ರೈತ, ಗ್ರಾಹಕ ವಿರೋಧಿ ವಿದ್ಯುತ್‌ ತಿದ್ದುಪಡಿ ಮಸೂದೆ ಮಂಡಿಸಬಾರದು; ಆಲ್‌ ಇಂಡಿಯಾ ಪವರ್‌ ಇಂಜಿನಿಯರ್ಸ್‌ ಫೆಡರೇಷನ್‌ ಒತ್ತಾಯ

ಬೆಂಗಳೂರು : ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಜನ ವಿರೋಧಿ ವಿದ್ಯುತ್‌ ತಿದ್ದುಪಡಿ ಮಸೂದೆ – 2022 ತರಾತುರಿಯಲ್ಲಿ ಮಂಡನೆ ಮಾಡಬಾರದು. ಇದಕ್ಕೂ ಮುನ್ನ ಮಸೂದೆ ಬಗ್ಗೆ ಸಂಬಂಧಪಟ್ಟ ವಿದ್ಯುತ್‌ ಇಂಜಿನಿಯರ್‌ ಗಳು, ಜನ ಸಾಮಾನ್ಯರು, ರೈತರು, ವಿವಿಧ ಪಾಲುದಾರರ ಜೊತೆ ಸಮಾಲೋಚನೆ ನಡೆಸಬೇಕು ಎಂದು ಆಲ್‌ ಇಂಡಿಯಾ ಪವರ್‌ ಇಂಜಿನಿಯರ್ಸ್‌ ಫೆಡರೇಷನ್‌ ಒತ್ತಾಯಿಸಿದೆ.

ನಗರದಲ್ಲಿಂದು ಆಲ್‌ ಇಂಡಿಯಾ ಪವರ್‌ ಇಂಜಿನಿಯರ್ಸ್‌ ಫೆಡರೇಷನ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಮಸೂದೆ ಮಂಡಿಸಬಾರದು ಎಂದು ನಿರ್ಣಯ ಕೈಗೊಂಡಿದೆ. ಇದರಿಂದ ಖಾಸಗಿ ವಲಯಕ್ಕೆ ಅನುಕೂಲವಾಗಲಿದ್ದು, ಗ್ರಾಹಕರು ಮತ್ತು ವಿದ್ಯುತ್‌ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಭಾರೀ ಅನ್ಯಾಯವಾಗಲಿದೆ. ರೈತ ಸಮುದಾಯಕ್ಕೆ ಭಾರೀ ಪ್ರಹಾರವಾಗಲಿದೆ ಎಂದು ಎಚ್ಚರಿಕೆ ನೀಡಿದೆ.   


ಸುದ್ದಿಗೋಷ್ಠಿಯಲ್ಲಿ ಎಐಪಿಎಫ್‌ನ ಅಧ್ಯಕ್ಷ ಶೈಲೇಂದ್ರ ದುಬೆ ಹಾಗೂ ಮಹಾಪ್ರಧಾನ ಕಾರ್ಯದರ್ಶಿ ಪಿ. ರತ್ನಾಕರ ರಾವ್‌ ಮತ್ತಿತರರು ಮಾತನಾಡಿ, ರೈತರೊಂದಿಗೆ ಚರ್ಚೆ ನಡೆಸಿದ ನಂತರವೇ ಮಸೂದೆ ಮಂಡಿಸುವುದಾಗಿ ಕೇಂದ್ರ ಸರ್ಕಾರ ಕಿಸಾನ್‌ ಮೋರ್ಚಾಗೆ ಪತ್ರ ಬರೆದಿದೆ. ಆದರೆ ಮಸೂದೆ ಮಂಡನೆಗೆ ಸಂಪುಟದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ಇದರಿಂದ ವಿದ್ಯುತ್‌ ವಲಯದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿಲ್ಲ. ಹೊಸ ಮಸೂದೆಯಿಂದ ಸಬ್ಸಿಡಿ ರದ್ದಾಗಲಿದ್ದು, ಎಲ್ಲಾ ವೆಚ್ಚವನ್ನು ಗ್ರಾಹಕರೇ ಭರಿಸಬೇಕಾಗುತ್ತದೆ. ರೈತರು ಪ್ರತಿ ತಿಂಗಳು ಕೃಷಿ ಪಂಪ್ ಸೆಟ್ ಗೆ 10 ರಿಂದ 12 ಸಾವಿರ ರೂಪಾಯಿ ವಿದ್ಯುತ್‌ ಬಿಲ್‌ ಪಾವತಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ವಿದ್ಯುತ್‌ ಗ್ರಾಹಕರು, ಇಂಜಿನಿಯರ್‌ ಗಳು, ಸಿಬ್ಬಂದಿ ಜೊತೆ ವಿಸ್ತೃತ ಸಮಾಲೋಚನೆ ನಡೆಸಬೇಕು. ಎಲ್ಲರ ಅಭಿಪ್ರಾಯ ಆಧರಿಸಿ ನಂತರ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಇದಕ್ಕಾಗಿ ಮಸೂದೆಯನ್ನು ಸಂಸತ್ತಿನ ವಿದ್ಯುತ್‌ ವ್ಯವಹಾರಗಳ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಡಿಸಬೇಕು. ಸ್ಥಾಯಿ ಸಮಿತಿ ಎಲ್ಲಾ ಪಾಲುದಾರರ ಜೊತೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿ ಅಭಿಪ್ರಾಯಗಳನ್ನು ಪಡೆದು ನಂತರ ತಿದ್ದುಪಡಿ ಮಂಡಿಸಬೇಕು ಎಂದು ಆಗ್ರಹಿಸಿದೆ.

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಸೂದೆ ಮಂಡಿಸುವ ಕುರಿತಂತೆ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದು, ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇದರಿಂದ ದೇಶಾದ್ಯಂತ ಇರುವ ಒಂದು ಲಕ್ಷಕ್ಕೂ ಅಧಿಕ ವಿದ್ಯುತ್‌ ಇಂಜಿನಿಯರ್‌ ಗಳಗೆ ತೊಂದರೆ ಎದುರಾಗಲಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕೆಇಬಿ ಇಂಜಿನೀರ್ಸ್‌ ಅಸೋಸಿಯೇಷನ್‌ ಅಧ್ಯಕ್ಷರಾದ ಇಂ. ಕೆ. ಶಿವಣ್ಣ, ಎಐಪಿಇಎಫ್‌ ನ ಪ್ಯಾಟ್ರನ್‌ ಆದ ಇಂ. ಅಶೋಕ್‌ ರಾವ್‌, ಕೆಇಬಿಇಎ ಪ್ರಧಾನ ಕಾರ್ಯದರ್ಶಿ ಹಾಗೂ ಎಐಪಿಇಎಫ್‌ನ ಹಣಕಾಸು ಕಾರ್ಯದರ್ಶಿ ಇಂ. ಸುಧಾಕರ ರೆಡ್ಡಿ ಟಿ.ಎನ್‌, ಕೆಇಬಿಇಎನ ಹಿರಿಯ ಉಪಾಧ್ಯಕ್ಷರಾದ ಇಂ. ಬಸವರಾಜು ಹೆಚ್‌. ಬಿ ಉಪಸ್ಥಿತರಿದ್ದರು. ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌, ಜಮ್ಮೂ ಮತ್ತು ಕಾಶ್ಮೀರ ಹಾಗೂ ಮಹರಾಷ್ಟ್ರ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Facebook
Twitter
LinkedIn
Telegram
WhatsApp

Leave a Comment

Your email address will not be published. Required fields are marked *

Translate »
Scroll to Top