಳು ಏನು?

• ಹಕ್ಕುಗಳ ಉಲ್ಲಂಘನೆ ಆಗುವುದನ್ನು ತಡೆಯುವುದು

• ಹಕ್ಕುಗಳ ಉಲ್ಲಂಘನೆ ಆಗದಂತೆ ರಕ್ಷಣೆ ನೀಡುವುದು

• ಹಕ್ಕುಗಳ ಉಲ್ಲಂಘನೆಗೆ ಒಳಗೊಂಡವರಿಗೆ ನೆರವು ನೀಡುವುದು

· ಮಾನವ ಹಕ್ಕುಗಳ ವಿಶೇಷ ಗುಣಗಳು ಏನು?

ಇವುಗಳನ್ನು ಜನ್ಮಸಿದ್ಧ ಹಕ್ಕುಗಳೆಂದು ಗುರುತಿಸಲಾಗಿದೆ. ಈ ಹಕ್ಕುಗಳನ್ನು ಯಾರೂ ನೀಡುವುದಿಲ್ಲ ಮತ್ತು ಯಾರೂ ತೆಗೆದುಹಾಕಲು ಸಾಧ್ಯವಿಲ್ಲ. ಹಾಗೂ ಇವುಗಳನ್ನು ಬೇರ್ಪಡಿಸಲಾಗದ ಹಕ್ಕುಗಳೆಂದು ಕರೆಯಲಾಗುತ್ತದೆ. ಇವುಗಳು ವಿಶ್ವವ್ಯಾಪಿಯೂ ಸಹ ಆಗಿರುತ್ತವೆ. ಯಾವುದೇ ಜಾತಿ, ಪಂಗಡ, ಧರ್ಮ, ಲಿಂಗ, ಸಾಮಾಜಿಕ ಅಥವಾ ಆರ್ಥಿಕ ಸ್ಥಾನಮಾನ, ಅಂಗವಿಕಲತೆ, ವಯಸ್ಸು ಎಲ್ಲರಿಗೂ ಸೇರಿದ್ದು ಮತ್ತು ಎಲ್ಲರಿಂದಲೂ ಜಾರಿಗೊಳಿಸುವಂತಹದ್ದು.

· ಮಾನವ ಹಕ್ಕುಗಳ ಉಲ್ಲಂಘನೆಗೆ ಕೆಲ ಉದಾಹರಣೆ ನೀಡಬಹುದೇ?

ಬಾವಿಯಿಂದ ಕುಡಿಯುವ ನೀರನ್ನು ತೆಗೆಯಲು ದಲಿತರಿಗೆ ಬಿಡದಿರುವ ಪ್ರಸಂಗಗಳಲ್ಲಿ ಜಿಲ್ಲಾಧಿಕಾರಿಗಳು ಕ್ರಮಗಳನ್ನು ಕೈಗೊಳ್ಳದೇ ಇದ್ದರೆ, ಅದು ತಾರತಮ್ಮ ವಿರುದ್ಧದ ಹಕ್ಕಿನ ಉಲ್ಲಂಘನೆಯಾಗುತ್ತದೆ. ಕಾರ್ಖಾನೆಗಳಿಂದ ವಿಷಪೂರಿತ ರಾಸಾಯನಿಕ ವಸ್ತುಗಳನ್ನು ಬಿಡುಗಡೆ ಮಾಡಿ ಜನರ ಮನೆಗಳು, ಜಮೀನುಗಳಿಗೆ ತೊಂದರೆಯಾಗುವ ಸಂದರ್ಭಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದಿದ್ದರೆ ಅದು ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಿಸದೇ ಯಾರನ್ನಾದರೂ ಬಂಧಿಸಿ ದೈಹಿಕ ಹಿಂಸೆ ನೀಡಿದರೆ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

· ದೂರುಗಳು ಹೇಗೆ ಇರಬೇಕು?

