ಬೆಂಗಳೂರು, ಮಾರ್ಚ್ 01: ಉಕ್ರೇನ್ ನಿಂದ ಕನ್ನಡದವರನ್ನು ಕರೆತರುವ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿದ್ದು, ಮುಂಬೈ ಹಾಗೂ ನವದೆಹಲಿಗೆ ಬರುತ್ತಿರುವ ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ಕಳುಹಿಸಲು ನೆರವು ಒದಗಿಸಲು ಮುಂಬೈನಲ್ಲಿ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಉಕ್ರೇನ್ ನಿನ ಈಶಾನ್ಯ ಭಾಗದಲ್ಲಿರುವ ಕನ್ನಡದ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ವಿದೇಶಾಂಗ ಸಚಿವರೊಂದಿಗೆ ಮಾತನಾಡಿ ಅವರಿಗೆ ಊಟ ವಸತಿ ವ್ಯವಸ್ಥೆ ಮಾಡಲು ಹಾಗೂ ಅವರನ್ನು ಸುರಕ್ಷಿತ ಸ್ಥಳಗಳಿಗಳಿಗೆ ಕಳುಹಿಸಲು ಮಾರ್ಗದರ್ಶನ ನೀಡುವಂತೆ ಕೋರಲಾಗಿದೆ ಎಂದರು. ರೋಮಾನಿಯಾ ಗಡಿಯಲ್ಲಿ ದಟ್ಟಣೆ ಯಾಗುತ್ತಿದ್ದು, ಕನ್ನಡಿಗರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಕೋರಲಾಗಿದೆ ಎಂದು ತಿಳಿಸಿದರು.