ನಂಜುಂಡಪ್ಪ.ವಿ.
ನೆರೆಯ ರಾಷ್ಟ್ರಗಳೊಂದಿಗೆ ಈಶಾನ್ಯ ಪ್ರದೇಶ 5,300 ಕಿಲೋಮೀಟರ್ ಗಳಿಗೂ ಅಧಿಕ ಅಂತರರಾಷ್ಟ್ರೀಯ ಗಡಿ ಹೊಂದಿದೆ. ಈ ಭಾಗದ 6 ರಾಜ್ಯಗಳಲ್ಲೇ ಅತ್ಯಂತ ಹಿಂದುಳಿದ ಮೀಜೋರಾಂನಲ್ಲಿ ಇದೀಗ ಅಭಿವೃದ್ಧಿ ಪರ್ವದ ಹೊಸ ಅಧ್ಯಾಯ ಆರಂಭವಾಗಿದೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಶಾನ್ಯ ಭಾಗದ ಪ್ರಾದೇಶಿಕ, ಆರ್ಥಿಕ ಪರಿಸ್ಥಿತಿ ಪರಿವರ್ತಿಸಲು, ರಾಷ್ಟ್ರೀಯ ಸಂಪರ್ಕವನ್ನು ವಿಸ್ತರಿಸಲು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಬೈರಾಬಿ – ಸೈರಾಂಗ್ ನೂತನ ರೈಲು ಯೋಜನೆ ನನಸಾಗಿದೆ.
ಮೀಜೊ ಭಾಷೆಯಲ್ಲಿ ಮೀಜೊರಾಂ ಎಂದರೆ ಬೆಟ್ಟಗಳಲ್ಲಿ ಜನ ಇರುವ ಸ್ಥಳ. ಇಲ್ಲಿಯ ಬೆಟ್ಟಗಳು ದಕ್ಷಿಣೋತ್ತರವಾಗಿ ಹಬ್ಬಿವೆ. ಈ ರಾಜ್ಯ ಸಮುದ್ರ ಮಟ್ಟದಿಂದ 900 ಮೀ., ಭೂಮಿಯಿಂದ 2.165 ಮೀ ಎತ್ತರ ಪ್ರದೇಶದಲ್ಲಿದೆ. ಇಲ್ಲಿನವರು ಮೂಲತಃ ಶ್ರಮಿಕರು. ಕೇರಳ ನಂತರ ಅತಿ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ ರಾಜ್ಯ. ಶೇ 80ಕ್ಕೂ ಅಧಿಕ ಕ್ರೈಸ್ತರು, ಉಳಿದಂತೆ ಬೌದ್ಧರು, ಹಿಂದುಗಳು, ಮುಸ್ಲೀಂರನ್ನು ಹೊಂದಿರುವ ಇಲ್ಲಿ ಪಾನ ನಿಷೇಧವಿದೆ. ಧೂಮ್ರಪಾನಿಗಳು, ಮಾದಕ ವ್ಯಸನಿಗಳನ್ನು ಹೆಚ್ಚಾಗಿ ಕಾಣುವ ಮಿಜೋರಾಂನಲ್ಲಿ ಇಡೀ ದೇಶದಲ್ಲಿ ಹೆಚ್ಚು ಅರ್ಬುದ ರೋಗಿಗಳನ್ನು ಹೊಂದಿರುವ ಕುಖ್ಯಾತಿಗೂ ಒಳಗಾಗಿದೆ.
