ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಸದುಪಯೋಗ ಪಡೆಯಬೇಕು

ದೇವನಹಳ್ಳಿ: ರಾಜ್ಯದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆಗೆ ಕ್ರಮವಹಿಸಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆ ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಕೆ.ಸುಧಾಕರ್ ಅವರು ತಿಳಿಸಿದರು. ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಮಾರ್ಚ್-2022ರ ಮಾಹೆಯ ಅಂತ್ಯದವರೆಗಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಜನೌಷಧಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ, ಔಷಧಿಗಳ ಲಭ್ಯತೆಯ ಕುರಿತು ಪರಿಶೀಲಿಸಬೇಕು. ಒಂದೇ ವೇಳೆ, ಔಷಧಿ ಲಭ್ಯತೆಯ ವ್ಯವಸ್ಥೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ, ಸ್ಥಳದಲ್ಲಿ ಜನೌಷಧಿ ಕೇಂದ್ರ ಪರವಾನಿಗೆ ರದ್ದುಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಹೊಸಕೋಟೆ ತಾಲ್ಲೂಕಿನಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜಿಲ್ಲಾಸ್ಪತ್ರೆಗೆ ಶೀಘ್ರದಲ್ಲೇ ಶಂಕುಸ್ಥಾಪನೆ ನೇರವೇರಿಸಲಾಗುವುದು. ತಾಲ್ಲೂಕಿಗೊಂದು 25 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನು ತೆಗೆಯಲಾಗುವುದು ಎಂದು ಹೇಳಿದರು.


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಕೃಷಿ, ತೋಟಗಾರಿಕೆ ಇಲಾಖೆಯ ಯೋಜನೆಯ ಕುರಿತು ಮಾಹಿತಿಯ ಕೊರತೆಯಿದ್ದು, ಶಾಸಕರ ನೇತೃತ್ವದಲ್ಲಿ ರೈತರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಯೋಜನೆಗಳ ಮಾಹಿತಿ ನೀಡಲು ಕ್ರಮವಹಿಸಬೇಕು ಎಂದು ಹೇಳಿದರು. ಮಕ್ಕಳ ವೈದ್ಯರ ನಡೆ, ಹಳ್ಳಿಗಳ‌ ಕಡೆ ಕಾರ್ಯಕ್ರಮದ ಮೂಲಕ ಜಿಲ್ಲೆಯ ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸಿದ್ದು, ಶ್ಲಾಘನೀಯ ಎಂದರಲ್ಲದೆ, ಜಿಲ್ಲೆಯಲ್ಲಿ ಗುರುತಿಸಿರುವ 212 ಅಪೌಷ್ಟಿಕ ಮಕ್ಕಳ ಪೈಕಿ 117 ಮಕ್ಕಳಿಗೆ ಸ್ಪಿರುಲಿನಾ ಚಿಕ್ಕಿ ನೀಡಿರುವುದು ಸ್ವಾಗತಾರ್ಹ. ತೀವ್ರ ಪೌಷ್ಟಿಕತೆಯ ಮಕ್ಕಳೆಂದು ಗುರುತಿಸಿರುವ 41 ಮಕ್ಕಳಿಗೆ ಅಗತ್ಯ ಪೌಷ್ಟಿಕ ಆಹಾರವನ್ನು ಒದಗಿಸಿ, ಯಾವೊಂದು ಮಕ್ಕಳು ಅಪೌಷ್ಟಿಕತೆಗೆ ಒಳಗಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಎಂದು ಹೇಳಿದರು. