ಬೆಂಗಳೂರು : ರಾಮಲಿಂಗಾ ರೆಡ್ಡಿ: ಏ.5ರಂದು ಬೆಳಗ್ಗೆ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪಘಾತದ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರು 6ರಂದು ಪ್ರಕರಣದ ಬಗ್ಗೆ ಟ್ವಿಟ್ ಮಾಡುತ್ತಾರೆ. ಈ ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಪ್ರಕಟವಾದ ನಂತರ ಗೃಹಮಂತ್ರಿಗಳು ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಆಗಿದೆ ಎಂದು ಹೇಳಿದರು. ಗೃಹ ಮಂತ್ರಿಗಳಿಗೆ ಮಾಹಿತಿ ಇತ್ತೋ ಇರಲಿಲ್ಲವೋ, ಆದರೆ ಮಾಹಿತಿ ಇಟ್ಟುಕೊಂಡು ಅವರು ಮಾತನಾಡಬೇಕು. ಗೃಹಮಂತ್ರಿಗಳು ರಾಜ್ಯದ 6.5 ಕೋಟಿ ಜನರ ಸುರಕ್ಷತೆ ಜವಾಬ್ದಾರಿ ಹೊತ್ತಿರುತ್ತಾರೆ. ಅವರಿಗೆ ಪ್ರತಿ ಗಂಟೆಗೂ ಕಾನೂನು ಸುರಕ್ಷತೆ ಬಗ್ಗೆ ಮಾಹಿತಿ ಹೋಗುತ್ತದೆ. ಆಯುಕ್ತರ ಟ್ವೀಟ್ ನಂತರವೂ ಗೃಹ ಮಂತ್ರಿಗಳುದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಹೆಣ ಬಿದ್ದರೆ ರಾಜಕಾರಣ ಮಾಡಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ರಣ ಹದ್ದಿನಂತೆ ಕಾಯುತ್ತಿರುತ್ತಾರೆ. ಅವರು ಮೃತ ವ್ಯಕ್ತಿ ಚಂದ್ರಶೇಖರ್ ಕನ್ನಡ ಮಾತನಾಡಿದ್ದಕ್ಕೆ ಈ ಕೊಲೆ ಆಗಿದೆ ಇದನ್ನು ಖಂಡಿಸುತ್ತೇನೆ. ಇದು ವ್ಯಕ್ತಿಗತ ಕೊಲೆ ಅಲ್ಲ, ಇದು ಹಿಂದೂಗಳಿಗೆ ಪ್ರಚೋದನಕಾರಿಯಾಗಿ ಆಗಿರುವಂತಹ ಕೃತ್ಯ. ಇಂದು ಗೌರಿಪಾಳ್ಯದಲ್ಲಿ ಆದ ಕೊಲೆ ದೇಶದಲ್ಲಿ ಆಗುತ್ತದೆ. ಈ ಬಗ್ಗೆ ಬುದ್ಧಿಜೀವಿಗಳು ಮೌನ ವಹಿಸಿದ್ದು, ಸತ್ತವರು ಹಿಂದೂ ಆದರೆ ಅವರ ಕಣ್ಣಲ್ಲಿ ನೀರು ಬರುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಸಂತಾಪ ಸೂಚಿಸುವ ಧ್ವನಿ ಬರುವುದಿಲ್ಲ ಎಂದೆಲ್ಲಾ ಹೇಳಿದ್ದರು.