ದುರ್ಗಮ ಪ್ರದೇಶವಾದ ಇಲ್ಲಿ ಬೃಹತ್ ಕೈಗಾರಿಕೆಗಳು, ದೊಡ್ಡ ಶಿಕ್ಷಣ ಸಂಸ್ಥೆಗಳಿಲ್ಲ, ಸಂಪರ್ಕ ಮರಿಚಿಕೆಯಾಗಿತ್ತು. ಹೇರಳ ನೈಸರ್ಗಿಕ ಸಂಪನ್ಮೂಲವಿದ್ದರೂ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆ. ಏನೂ ಇಲ್ಲದ ಇಲ್ಲೀಗ ಬೈರಾಬಿ – ಸೈರಾಂಗ್ ಹೊಸ ರೈಲು ಯೋಜನೆ ಜನ ಸಾಮಾನ್ಯರಿಗೆ ಆಶಾಕಿರಣವಾಗಿದೆ. ಆಗ್ನೇಯ ಏಷ್ಯಾ ದೇಶಗಳಿಗೆ ಈಶಾನ್ಯ ರಾಜ್ಯಗಳು ಹೆಬ್ಬಾಗಿಲಾದರೆ, ಬೈರಾಬಿ – ಸೈರಾಂಗ್ ಮಿಜೋಗಳಿಗೆ ಅದೃಷ್ಟದ ಮಹಾದ್ವಾರವಾಗಿದೆ. ಬೆಟ್ಟಗುಡ್ಡಗಳು, ಹಾಲ್ನೊರೆಯಹಂತೆ ಹರಿಯುವ ನದಿ, ತೊರೆಗಳ ನಾಡಿನಲ್ಲಿ ಹಕ್ಕಿಪಿಕ್ಕಿಗಳ ಕಲರವದ ಜೊತೆಗೆ ರೈಲಿನ ಸೈರನ್ ಮೊಳಗುತ್ತಿರುವುದು ಮಿಜೋಗಳ ಮೊಗದಲ್ಲಿ ಸಂತಸದ ಹೊನಲು ಹರಿಯುವಂತೆ ಮಾಡಿದೆ. ಬಡವರ ಜೀವನಾಡಿ, ಜನ ಸಾಮಾನ್ಯರ ಬಂಡಿ, ಜಗತ್ತಿನ ಅತಿದೊಡ್ಡ ಜಾಲ ಹೊಂದಿರುವ ಭಾರತೀಯ ರೈಲ್ವೆಗೆ ಬೈರಾಬಿ – ಸೈರಾಂಗ್ ಯೋಜನೆ ಮತ್ತೊಂದು ಗರಿ ಮೂಡಿಸಿದೆ.
ಇಲ್ಲಿನ ಜನರ ಜೀವನವೇ ಸವಾಲಿನದ್ದು, ಪುರುಷರಂತೆ ಮಹಿಳೆಯರು ಹೆಗಲುಕೊಟ್ಟು ದುಡಿಯುವ ಶ್ರಮಿಕರು. ಐಜ್ವಾಲ್ ನ ಕಿರಿದಾದ ರಸ್ತೆಗಳಲ್ಲಿಯೂ ಇವರು ರಸ್ತೆ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುತ್ತಾರೆ. ಹಾರನ್ ಬಳಸುವುದಿಲ್ಲ. ವಾಹನಗಳು ಎಷ್ಟೇ ಹೊತ್ತು ರಸ್ತೆಯಲ್ಲಿ ನಿಂತರೂ ಬೇಸರಿಸಿಕೊಳ್ಳುವುದಿಲ್ಲ. ರಸ್ತೆಯಲ್ಲಿ ನಡೆಯದೇ ಪಾದಚಾರಿ ಮಾರ್ಗವನ್ನೇ ಬಳಸುತ್ತಾರೆ.
ಇಲ್ಲಿನ ಜೀವನವೇ ರೋಚಕ. ಇಂತಹದೊಂದು ದಟ್ಟಾರಣ್ಯದ ನಡುವೆ ತಲೆಯೆತ್ತಿರುವ ಪ್ರದೇಶಕ್ಕೆ ಈಗ ಹೊಸ ಜೀವ ಕಳೆ ಬಂದಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ದಾಟಿ ಬಂದಿರುವ ಮಿಜೋಗಳಿಗೆ ಇದೀಗ ಅಮೃತ ಕಾಲದ ಅಮೃತ ಘಳಿಗೆ ಆರಂಭವಾಗಿದೆ. 2014ರ ನವೆಂಬರ್ 29ರಂದು ಪ್ರಧಾನಿ ನರೇಂದ್ರ ಮೋದಿ ಮಿಜೋರಾಂನಲ್ಲಿ ಬೈರಾಬಿ – ಸೈರಾಂಗ್ ಹೊಸ ರೈಲು ಮಾರ್ಗದ ಶಿಲಾನ್ಯಾಸ ಮಾಡಿದ್ದರು. 2016ರ ಮಾರ್ಚ್ 21ರಂದು ಅಸ್ಸಾಂನಿಂದ ಬೈರಾಬಿವರೆಗೆ ರೈಲು ಮಾರ್ಗವನ್ನು ಬ್ರಾಡ್ ಗೇಜ್‌ಗೆ ಪರಿವರ್ತನೆ ಮಾಡಲಾಗಿತ್ತು. ಮಿಜೋರಾಂನಲ್ಲಿ ಬೈರಾಬಿಗೆ ಮೊದಲ ಸರಕು ರೈಲು ತಲುಪಿದ್ದು ಕೂಡ ಮಹತ್ವದ್ದು. ಇದರೊಂದಿಗೆ ಐಜ್ವಾಲ್ ನಗರ ಮೊದಲ ಬಾರಿಗೆ ಭಾರತೀಯ ರೈಲ್ವೆ ಜಾಲಕ್ಕೆ ಸಂಪರ್ಕ ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಹುದಿನಗಳ ಕನಸು ನನಸಾಗಿದ್ದು, ಕೊಲಸಿಬ್ ಮತ್ತು ಐಜ್ವಾಲ್ ಜಿಲ್ಲೆಗಳ ಮೂಲಕ ಸಾಗುವ 51.38 ಕಿ.