ಚಾಮರಾಜನಗರ:ಜ.22- ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇಂದಿನಿಂದ ಹುಲಿಗಣತಿ ಕಾರ್ಯ ಆರಂಭವಾಗಿದೆ. ಜನವರಿ 22ರಿಂದ ಫೆಬ್ರವರಿ 8 ರವರೆಗೆ 3 ಹಂತಗಳ ಗಣತಿ ಕಾರ್ಯ ನಡೆಯಲಿದ್ದು, ಅರಣ್ಯ ಇಲಾಖೆಯ 345 ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.

ಕೋವಿಡ್ ಕಾರಣದಿಂದ ಈ ಬಾರಿ ಹುಲಿಗಣತಿ ಕಾರ್ಯಕ್ಕೆ ಸ್ವಯಂ ಸೇವಕರನ್ನು ಬಳಸುತ್ತಿಲ್ಲ. ಇಲಾಖೆಯಲ್ಲಿರುವ ನುರಿತ, ತರಬೇತಿ ಪಡೆದ, ಆಸಕ್ತಿ ಮತ್ತು ಅನುಭವವುಳ್ಳ ಪದವಿಧರ ಐಸಿಟಿ, ಎಸ್ಟಿಪಿಎಫ್ , ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಇತರೆ ಮುಂಚೂಣಿ ಸಿಬ್ಬಂದಿ ಪದವೀಧರರು ಹುಲಿಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆ ಅಭಿವೃದ್ಧಿಪಡಿಸಿರುವ ತಂತ್ರಾಂಶದ ಮೂಲಕ ಹಾಗೂ ಮಾರ್ಗಸೂಚಿಗಳನ್ವಯ ಹುಲಿಗಣತಿ ಕಾರ್ಯ ನಡೆಯುತ್ತಿದೆ. ಬಂಡೀಪುರ ಅರಣ್ಯದಲ್ಲಿರುವ 13 ವಲಯಗಳಲ್ಲಿ 115 ಬೀಟ್ ಗಳಿದ್ದು, ಪ್ರತಿಬೀಟ್ ನಲ್ಲಿ 3 ಸಿಬ್ಬಂದಿ ಗಣತಿ ನಡೆಸಲಿದ್ದಾರೆ. ಮೊದಲನೇ ಬ್ಲಾಕ್ ನಲ್ಲಿ ಜನವರಿ 22 ರಿಂದ 27 ರವರೆಗೆ, 2 ನೇ ಬ್ಲಾಕ್ ನಲ್ಲಿ ಜನವರಿ 28 ರಿಂದ ಫೆಬ್ರವರಿ 2 ರವರೆಗೆ ಮತ್ತು ಮೂರನೇ ಬ್ಲಾಕ್ ನಲ್ಲಿ ಫೆಬ್ರವರಿ 3 ರಿಂದ 8 ರವರೆಗೆ ಗಣತಿ ಕಾರ್ಯ ನಡೆಯುತ್ತದೆ. ಬಂಡೀಪುರದಲ್ಲಿ 4 ವರ್ಷದ ಹಿಂದೆ 2018 ರ ಗಣತಿಯಲ್ಲಿ 173 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಈ ಬಾರಿ ಹುಲಿಗಳ ಸಂಖ್ಯೆ 200 ದಾಟಲಿದೆ ಎಂದು ಅರಣ್ಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.