ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ವರದಾನವಾದ ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆ

Kannada Nadu
ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ವರದಾನವಾದ ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆ

ಬಳ್ಳಾರಿ: ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಉಲ್ಬಣಗೊಂಡಿರುವ ಅರಾಜಕ ಪರಿಸ್ಥಿತಿ ಹಾಗೂ ರಾಜಕೀಯ ಅಸ್ಥಿರತೆಯು ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ವರವಾಗಿ ಪರಿಣಮಿಸಿದೆ.

ಬಾಂಗ್ಲಾದೇಶವು ಕೆಲವು ತಿಂಗಳುಗಳ ಹಿಂದಿನವರೆಗೆ ಅಂದರೆ ರಾಜಕೀಯ ಬಿಕ್ಕಟ್ಟು ಆರಂಭವಾಗುವವರೆಗೂ ವಿಶ್ವದ ಅತಿದೊಡ್ಡ ಜೀನ್ಸ್ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿತ್ತು. ಭಾರತದಲ್ಲಿನ ಟಾಪ್ ಬ್ರ್ಯಾಂಡ್‍ಗಳು ಇತ್ತೀಚಿನವರೆಗೂ ಜೀನ್ಸ್‍ಗಾಗಿ ಬಾಂಗ್ಲಾದೇಶವನ್ನು ಅವಲಂಬಿಸಿದ್ದವು. ಆದರೆ ಈಗ ಭಾರತದ ಜೀನ್ಸ್ ರಾಜಧಾನಿ ಎಂದು ಕರೆಯಲ್ಪಡುವ ಬಳ್ಳಾರಿಯಲ್ಲಿರುವ ಘಟಕಗಳೊಂದಿಗೆ ಟಾಪ್ ಬ್ರ್ಯಾಂಡ್‍ಗಳು ಸಂಪರ್ಕದಲ್ಲಿವೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಬಳ್ಳಾರಿಯಲ್ಲಿ ತಯಾರಾಗುತ್ತಿದ್ದ ಜೀನ್ಸ್ ಉತ್ಪನ್ನಗಳನ್ನು ಮುಂಬೈ ಮತ್ತು ಸೂರತ್‍ನ ವ್ಯಾಪಾರಿಗಳು ಮತ್ತು ವಿತರಕರು ಖರೀದಿಸುತ್ತಾರೆ. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‍ಗಳು ಮತ್ತು ಭಾರತದ ಪ್ರಮುಖ ಜೀನ್ಸ್ ಬ್ರ್ಯಾಂಡ್‍ಗಳು ಕೂಡಾ ಬಳ್ಳಾರಿ ಜೀನ್ಸ್‍ನೆಡೆಗೆ ಒಲವು ತೋರುತ್ತಿವೆ.

ಬಳ್ಳಾರಿ ನಗರ ಹಾಗೂ ಹೊರವಲಯದಲ್ಲಿ 500ಕ್ಕೂ ಹೆಚ್ಚು ಜೀನ್ಸ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಬಾಂಗ್ಲಾ ದೇಶದಲ್ಲಿನ ಅರಾಜಕ ಪರಿಸ್ಥಿತಿಯು ಅವುಗಳಿಗೆ ವರದಾನವಾಗಿದೆ ಎಂದು ಹೇಳಬಹುದು. ವ್ಯಾಪಾರಿ ತಜ್ಞರ ಅಂಕಿಅಂಶಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿಯು ಅಲ್ಲಿನ ಉದ್ಯಮದ ಮೇಲೆ ಪರಿಣಾಮ ಬೀರಿದ ನಂತರ, ಬಳ್ಳಾರಿಯ ಜೀನ್ಸ್ ಪ್ರತಿ ಘಟಕದಲ್ಲಿ ಈಗ ಶೇ. 30ರಷ್ಟು ಹೆಚ್ಚು ವ್ಯಾಪಾರವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಬಳ್ಳಾರಿಯಲ್ಲಿನ ಪ್ರತಿ ಘಟಕವು ಪ್ರತಿ ತಿಂಗಳು 5 ರಿಂದ 10 ಲಕ್ಷ ರೂಪಾಯಿಗಳವರೆಗೆ ಲಾಭ ಗಳಿಸುತ್ತಿದೆ ಎನ್ನಲಾಗುತ್ತಿದೆ.

