ಹಾಸನ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ವಿವಾದದ ನಡುವೆ, ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೇರ ಪ್ರಶ್ನೆ ಎತ್ತಿದ್ದಾರೆ. “ಕುಮಾರಣ್ಣ ಹೇಳಿದಂತೆ ರೈತರ ಎದುರೇ ಕುಳಿತು ಚರ್ಚೆ ನಡೆಸುವುದಕ್ಕೆ ಸಮಸ್ಯೆಯೇನು?” ಎಂದು ಅವರು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಚರ್ಚೆಗೆ ಆಹ್ವಾನಿಸಿರುವುದನ್ನು ಉಲ್ಲೇಖಿಸಿ, ಈ ಚರ್ಚೆ ವಿಧಾನಸೌಧದ ನಾಲ್ಕು ಗೋಡೆಗಳೊಳಗೆ ಅಲ್ಲ, ರೈತರ ಮಧ್ಯೆಯೇ ನಡೆಯಬೇಕು ಎಂದು ಆಗ್ರಹಿಸಿದರು.
“ರೈತರು ಸ್ವಇಚ್ಛೆಯಿಂದ ಜಮೀನು ನೀಡಿದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಅವರ ಹಕ್ಕುಗಳಿಗೆ ಧಕ್ಕೆ ಬಾರದಂತೆ ಸರ್ಕಾರ ನಡೆದುಕೊಳ್ಳಬೇಕು. ಬಲವಂತದ ಭೂಸ್ವಾಧೀನಕ್ಕೆ ಅವಕಾಶ ನೀಡಬಾರದು. ರೈತರೊಂದಿಗೆ ನೇರ ಸಂವಾದ ನಡೆಸಿದರೆ ಹಲವು ಗೊಂದಲಗಳಿಗೆ ಪರಿಹಾರ ಸಿಗಲಿದೆ” ಎಂದು ಹೇಳಿದರು.
ನಾಗಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಉದ್ದೇಶವನ್ನು ಸ್ವಾಗತಿಸಿದ ಅವರು, ಅಭಿವೃದ್ಧಿ ಯೋಜನೆಗಳಿಗೆ ವಿರೋಧ ಇಲ್ಲ. ಆದರೆ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಯೋಜನೆಗಳನ್ನು ಸಾಧ್ಯವಾದಷ್ಟು ಸರ್ಕಾರಿ ಅಥವಾ ಬಂಜರು ಭೂಮಿಯಲ್ಲಿ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
“ಅಧಿಕಾರದ ಬಲದಿಂದ ರೈತರ ಜಮೀನನ್ನು ಕಸಿದುಕೊಳ್ಳುವುದು ಸರಿಯಲ್ಲ. ಕೈಗಾರಿಕಾ ಅಭಿವೃದ್ಧಿಯಲ್ಲಿ ರೈತರೂ ಪಾಲುದಾರರಾಗುವ ವ್ಯವಸ್ಥೆ ರೂಪಿಸಬೇಕು. ‘ನಾನು ಮಾಡಿಯೇ ತೀರುತ್ತೇನೆ’ ಎನ್ನುವ ಏಕಪಕ್ಷೀಯ ಧೋರಣೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ” ಎಂದು ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಹೇಳಿಕೆಯಿಂದ ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.



