ಬೆಂಗಳೂರು: ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ತ್ವರಿತೆ ಚಿಕಿತ್ಸೆ ನೀಡಲು ಫೋರ್ಟಿಸ್ ಆಸ್ಪತ್ರೆಯು ಅತ್ಯಾಧುನಿಕ “ಕ್ಯಾಥ್ ಲ್ಯಾಬ್”ನನ್ನು ಪ್ರಾರಂಭಿಸಿದೆ. ಇದು ರಾಜ್ಯದ ಮೊದಲ ಅತ್ಯಾಧುನಿಕ ಕ್ಯಾಥ್‌ಲ್ಯಾಬ್ ಆಗಿದೆ.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಗುರುವಾರ ಫೋರ್ಟಿಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್‌ಲ್ಯಾಬ್‌ನನ್ನು ಉದ್ಘಾಟಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಶೇ.25ರಷ್ಟು ಜನರು ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದಲೇ ಸಾವನ್ನಪ್ಪುತ್ತಿರುವುದು ಆಘಾತಕಾರಿ ಸಂಗತಿ. ಇಂದಿನ ಕಾಲಘಟ್ಟದಲ್ಲಿ ಎಲ್ಲಾ ವಯೋಮಾನದವರೂ ಸಹ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಹೃದಯಾಘಾತಕ್ಕೆ ಒಳಗಾದವರಿಗೆ ಗೋಲ್ಡನ್ ಹವರ್‌ನಲ್ಲಿ ಚಿಕಿತ್ಸೆ ನೀಡಿದರೆ ಅವರನ್ನು ಬದುಕಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಈ ಚಿಕಿತ್ಸೆಗೆ ಕ್ಯಾಥ್‌ಲ್ಯಾಬ್ ಹೆಚ್ಚು ಪರಿಣಾಮಕಾರಿ ತಂತ್ರಜ್ಞಾನವಾಗಿದೆ. ಫೋರ್ಟಿಸ್ ಸಂಸ್ಥೆಯು ಅತ್ಯಾಧುನಿಕ ಕ್ಯಾಥ್‌ಲ್ಯಾಬ್‌ನನ್ನು ಪರಿಚಯಿಸಿರುವುದು ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದರು.
ತಾಲೂಕು ಆಸ್ಪತ್ರೆಗಳಲ್ಲಿ ಹೃದಯಾಘಾತದ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಭೂತ ಸೌಕರ್ಯ ಹೊಂದುವ ಅವಶ್ಯಕತೆ ಇದೆ. ಇದರಿಂದ ಆ ವ್ಯಕ್ತಿಯನ್ನು ಕನಿಷ್ಠ 3-4 ಗಂಟೆ ಅವಧಿಯೊಳಗೆ ದೊಡ್ಡ ಆಸ್ಪತ್ರೆಗೆ ದಾಖಲಿಸಲು ಅವಕಾಶ ಸಿಗಲಿದೆ. ಹೀಗಾಗಿ ಎಲ್ಲೆಡೆ ಹೃದಯಾಘಾತ ಸಂಬಂಧಿ ಚಿಕಿತ್ಸಾ ಸೌಲಭ್ಯಗಳು ಸಿಗುವಂತಾಗಬೇಕು ಎಂದರು.ಫೊರ್ಟಿಸ್ ಆಸ್ಪತ್ರೆ ಹೃದಯತಜ್ಞ ಡಾ. ವಿವೇಕ್ ಜವಳಿ ಮಾತನಾಡಿ, ಕ್ಯಾಥ್‌ಲ್ಯಾಬ್ ಈಗಾಗಲೇ ಫೊರ್ಟಿಸ್ ಆಸ್ಪತ್ರೆಯಲ್ಲಿ ಲಭ್ಯವಿದೆ ಆದರೆ, ಈ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಿದ್ದು, ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆಗೆ ತ್ವರಿತವಾಗಿ ಚಿಕಿತ್ಸೆ ನೀಡಿ, ಜೀವ ಉಳಿಸಲು ನೆರವಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಫೊರ್ಟಿಸ್ ಆಸ್ಪತ್ರೆ ಉಪಾಧ್ಯಕ್ಷ ಡಾ. ಮನೀಶ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.