ಬಳ್ಳಾರಿ ಜೀನ್ಸ್ ಇಂಡಸ್ಟ್ರಿ ವೆಲ್ಫೇರ್ ಅಸೋಸಿಯೇಶನ್ ಸದಸ್ಯ ಹಾಗೂ ಪೆÇಲಕ್ಸ್ ಜೀನ್ಸ್ ಮಾಲೀಕರಾದ ಪೆÇಲಕ್ಸ್ ಮಲ್ಲಿಕಾರ್ಜುನ್ ಅವರು ಬಳ್ಳಾರಿ ಜೀನ್ಸ್ ಉದ್ಯಮದ ಮೇಲೆ ಬಾಂಗ್ಲಾದೇಶದ ಅಸ್ಥಿರತೆ ಉಂಟುಮಾಡಿರುವ ಪರಿಣಾಮದ ಕುರಿತು ಮಾತನಾಡಿದ್ದಾರೆ. ಇಂದಿನ ಆರ್ಥಿಕ ಮಾರುಕಟ್ಟೆ ಜಾಗತೀಕವಾಗಿ ಅಂತರ್ ಸಂಪರ್ಕ ಹೊಂದಿದೆ. ಜಾಗತಿಕ ಜೀನ್ಸ್ ಮಾರುಕಟ್ಟೆಯಲ್ಲಿನ ಯಾವುದೇ ಬೆಳವಣಿಗೆಯು ಇಲ್ಲಿನ ಸ್ಥಳಿಯ ಉದ್ಯಮದ ಮೇಲೆ ಅದರ ಪ್ರಭಾವವನ್ನು ಕಾಣಬಹುದು. ಬಾಂಗ್ಲಾದೇಶದ ಆಂತರೀಕ ರಾಜಕೀಯ ಸಂಘರ್ಷದಿಂದ ಅಲ್ಲಿನ ಉದ್ಯಮ ಎದುರಿಸುತ್ತಿರುವ ಬಿಕ್ಕಟ್ಟು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಸಹಜವಾಗಿ ಬಾಂಗ್ಲಾ ದೇಶದ ಜೀನ್ಸ್ ಉದ್ಯಮ ರಫ್ತು ವಲಯದಲ್ಲಿ ಕುಸಿತ ಕಾಣುತ್ತಿದ್ದು, ಅದರಿಂದ, ಬಳ್ಳಾರಿಯಲ್ಲಿ ತಯಾರಾಗುವ ಜೀನ್ಸ್ ಉತ್ಪನ್ನಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಪೆÇಲಕ್ಸ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಬಾಂಗ್ಲಾದೇಶದ ಜೀನ್ಸ್ ಉದ್ಯಮದ ಕುಸಿತದಿಂದ ನಂತರ ಕೆಲವು ಪ್ರಮುಖ ಅಂತರರಾಷ್ಟ್ರೀಯ ಮತ್ತು ಭಾರತದ ಜೀನ್ಸ್ ಬ್ರ್ಯಾಂಡ್‍ಗಳು ಬಳ್ಳಾರಿಯ ಜೀನ್ಸ್ ಉತ್ಪಾದಕರನ್ನು ಸಂಪರ್ಕಿಸಲು ಪ್ರಾರಂಭಿಸಿವೆ. ಕಳೆದ ವರ್ಷದ ಸೆಪ್ಟೆಂಬರ್‍ನಿಂದ ಸ್ಥಳೀಯ ಘಟಕಗಳಿಗೆ ಹೆಚ್ಚೆಚ್ಚು ಆರ್ಡರ್‍ಗಳು ಬರಲು ಆರಂಭಿಸಿವೆ. ಮೂಲಗಳ ಪ್ರಕಾರ, ಬಳ್ಳಾರಿಯ ಘಟಕವೊಂದು ಕಳೆದ ತಿಂಗಳು 35 ಲಕ್ಷ ರೂ.ಮೌಲ್ಯದ ಆರ್ಡರ್ ಪಡೆದಿದೆ ಎಂದು ತಿಳಿದು ಬಂದಿದೆ.

ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜೀನ್ಸ್ ಪಾರ್ಕ್ ಸ್ಥಾಪಿಸುವ ಆಶ್ವಾಸನೆ ನೀಡಿದೆ. ಆದರೇ ಅದರ ಸಾಕಾರ ಯಾವಾಗ ಆಗುತ್ತದೆ ಎಂಬುದರ ಸ್ಪಷ್ಟತೆ ಯಾರಿಗೂ ಕಾಣುತ್ತಿಲ್ಲ. ಅನೀರಿಕ್ಷಿತವಾಗಿ ಸ್ಥಳೀಯ ಜೀನ್ಸ್ ಉದ್ಯಮಕ್ಕೆ ಲಭಿಸಿರುವ ಈ ಅವಕಾಶದ ಸದುಪಯೋಗವನ್ನು ಉದ್ಯಮ ಹಾಗೂ ರಾಜ್ಯ ಸರ್ಕಾರ ಪಡೆದುಕೊಳ್ಳಬೇಕಾಗಿದೆ. ಉದ್ಯಮ ಎದುರಿಸುತ್ತಿರುವ ಹಲವು ಸವಾಲುಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಜೀನ್ಸ್ ಉದ್ಯಮ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಂಡು, ಸ್ಥಳೀಯವಾಗಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಉಂಟಾಗಬೇಕು. ಬಳ್ಳಾರಿ ಜೀನ್ಸ್ ಉದ್ಯಮವು ಜಾಗತೀಕ ಮಾರುಕಟ್ಟೆಯಲ್ಲಿ ಹೆಸರುಗಳಿಸುವಂತಾಗಲಿ ಎಂದು ಬಳ್ಳಾರಿ ಜೀನ್ಸ್ ಉತ್ಪಾದಕರು ಬಯಸುತ್ತಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";