ಮೀ ಹೊಸ ರೈಲ್ವೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಈ ವಾರಾಂತ್ಯದಲ್ಲಿ ಲೋಕಾರ್ಪಣೆ ಮಾಡಲಿದ್ಧಾರೆ. ಪ್ರತಿ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ರೈಲು ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಇದರ ವೇಗಕ್ಕೆ ತಕ್ಕಂತೆ ಮಿಜೋಗಳು ತನ್ನ ವ್ಯಾಪಾರ, ವಹಿವಾಟು, ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಬೇಕಿದೆ. 4 ನಿಲ್ದಾಣಗಳನ್ನು ಒಳಗೊಂಡ ರೈಲ್ವೆ ಯೋಜನೆಯನ್ನು 8071 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂಪೂರ್ಣ ರೈಲು ಮಾರ್ಗವು ದಟ್ಟ ಅರಣ್ಯ, ಕಠಿಣ ಗುಡ್ಡಗಾಡು ಮತ್ತು ಆಳವಾದ ಕಣಿವೆಗಳ ಮೂಲಕ ಸಾಗುತ್ತದೆ. 70 ಮೀ. ಗಿಂತಲೂ ಎತ್ತರದ 6 ಸೇತುವೆಗಳು, ಕುತುಬ್ ಮಿನಾರ್ ಗಿಂತ ಎತ್ತರದಲ್ಲಿ ರೈಲ್ವೆ ಸೇತುವೆ ನಿರ್ಮಿಸಿರುವುದು ವಿಶೇಷ. ಕಡಿದಾದ ಕಣಿವೆಯಲ್ಲಿ 45 ಸುರಂಗಗಳನ್ನು ನಿರ್ಮಿಸಿದ್ದು, ಇಲ್ಲಿ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಅಳವಡಿಸಲಾಗಿದೆ. ಒಟ್ಟು ಸೇತುವೆಗಳ ಉದ್ದ 11.78 ಕಿ.ಮೀ ಆಗಿದ್ದು, ಇದೊಂದು ದಾಖಲೆಯಾಗಿದೆ. ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆ, ಸಣ್ಣ ಸೇತುವೆಗಳನ್ನು ಅತ್ಯಂತ ವಿಶಿಷ್ಟ ತಾಂತ್ರಿಕ ಪರಿಣಿತಿಯಿಂದ ನಿರ್ಮಿಸಲಾಗಿದೆ. ಬೈರಾಬಿ–ಸೈರಾಂಗ್ ಮಾರ್ಗದ ಪ್ರಯಾಣ 7 ಗಂಟೆಯಿಂದ 3 ಗಂಟೆಗೆ ಇಳಿಕೆಯಾಗಿದೆ.
ಸ್ಥಳೀಯ ಅರಣ್ಯ ಉತ್ಪನ್ನಗಳು, ಕರಕುಶಲ ವಸ್ತುಗಳು, ಶುಂಠಿ, ಅನಾನಸ್ ಮುಂತಾದ ವಸ್ತುಗಳನ್ನು ಆಗ್ನೇಯ ಏಷ್ಯಾ ಭಾಗಗಳಿಗೆ ರಫ್ತು ಮಾಡಲು ಹಾದಿ ಸುಗಮವಾಗಿದೆ. ಇಲ್ಲಿನ ಸಣ್ಣ ಮೆಣಸಿನ ಕಾಯಿಗೆ ವಿಶೇಷತೆ ಇದ್ದು, ಇದು ಜಿಯೋ ಟ್ಯಾಗ್ ಮಾನ್ಯತೆ ಪಡೆದಿದೆ. ಅರಸಿನ ಪುಡಿಗೆ ವಿಶ್ವಮಾನ್ಯತೆ ಇದೆ. ತೋಟಗಾರಿಕೆ ಉತ್ಪನ್ನಗಳ ಸಾಗಾಟ ಸುಲಭವಾಗಿದ್ದು, ಮಿಜೋರಾಂ ರಾಜ್ಯದ ಜನರಿಗೆ ಸರಕು ಮತ್ತು ಪ್ರಯಾಣದ ವೆಚ್ಚದಲ್ಲಿ ಇಳಿಕೆಯಾಗಲಿದೆ. ಈ ವರ್ಷದ ಆಗಸ್ಟ್ ನಲ್ಲಿ ಐಆರ್‌ಸಿಟಿಸಿ ಮಿಜೋರಾಂ ಸರ್ಕಾರದೊಂದಿಗೆ 2 ವರ್ಷಗಳ ಅವಧಿಗೆ ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ಒಪ್ಪಂದ ಮಾಡಿಕೊಂಡಿರುವುದು ಈ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ.
