ಪ್ರತಿ ಕುಟುಂಬಕ್ಕೆ 5 ಕೆಜಿ ಹೆಚ್ಚುವರಿ ಅಕ್ಕಿ
ಅಕ್ಕಿ ಲಭ್ಯವಾಗುವವರೆಗೂ ಫಲಾನುಭವಿಗಳ ಖಾತೆಗೆ ಅಕ್ಕಿಯ ಮೊತ್ತ ಜಮಾ
ಬಳ್ಳಾರಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಬಿಪಿಎಲ್ ಹೊಂದಿರುವವರಿಗೆ ‘ಅನ್ನ ಭಾಗ್ಯ’ ಯೋಜನೆಯು ಬಡವರ ಪರ ಯೋಜನೆಯಾಗಿದೆ.
ಯಾರೊಬ್ಬರೂ ಹಸಿವಿನಿಂದ ಬಳಲಬಾರದು, ಪ್ರತಿಯೊಂದು ಬಡ ಕುಟುಂಬಗಳೂ ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, ಚುನಾವಣೆಗೂ ಮುನ್ನ ಜನರಿಗೆ ಕೊಟ್ಟ ಮಾತಿನಂತೆ, ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬದ ಪ್ರತಿ ಸದಸ್ಯರಿಗೂ ಪ್ರತಿ ತಿಂಗಳು ತಲಾ 05 ಕೆ.ಜಿ. ಅಕ್ಕಿ ನೀಡುತ್ತಿದ್ದು, ಹೆಚ್ಚುವರಿ 05 ಕೆ.ಜಿ. ಅಕ್ಕಿಯ ಬದಲಿಗೆ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 170 ರೂ. ಗಳಂತೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಹೆಚ್ಚುವರಿ ಅಕ್ಕಿ ಲಭ್ಯವಾಗುವವರೆಗೆ ಮಾತ್ರ ಈ ರೀತಿ ಹಣ ಜಮಾ ಮಾಡಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಡವರ ಪರ ತಮ್ಮ ಹಿಂದಿನ ಅವಧಿಯಲ್ಲಿನ ಯೋಜನೆಗಳನ್ನು ಮರು ಜಾರಿಗೆ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್ಗಳನ್ನು ಮರು ಪ್ರಾರಂಭ ಮಾಡಿದೆ. ಆ ಮೂಲಕ ನಮ್ಮ ಸರ್ಕಾರ ಬಡವರ ಪರ ಎಂಬ ಸಂದೇಶ ರವಾನಿಸಿದೆ.

ಬಿಪಿಎಲ್ ಕಾರ್ಡು ಹೊಂದಿರುವವರಿಗೆ ನೀಡುವ 5 ಕೆಜಿ ಅಕ್ಕಿ ಜೊತೆ ,ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿತ್ತು. ಕೇಂದ್ರದ 5 ಕೆಜಿ ಅಕ್ಕಿ ವಿತರಣೆ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಸದ್ಯಕ್ಕೆ ಕುಟುಂಬದ ಪ್ರತಿ ವ್ಯಕ್ತಿಗೆ 170 (ಪ್ರತಿ ಕೆ.ಜಿಗೆ 34 ರೂಪಾಯಿಗಳಂತೆ) ನೀಡಲು ತೀರ್ಮಾನಿಸಿತು ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಸಿಗುವವರೆಗೂ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ತಿಳಿಸಿದ್ದು, ಅದರಂತೆಯೇ ಜುಲೈ ತಿಂಗಳಿನಿಂದಲೇ ಹಣ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಮಾಹಿತಿ:
ಜುಲೈ ತಿಂಗಳಲ್ಲಿ ಜಿಲ್ಲೆಯ ಒಟ್ಟು 2,43,088 ಫಲಾನುಭವಿಗಳಿಗೆ ರೂ.170 ರಂತೆ ಡಿಬಿಟಿ ಮೂಲಕ ಒಟ್ಟು 15,43,43,850 ರೂ. ಖಜಾನೆ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. 19,589 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಅಥವಾ ಇ- ಕೆವೈಸಿ ಆಗಿರುವುದಿಲ್ಲ ಎಂದು ಆಹಾರ ಇಲಾಖೆಯು ತಿಳಿಸಿದೆ.
ಜಿಲ್ಲೆಯಲ್ಲಿ ಒಟ್ಟು 357 ನ್ಯಾಯಬೆಲೆ ಅಂಗಡಿಗಳಿದ್ದು, ಒಟ್ಟು 3,44,756 ಪಡಿತರ ಚೀಟಿಗಳಿವೆ. ಅದರಲ್ಲಿ 26,150 ಎಎವೈ ಕಾರ್ಡ್, 2,74,878 ಬಿಪಿಎಲ್ ಕಾರ್ಡ್, 43,728 ಎಪಿಎಲ್ ಕಾರ್ಡ್ಗಳಿವೆ.

ನಮ್ಮದು ದೊಡ್ಡ ಕುಟುಂಬ, ಮುಖ್ಯಮಂತ್ರಿಯವರ ಅನ್ಯಭಾಗ್ಯ ಯೋಜನೆ ಜಾರಿಯಾಗಿರೋದು ಒಳ್ಳೆಯದೇ, ಅಕ್ಕಿ ಸಿಕ್ಕಿಲ್ಲವಾದ್ದರಿಂದ ಹಣ ನೀಡಲಾಗುತ್ತಿದೆ. ಸರ್ಕಾರ ನುಡಿದಂತೆ ನಡೆದಿದೆ, ಅಕ್ಕಿಯ ಬದಲಿಗೆ ಹಣ ನೀಡುತ್ತಿರುವುದರಿಂದ ನಮಗೆ ತೊಂದರೆ ಏನೂ ಆಗಿಲ್ಲ. ಹಣದ ಬದಲಾಗಿ ಅಕ್ಕಿ ನೀಡಿದರೆ ಇನ್ನೂ ಒಳ್ಳೇದು.
ಈಶ್ವರಪ್ಪ, ಕಾರ್ಮಿಕ, ಹೊನ್ನಳ್ಳಿ ಗ್ರಾಮ.