ಬೆಂಗಳೂರು: ಬರೊಬ್ಬರಿ ೧೫೯ ದಿನಗಳ ಬಳಿಕ ಬೆಂಗಳೂರಿನಲ್ಲಿ ಸುರಿದ ಮಳೆರಾಯ ಉದ್ಯಾನ ನಗರಿ ಕೊಂಚ ಉಸಿರಾಡುವಂತೆ ಮಾಡಿದ್ದು, ೩೮ ಡಿಗ್ರಿಗೆ ಏರಿದ್ದ ತಾಪಮಾನ ಇಂದು ಮಳೆ ಬಳಿಕ ೨೩.೪ ಡಿಗ್ರಿಗೆ ಕುಸಿದಿದೆ.
ಹೌದು.. ಉದ್ಯಾನನಗರಿ ಬೆಂಗಳೂರಿನಲ್ಲಿ ನಿನ್ನೆ ಆರಂಭವಾದ ಮಳೆ ಇಂದೂ ಕೂಡ ಮುಂದುವೆರೆದಿದ್ದು ಇಂದು ಮಧ್ಯಾಹ್ನ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗಾಳಿ, ಗುಡುಗು-ಮಿಂಚು ಸಹಿತ ಭಾರಿ ಮಳೆ ಸುರಿದಿದೆ.
ಬೆಂಗಳೂರಿನ ವಿಧಾನಸೌಧ, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಸಂಪಂಗಿರಾಮನಗರ, ಮಲ್ಲೇಶ್ವರಂ, ಜಯನಗರ, ಶಿವಾಜಿ ನಗರ, ಕೊತ್ತನೂರು, ಪ್ಯಾಲೇಸ್ ಗುಟ್ಟಹಳ್ಳಿ, ಹೊರಮಾವು, ಕೆಆರ್ ಪುರಂ, ನಾಗವರ, ಮಹಾಲಕ್ಷ್ಮಿ ಬಡಾವಣೆ, ರಾಮಮರ‍್ತಿನಗರ, ಸದಾಶಿವನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಿದೆ.
೧೭.೨ಮಿಮೀ ಮಳೆ
ಇಂದು ಮಧ್ಯಾಹ್ನದಿಂದ ಸಂಜೆ ವರೆಗೂ ನಗರದಲ್ಲಿ ಸುಮಾರು ೧೭.೨ಮಿಮೀ ಮಳೆಯಾಗಿದ್ದು, ಪರಿಣಾಮ ನಗರದಲ್ಲಿ ಉತ್ತುಂಗಕ್ಕೇರಿದ್ದ ತಾಪಮಾನ ಗಣನೀಯವಾಗಿ ಇಳಿಕೆಯಾಗಿದೆ. ಸಾಮಾನ್ಯವಾಗಿ ಈ ಹಿಂದಿನ ವಾರಗಳಲ್ಲಿ ಬೆಂಗಳೂರಿನ ತಾಪಮಾನ ೩೮ ಡಿಗ್ರಿಯಷ್ಟಿತ್ತು. ಇಂದು ಮಳೆಯ ಬಳಿಕ ನಗರದಲ್ಲಿನ ತಾಪಮಾನ ೨೩.೪ ಡಿಗ್ರಿಗೆ ಕುಸಿದಿದೆ.
ಮಳೆ ಮೋಡಗಳ ರಚನೆ-ಇನ್ನೆರಡು ದಿನ ಮಳೆ ಸಾಧ್ಯತೆ:
ಇನ್ನು ರ‍್ನಾಟಕ-ಆಂದ್ರ ಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿ ಮಳೆ ಮೋಡಗಳು ರಚನೆಯಾಗಿದ್ದು, ಇದು ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ರ‍್ನಾಟಕದಲ್ಲಿ ಮಳೆ ಸಾಧ್ಯತೆಯನ್ನು ಹೆಚ್ಚಿಸಿವೆ. ಮುಂದಿನ ಕನಿಷ್ಠ ೨ ದಿನಗಳ ಕಾಲ ದಕ್ಷಿಣ ರ‍್ನಾಟಕದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.