ಸಿ.ಟಿ ರವಿ ಪ್ರಧಾನ ಕಾರ್ಯದರ್ಶಿ ಹಾಗೂ 4 ಬಾರಿ ಶಾಸಕರಾಗಿದ್ದು, ಮಂತ್ರಿಯೂ ಆಗಿದ್ದರು. ಅಧಿಕಾರದಲ್ಲಿರುವ ರಾಷ್ಟ್ರೀಯ ಪಕ್ಷದ ಕಾರ್ಯದರ್ಶಿ ಹಾಗೂ ರಾಜ್ಯದ ಗೃಹಮಂತ್ರಿಗಳೇ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳುವ ಶಕ್ತಿ ಗೃಹ ಸಚಿವರದಾಗಬೇಕಿತ್ತು. ಅದು ಬಿಟ್ಟು ಅವರೇ ಪ್ರಚೋದನಕಾರಿ ಹೇಳಿಕೆ ನೀಡುತಿದ್ದಾರೆ. ಇನ್ನು ಸಿ.ಟಿ ರವಿ ಅವರ ಬಗ್ಗೆ ಎಲ್ಲರಿಗೂ ಗೊತ್ತಿಗೆ. ಅವರಿಗೆ ಇಂತಹ ವಿಷಯ ಸಿಕ್ಕರೆ ಸಾಕು. ಏನು ಇಲ್ಲದಿದ್ದರೂ ಗೊಂದಲ ಸೃಷ್ಟಿಸುತ್ತಾರೆ. ನಮ್ಮ ಅಧ್ಯಕ್ಷರು ಹೇಳಿದಂತೆ ನಾವು ದೂರು ಕೊಟ್ಟಿದ್ದು, ಎಲ್ಲೂ ಎಫ್ ಐಆರ್ ದಾಖಲಾಗಿಲ್ಲ. ಇಂದು ಕೂಡ ಮಾಜಿ ಸಚಿವ ಹೆಚ್.ಎಂ ರೇವಣ್ಣ ಅವರ ನೇತೃತ್ವದಲ್ಲಿ ಪಕ್ಷದ ನಿಯೋಗ ಆಯುಕ್ತರನ್ನು ಭೇಟಿ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿರುವ ಈ ಇಬ್ಬರು ನಾಯಕರ ಮೇಲೆ ದೂರು ನೀಡಲಾಗುವುದು.
ಮಾಜಿ ಸಂಸದ ವಿ.ಎಸ್ ಉಗ್ರಪ್ಪ: ಇತಿಹಾಸದಲ್ಲಿ ಈ ರಾಜ್ಯ ಕಂಡ ಅತ್ಯಂತ ನಿಷ್ಪ್ರಯೋಜಕ, ಭ್ರಷ್ಟ, ಪ್ರಚೋದನಾಕಾರಿ ಗೃಹ ಸಚಿವರು ಅರಗ ಜ್ಞಾನೇಂದ್ರ. ಗೃಹ ಸಚಿವ ಸ್ಥಾನ 6.5 ಕೋಟಿ ಕನ್ನಡಿಗರ ರಕ್ಷಣೆ ಮಾಡುವ ಜವಾಬ್ದಾರಿ ಸ್ಥಾನ. ಅಲ್ಲಿದ್ದರೂ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲ. ತೀರ್ಥಹಳ್ಳಿ ನಂದಿತಾ ಪ್ರಕರಣದಿಂದ, ಶಿವಮೊಗ್ಗ ಹರ್ಷ ಕೊಲೆ, ಮೈಸೂರು ರೇಪ್ ಕೇಸ್ ಹಾಗೂ ಹಿಜಾಬ್ ಸೇರಿದಂತೆ ಎಲ್ಲ ಪ್ರಕರಣದಲ್ಲಿ ಅವರು ಜವಾಬ್ದಾರಿ ಮರೆತಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರಸ್ತೆ ಜಗಳದ ಹತ್ಯೆಗೆ ಮತೀಯ ಬಣ್ಣ ಕೊಡುವುದು ರಾಜ್ಯಕ್ಕೆ ಮಾಡುವ ಅಪಮಾನ. ಆಮೂಲಕ ಅಪರಾಧ ಪಿತೂರಿ, ಎರಡು ಧರ್ಮ ಮಧ್ಯೆ ಜಗಳ, ತಪ್ಪು ಮಾಹಿತಿ ನೀಡಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಐಪಿಸಿ ಸೆಕ್ಷನ್ 