ಒಟ್ಟು 51.38 ಕಿ.ಮೀ. ಮಾರ್ಗ ಕೊಲಸಿಬ್ ಮತ್ತು ಐಜಾಲ್ ಜಿಲ್ಲೆಗಳ ಮೂಲಕ ಸಾಗುತ್ತದೆ. ಹೋರ್ಟೋಕಿ, ಕವನ್‌ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಿದೆ. ದಟ್ಟ ಅರಣ್ಯ, ಕಠಿಣ ಗುಡ್ಡಗಾಡು ಮತ್ತು ಆಳವಾದ ಕಣಿವೆಗಳ ಮೂಲಕ ಸಾಗುತ್ತದೆ. ಸುರಂಗಗಳ ಮುಖಭಾಗಗಳಲ್ಲಿ ಮಿಜೋರಾಂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತ್ಮಕ ಚಿತ್ರಗಳು ಮೂಡಿ ಬಂದಿವೆ. ಮಿಜೋರಾಂ ಜನರ ಉಡುಪು, ಹಬ್ಬ, ಸಂಪ್ರದಾಯಗಳು, ಹಳ್ಳಿಗಳ ಜೀವನ ಶೈಲಿ, ಹಾಗೆಯೇ ರಾಜ್ಯದ ಸಸ್ಯಜೀವಿ ಮತ್ತು ವನ್ಯ ಜೀವಿಗಳ ಚಿತ್ರಗಳನ್ನು ರಚಿಸಲಾಗಿದೆ. ಮಳೆಯಿಂದಾಗಿ ಭೂಕುಸಿತ ತಡೆಯಲು ಗುಡ್ಡಗಳನ್ನು ಸೂಕ್ತ ರಕ್ಷಣಾ ಯೋಜನೆಗಳೊಂದಿಗೆ ಬಲಪಡಿಸಲಾಗಿದೆ.
ಏಪ್ರಿಲ್–ಅಕ್ಟೋಬರ್ ನಡುವೆ ಭಾರಿ ಮಳೆ ಇಲ್ಲಿನ ಜನರಿಗೆ ದುಸ್ವಪ್ನವಾಗಿದೆ. ಭೂಕುಸಿತ ಸಾಮಾನ್ಯ; ಸಣ್ಣ ಮಳೆಯಾದರೂ ಜನ ಜೀವನ ಬಾಧಿತವಾಗುತ್ತದೆ. ಕೊಲಸಿಬ್ ಮತ್ತು ಐಜಾಲ್ ಜನರಿಗೆ ಕಡಿಮೆ ವೆಚ್ಚದಲ್ಲಿ ಸುಲಭ ಸಂಚಾರ ದೊರೆಯುತ್ತಿದ್ದು, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ. ಸರಕು ರೈಲು ಚಲನೆ ಸುಲಭವಾಗಿ ವ್ಯಾಪಾರ ಮತ್ತು ಸಾಗಾಣೆ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಇದರಿಂದ ಐಜ್ವಾಲ್ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಿ ಜನರ ಬದುಕು ಸಹನೀಯವಾಗುವ ವಿಶ್ವಾಸ ವ್ಯಕ್ತವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಅತ್ಯಂತ ವ್ಯವಸ್ಥಿತ ಯೋಜನೆ ಇದಾಗಿದೆ. ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ಮಾರ್ಗದರ್ಶನ, ಮೇಲ್ವಚಾರಣೆಯಲ್ಲಿ ಈ ಯೋಜನೆ ಯಶಸ್ವಿಯಾಗಿದೆ.
-
ಬಿ. ರಾಧಾರಾಣಿ, ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ
ದಶಕದ ಕನಸು ಇದೀಗ ಪೂರ್ಣವಾಗಿದ್ದು, ಇಲ್ಲಿ ನಿರ್ಮಿಸಿರುವ ಸೇತುವೆಗಳು ಇಡೀ ದೇಶದಲ್ಲಿಯೇ ಅತಿ ಎತ್ತರದಲ್ಲಿದ್ದು, ವಿನೂತನ ತಂತ್ರಜ್ಞಾನವನ್ನು ಹೊಂದಿವೆ. ಸರ್ವಋತುವಿಗೂ ಸೂಕ್ತ ಸುಸಜ್ಜಿತ ರೈಲ್ವೆ ಮಾರ್ಗವಾಗಿ ಇದು ರೂಪುಗೊಂಡಿದೆ.
-
ಕೆ.ಕೆ. ಮಿಶ್ರಾ, ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಈಶಾನ್ಯ ರಾಜ್ಯಗಳು