ಬಳ್ಳಾರಿ: ಜಿಲ್ಲಾ ಪೊಲೀಸ್ ಇಲಾಖೆಯಿಂದ ನಾಗರಿಕರಿಗಾಗಿ ನಾಗರಿಕ ಬಂದೂಕು ತರಬೇತಿಯನ್ನು ಹಮ್ಮಿಕೊಂಡಿದ್ದು, ಜುಲೈ 26 ರಿಂದ ಆಗಸ್ಟ್ 06 ರವರೆಗೆ ಬೆಳಗ್ಗೆ 6.30ರಿಂದ 8.30ರವರೆಗೆ ತರಬೇತಿಯನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನೀಡಲು ಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.
ನಾಗರೀಕ ಬಂದೂಕು ತರಬೇತಿಯನ್ನು ಪಡೆಯಲು ಇಚ್ಛಿಸುವ ನಾಗರಿಕರು ಅರ್ಜಿಗಳನ್ನು ತಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ಜುಲೈ 19 ರಿಂದ 23 ರವರೆಗೆ ಪಡೆಯಬಹುದು. ನಾಗರಿಕರು ಅರ್ಜಿಗಳನ್ನು ಪಡೆದು ತಮ್ಮ ವಿಳಾಸದ ಸರಹದ್ದಿಗೆ ಬರುವ ಪೆÇಲೀಸ್ ಠಾಣೆಯಲ್ಲಿ ಜುಲೈ 23 ರೊಳಗಾಗಿ ಸಲ್ಲಿಸಬೇಕು.
ನಿಬಂಧನೆಗಳು:
ಭಾಗವಹಿಸುವ ನಾಗರಿಕರು 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು, ಆಧಾರ್‍ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ಅರ್ಜಿಯ ಜೊತೆಗೆ ನೀಡಬೇಕು. 21 ವರ್ಷ ಮೇಲಟ್ಟ ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುವುದು. ಭಾಗವಹಿಸುವ ನಾಗರಿಕರು ನಿಯಮಿತವಾಗಿ ತರಬೇತಿಗೆ ಹಾಜರಾಗುವುದು ಹಾಗೂ ಶಿಸ್ತು ಪಾಲನೆಯನ್ನು ಕಾಪಾಡಬೇಕು.
ತರಬೇತಿಯಲ್ಲಿ ಅಶಿಸ್ತು ಕಂಡು ಬಂದಲ್ಲಿ ಅಂಥವರನ್ನು ತರಬೇತಿಯಿಂದ ವಜಾ ಮಾಡಲಾಗುವುದು. ತರಬೇತಿ ಅಭ್ಯರ್ಥಿಗಳು ಕಡ್ಡಾಯವಾಗಿ ಶೂಗಳನ್ನು ಧರಿಸಿಕೊಂಡು ಬರಬೇಕು. ಲುಂಗಿ, ಪಂಚ ಧರಿಸಲು ಅವಕಾಶ ಇರುವುದಿಲ್ಲ. ತರಬೇತಿ ಅಭ್ಯರ್ಥಿಗಳು ನಿಗದಿತ ಅರ್ಜಿ ಶುಲ್ಕ ಮತ್ತು ಮದ್ದುಗುಂಡುಗಳ ಶುಲ್ಕವನ್ನು ತಾವೇ ಭರಿಸಬೇಕು. ತರಬೇತಿ ಅಭ್ಯರ್ಥಿಗಳು, ದೃಷ್ಟಿದೋಷ ಹೊಂದಿರಬಾರದು ಹಾಗೂ ಮಾನಸಿಕ ಮತ್ತು ದೈಹಿಕವಾಗಿ ಯೋಗ್ಯರಾಗಿರಬೇಕು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ನಾಗರಿಕರ ಅರ್ಜಿಯನ್ನು ತಿರಸ್ಕರಿಸುವ ಅಥವಾ ಪುರಸ್ಕರಿಸುವ ಅಧಿಕಾರಿ ಹೊಂದಿರುತ್ತಾರೆ. ತರಬೇತಿ ಅಭ್ಯರ್ಥಿಗಳು ತರಬೇತಿ ವೇಳೆ ಸಣ್ಣ ನೋಟ್ ಪುಸ್ತಕ ಮತ್ತು ಪೆನ್ನು ತರಬೇಕು. ತರಬೇತಿ ಕೊನೆಯಲ್ಲಿ ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.