ದೂರುಗಳು ಲಿಖಿತ ರೂಪದಲ್ಲಿ ಸುಲಭವಾಗಿ ಓದುವ ಬೆರಳಚ್ಚು ಅಥವಾ ಕೈಬರಹದಲ್ಲಿ ಇರಬಹುದು. ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ದೂರು ಸಲ್ಲಿಸಬಹುದು. ದೂರುದಾರರು ಸಹಿ ಅಥವಾ ಹೆಬ್ಬೆಟ್ಟಿನ ಗುರುತು ಹಾಕಿರಬೇಕು. ದೂರುದಾರರ ಪೂರ್ಣ ಹೆಸರು, ವಿಳಾಸ, ದೂರವಾಣಿ ಇದ್ದರೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ನೀಡಬಹುದು. ಯಾರ ವಿರುದ್ಧ ದೂರನ್ನು ಸಲ್ಲಿಸಬೇಕಾಗಿದೆಯೋ ಆ ಅಧಿಕಾರಿಯ ಅಥವಾ ಪ್ರಾಧಿಕಾರದ ಸಂಪೂರ್ಣ ಹೆಸರು, ವಿಳಾಸ ಮತ್ತು ಇತರೇ ವಿವರಗಳನ್ನು ತಿಳಿಸಬೇಕು. ದೂರಿನಲ್ಲಿ ಘಟನೆ, ಸ್ಥಳ, ದಿನಾಂಕ, ಸಮಯದ ಮಾಹಿತಿ ನೀಡಬೇಕಾಗುತ್ತದೆ.

· ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದರೆ ಮುಂದೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ?

ಆಯೋಗಕ್ಕೆ ಒಂದು ದೂರು ಬಂದರೆ ಅದನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆಯೇ ಎಂದು ಪರಿಶೀಲಿಸಿ ತದನಂತರ ಪ್ರಕರಣ ಕೈಗೆತ್ತಿಕೊಳ್ಳಲಾಗುವುದು. ಪ್ರಕರಣವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಯಾವ ಕಾರಣದಿಂದ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲವೆಂಬ ಬಗ್ಗೆ ವಿವರಣೆಯನ್ನು ದೂರುದಾರರಿಗೆ ಕಳುಹಿಸಲಾಗುವುದು.

· ಮಾನವ ಹಕ್ಕುಗಳ ಆಯೋಗ ಯಾವ ರೀತಿಯ ಶಿಫಾರಸ್ಸುಗಳನ್ನು ಮಾಡುತ್ತವೆ?

ಮಾನವ ಹಕ್ಕುಗಳ ಆಯೋಗವು ಸರ್ಕಾರಕ್ಕೆ ತಪ್ಪಿತಸ್ಥರ ವಿರುದ್ಧ ದಂಡಾರ್ಹ ಪ್ರಕರಣಗಳನ್ನು ದಾಖಲಿಸಲು, ಮತ್ತು ಇಲಾಖಾ ವಿಚಾರಣೆ ನಡೆಸಲು, ನೊಂದವರಿಗೆ ಅಥವಾ ಅವರ ಕುಟುಂಬದವರಿಗೆ ಪರಿಹಾರ ನೀಡಲು, ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುವುದು, ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತಹ ಶಿಫಾರಸ್ಸುಗಳನ್ನು ಮಾಡುತ್ತವೆ.

· ಮಾನವ ಹಕ್ಕುಗಳ ಆಯೋಗವು ತನ್ನಷ್ಟಕ್ಕೆ ತಾನೇ ಪ್ರಕರಣಗಳನ್ನು ಕೈಗೆತ್ತಿಕೊಳ್ಳಬಹುದೇ?

ಕೆಲವು ಪ್ರಕರಣಗಳಲ್ಲಿ ವೃತ್ತಪತ್ರಿಕೆಗಳು ಪ್ರಕಟಿಸಿದ ವರದಿ ಆಧಾರದ ಮೇಲೆ ಮತ್ತು ಇತರೇ ಮಾಧ್ಯಮಗಳಲ್ಲಿ ಬಂದ ವರದಿ ಮೇಲೆ ಗಂಭೀರವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮನಗಂಡರೆ ಆಯೋಗವು ತನ್ನಷ್ಟಕ್ಕೆ ತಾನೇ ಪ್ರಕರಣವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸುತ್ತದೆ.

· ಮಾನವ ಹಕ್ಕುಗಳ ಆಯೋಗಗಳು ತೆಗೆದುಕೊಳ್ಳದಂಥಹ ದೂರುಗಳು ಏನಾದರೂ ಇವೆಯೇ?