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಒಟ್ಟು 58 ಬಾಲ್ಯವಿವಾಹಗಳನ್ನು ತಡೆಯಲಾಗಿದ್ದು, 8 ಎಫ್.ಐ.ಆರ್. ಪ್ರಕರಣ ದಾಖಲಿಸಲಾಗಿದ್ದು, ದೇವನಹಳ್ಳಿ ಹಾಗೂ ಹೊಸಕೋಟೆ ತಾಲ್ಲೂಕುಗಳಲ್ಲಿ ಬಾಲ್ಯವಿವಾಹ ಪ್ರಕರಣ ಹೆಚ್ಚಾಗಿ ದಾಖಲಾಗಿದ್ದು, ಜನರಿಗೆ ಅರಿವು ಮೂಡಿಸಿ ಎಂದರಲ್ಲದೆ, ಕೋವಿಡ್‌ನಿಂದ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಮಾಹಿತಿಯನ್ನು ಕೇಳಿ, ಪಡೆದರು. ಜಿಲ್ಲೆಯಲ್ಲಿ 6068 ಭೂದಾಖಲೆಗಳು ಹೊಂದಾಣಿಕೆಯಾಗದಿರುವುದರಿಂದ, ಗೊಂದಲಗಳನ್ನು ನಿವಾರಿಸಬೇಕೆಂದು ಹೇಳಿದರಲ್ಲದೆ, ತಹಶೀಲ್ದಾರ್‌ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ತಾಲ್ಲೂಕು ಮಟ್ಟದಲ್ಲೇ ಭೂಮಿಗೆ ಸಂಬಂಧಿಸಿದ ಪ್ರಕರಣಗಳನ್ನು ಪರಿಹರಿಸಿದಾಗ ಮುಂದಿನ ಹಂತದ ನ್ಯಾಯಾಲಯಗಳಿಗೆ ಪ್ರಕರಣ ದಾಖಲಾಗುವುದನ್ನು ತಡೆಯಬಹುದು ಎಂದರು.


ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಉದ್ಯಮಗಳ‌ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ನಾಗರಾಜು(ಎಂ.ಟಿ.ಬಿ) ಅವರು ಮಾತನಾಡಿ 15ನೇ ಹಣಕಾಸು, ವಿಶೇಷ ಅನುದಾನ, ಆಸ್ತಿ ತೆರಿಗೆ ವಿವರ ಹಾಗೂ ಕುಡಿಯುವ ನೀರಿನ ಮಾಹಿತಿ ಕೇಳಿದರಲ್ಲದೆ, ಜಿಲ್ಲೆಗೆ ಉದ್ಯೋಗವನ್ನರಸಿ ವಲಸೆ ಬರುವ ಜನರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ವಿಶಾಲವಾದ ಸ್ಥಳಾವಕಾಶ ಲಭ್ಯವಿದ್ದಲ್ಲಿ, ನಿವೇಶನಗಳನ್ನು ನೀಡಿ, ಇಲ್ಲವಾದ ಪಕ್ಷದಲ್ಲಿ, ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲು ತಿಳಿಸಿದರು. ಮೇಲ್ಛಾವಣಿ, ಗೋಡೆ, ಶೌಚಾಲಯ ಸೇರಿದಂತೆ ಜಿಲ್ಲೆಯಲ್ಲಿ ಶಿಥಿಲಗೊಂಡು ದುರಸ್ತಿ ಹಂತದಲ್ಲಿರುವ ಅಂಗನವಾಡಿಗಳನ್ನು ತ್ವರಿತವಾಗಿ ದುರಸ್ತಿ ಮಾಡಬೇಕು ಹಾಗೂ ದುರಸ್ತಿ ಕಾರ್ಯವು ಗುಣಮಟ್ಟದಿಂದ ಕೂಡಿರಬೇಕು ಎಂದರು. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಕುಮಾರ್ ಬಚ್ಚೇಗೌಡ ಅವರು ಮಾತನಾಡಿ, ಬೇಸಿಗೆ ಆರಂಭವಾಗಿದ್ದು, ಹೊಸಕೋಟೆಯ ದೊಡ್ಡಕೆರೆ ತುಂಬಿ ಅಂತರ್ಜಲ ಹೆಚ್ಚಾಗಿರುವುದರಿಂದ, ಕೊಳವೆಬಾವಿಗಳಿಗೆ ಹೆಚ್ಚಿನ ಒತ್ತನ್ನು ನೀಡಿ, ಕನಿಷ್ಟ 3 ರಿಂದ 4 ದಿನಕ್ಕೊಮ್ಮೆಯಾದರೂ ಕುಡಿಯುವ ನೀರನ್ನು ಪೂರೈಸಬೇಕೆಂದು ತಿಳಿಸಿದರಲ್ಲದೆ, ರೇಷ್ಮೆ ಹುಳು ಸಾಕಾಣಿಕೆಗೂ ವಿಮೆ ಹಾಗೂ ನರೇಗಾದಡಿ ರೇಷ್ಮೆ ಹುಳು ಸಾಕಾಣಿಕಾ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೋರಿದರು. ಹೊಸಕೋಟೆ ತಾಲ್ಲೂಕಿನಲ್ಲಿ ಹೂ ಬೆಳೆಗಾರರಿದ್ದು, ತೋಟಗಾರಿಕೆ ಬೆಳೆಗಾರರಿಗೆ ಘೋಷಿಸಿದ ಕೋವಿಡ್ ಪರಿಹಾರವು ಎಲ್ಲಹೂ ಬೆಳೆಗಾರರಿಗೂ ದೊರೆತಿಲ್ಲ ಎಂದರಲ್ಲದೆ, ಆದಷ್ಟು ಬೇಗ ಪರಿಹಾರ ಪಡೆಯದ ಫಲಾನುಭವಿಗಳನ್ನು ಗುರುತಿಸಿ, ಪರಿಹಾರಧನ ತಲುಪುವಂತೆ ಕ್ರಮ ವಹಿಸಿ ಎಂದರು.


ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ‌ಶಾಸಕರಾದ ಟಿ.ವೆಂಕಟರಮಣಯ್ಯ ಅವರು ಮಾತನಾಡಿ, ಸಾಸಲು ಹೋಬಳಿಯಲ್ಲಿ ರಾಗಿ ಬೆಳೆಹಾನಿಯ ಮಾಹಿತಿಯ ಅರ್ಜಿಗಳನ್ನು ರೈತರಿಂದ ಪಡೆದು, ಕೆಲವು ರೈತರ ಅರ್ಜಿಗಳ ವಿವರವನ್ನು ಪೋರ್ಟಲ್‌ಗೆ ಅಪ್‌ಲೋಡ್ ಮಾಡದ ಹಿನ್ನೆಲೆ, ಸುಮಾರು 350 ಫಲಾನುಭವಿಗಳು ಪರಿಹಾರ ಪಡೆಯಲು ವಂಚಿತರಾಗಿದ್ದು, ಮತ್ತೊಮ್ಮೆ ನೋಂದಣಿಗೆ ಅವಕಾಶ ನೀಡಿ, ಪರಿಹಾರ ಪಡೆಯಲು ಅವಕಾಶ ಕಲ್ಪಿಸಬೇಕೆಂದರಲ್ಲದೆ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಘನ ತ್ಯಾಜ್ಯ ಸಂಸ್ಕರಣಾ ಘಟಕವನ್ನು ತೆರವುಗೊಳಿಸಲು ಈಗಾಗಲೇ ಹೋರಾಟ ನಡೆಯುತ್ತಿದ್ದು, ಶೀಘ್ರದಲ್ಲಿ ತೆರವುಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೋರಿದರು. ನೆಲಮಂಗಲ ವಿಧಾನಸಭಾ ಕ್ಷೇತ್ರದ ‌ಶಾಸಕರಾದ ಡಾ. ಕೆ.ಶ್ರೀನಿವಾಸ್ ಮೂರ್ತಿ ಅವರು ಮಾತನಾಡಿ, ದಾಬಸ್‌ಪೇಟೆಯಲ್ಲಿ ಚಿತಾಗಾರ ನಿರ್ಮಾಣ ಮಾಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್,
ಜಿಲ್ಲಾ ಪೊಲೀಸ್ ಅಧೀಕ್ಷಕ ಕೋನ ವಂಶಿಕೃಷ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top