• ಅಸಂಬದ್ಧವಾದ, ಅಸ್ಪಷ್ಟ, ಅನಾಮಧೇಯ, ಗುಪ್ತನಾಮದ ಕಾನೂನು ಬಾಹಿರ, ಕ್ಷುಲ್ಲಕವಾಗಿರುವಂತಹ;

• ಬೇರೆ ಆಯೋಗದ ಮುಂದೆ ವಿಷಯವು ಕಾನೂನಿನನ್ವಯ ವಿಚಾರಣೆಗೆ ಇದ್ದಲ್ಲಿ;

• ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಘಟನೆಯು ನಡೆದ ಒಂದು ವರ್ಷದ ನಂತರ ಆಪಾದನೆ ಮಾಡಿದಲ್ಲಿ;

• ದಿವಾಣೀ ವ್ಯಾಜ್ಯಗಳಿಗೆ, ಸ್ಥಿರಾಸ್ತಿಯ ಹಕ್ಕು ಅಥವಾ ಗುತ್ತಿಗೆ ಜವಾಬ್ದಾರಿಕೆಗೆ ಸಂಬದ್ಧಪಟ್ಟವುಗಲಿದ್ದಲ್ಲಿ;

• ಸೇವಾ ವಿಷಯಕ್ಕೆ ಅಥವಾ ಔದ್ಯೋಗಿಕ ವಿವಾದಗಳಿದ್ದಲ್ಲಿ;

• ಆಪಾದನೆಯು ಸಾರ್ವಜನಿಕ ಸೇವಕರ ವಿರುದ್ಧ ಇರದಿದ್ದಲ್ಲಿ;

• ಅಲ್ಲದೇ ಖಚಿತವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆಯೆಂದು ಹೇಳದಂತಹ ಆಪಾದನೆಯಾದಲ್ಲಿ;

• ಯಾವುದೇ ನ್ಯಾಲಯ ಅಥವಾ ಪ್ರಾಧಿಕಾರದ ಮುಂದೆ ಇರುವಂತಹ ವಿಷಯಕ್ಕೆ ಸಂಬಂಧಪಟ್ಟಿದ್ದಲ್ಲಿ;

• ನ್ಯಾಯಾಲಯದ ಅಥವಾ ಆಯೋಗದ ತೀರ್ಪಿಗೆ ಒಳಪಟ್ಟಿದ್ದಲ್ಲಿ;

• ಬೇರೆ ಯಾವುದೇ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿ ಅದರ ನಕಲನ್ನು ಸಲ್ಲಿಸಿದ್ದಲ್ಲಿ ಹಾಗೂ

• ಅಯೋಗದ ವ್ಯಾಪ್ತಿಗೆ ಬರದಂತಹ ವಿಷಯಕ್ಕೆ ಸಂಬಂಧಪಟ್ಟಿದ್ದಲ್ಲಿ ಮಾನವ ಹಕ್ಕುಗಳ ಆಯೋಗವು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.

· ಮಾನವ ಹಕ್ಕುಗಳ ಆಯೋಗದ ಮುಂದೆ ಯಾರು ದೂರನ್ನು ದಾಖಲಿಸಬಹುದು?

ಯಾವುದೇ ಒಬ್ಬ ವ್ಯಕ್ತಿ, ವ್ಯಕ್ತಿಗಳ ಗುಂಪು ಅಥವಾ ಸಂಸ್ಥೆಗಳು ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಮಾನವ ಹಕ್ಕುಗಳ ಆಯೋಗದ ಮುಂದೆ ದೂರನ್ನು ದಾಖಲಿಸಬಹುದು. ಒಬ್ಬ ವ್ಯಕ್ತಿ ಬಂಧನದಲ್ಲಿದ್ದರೆ ಅಥವಾ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಅಥವಾ ಅನಕ್ಷರಸ್ತನಾಗಿದ್ದರೆ ಆತನ ಪರ ಬೇರೊಬ್ಬರು ದೂರು ದಾಖಲಿಸಬಹುದು.

Leave a Comment

Your email address will not be published. Required fields are marked *

Translate »
Scroll to Top