120ಬಿ ಅಪರಾಧ ಪಿತೂರಿ, 153ಎ ಎರಡು ಧರ್ಮ ಮಧ್ಯೆ ಜಗಳ, 182 ತಪ್ಪು ಮಾಹಿತಿ ನೀಡಿ ವಿಚಾರ ತಿರುಚಲು ಅಧಿಕಾರ ದುರ್ಬಳಕೆ, 201 ಪ್ರಕರಣದ ಸಾಕ್ಷಿ ನಾಶ, 202, ಪ್ರಕರಣಗಳ ಉಲ್ಲಂಘನೆಯಾಗಿದೆ. ಗೃಹ ಸಚಿವರು ಯಾವ ಮುಖ ಇಟ್ಟುಕೊಂಡು ಮುಂದುವರಿಯುತ್ತಾರೆ. ಈ ಸಮಯದಲ್ಲಿ ಮಾಧ್ಯಮಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರ್ ಎಸ್ಎಸ್ ನಾಯಕರನ್ನು ಒಂದು ವಿಚಾರ ಕೇಳಲು ಬಯಸುತ್ತೇನೆ, ನಿಮ್ಮ ಶಾಖೆಯಲ್ಲಿ ಕಲಿಸಿರುವುದು ಇದೇನಾ? ಜನರ ರಕ್ಷಣೆ ಮಾಡಬೇಕಾದವರು ನೀವೇ ಈ ರೀತಿ ಮಾಡಿದರೆ ನಿಮ್ಮನ್ನು ರಾಜ್ಯದ ಹಾಗೂ ದೇಶದ ಜನ ಕ್ಷಮಿಸುವುದಿಲ್ಲ.
ಸಿ.ಟಿ ರವಿ ಅವರು ಮನಸ್ಸು ಬಂದಹಾಗೆ ಮಾತನಾಡುತ್ತಾರೆ. ಅವರು ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದು ಹೇಳಲು ಸಾಧ್ಯವಿಲ್ಲ. ಈ ಸಮಾಜದಲ್ಲಿ ಹರಾಜಕತೆ ಸೃಷ್ಟಿಸಲು, ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಡಿಸಲು, ಜಾತಿ-ಧರ್ಮ ವಿಚಾರದಲ್ಲಿ ಸಮಾಜ ಒಡೆಯಲು, ರಾಜ್ಯದ ಅಭಿವೃದ್ಧಿಗೆ ಮಾರಕ ಆಗಲು ಕಾರಣರಾಗಿದ್ದರೆ ಅದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾತ್ರ. ಇನ್ನು ಭಯೋತ್ಪಾದಕ ಸಂಘಟನೆ ಸಿ.ಡಿ ವಿಚಾರವಾಗಿ, ಕೇಂದ್ರ ಹಾಗೂ ರಾಜ್ಯದ ಗುಪ್ತಚರ ಇಲಾಖೆ ಸತ್ತಿದೆಯಾ. ಸತ್ತಿದ್ದರೆ ಅದನ್ನು ಒಪ್ಪಿಕೊಂಡು, ನಮಗೆ ಯಾವುದೇ ವಿಚಾರವಾಗಿ ಮಾಹಿತಿ ಇಲ್ಲ. ಈ ದೇಶದ ರಕ್ಷಣೆ ಮಾಡಲು ನಮಗೆ ಯೋಗ್ಯತೆ, ತಾಕತ್ತು, ಸಾಮರ್ಥ್ಯ ಇಲ್ಲ ಎಂದು ಹೇಳಿ. ಒಂದು ವೇಳೆ ಇಲಾಖೆ ಜೀವಂತವಾಗಿದ್ದರೆ, ಮಾಹಿತಿ ನೀಡಲು ವಿಫಲವಾಗಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಗೃಹ ಸಚಿವರು ಈ ವಿಚಾರದಲ್ಲಿ ವಿಫಲರಾಗಿದ್ದು, ಇಷ್ಟು ಹೊತ್ತಿಗೆ ಸುಮೋಟೋ ಕೇಸ್ ದಾಖಲಿಸುವ ನಿರೀಕ್ಷೆ ಇತ್ತು. ಗೃಹಮಂತ್ರಿಗಳು ಹಾಗೂ ಆಯುಕ್ತರು ತದ್ವಿರುದ್ಧ ಹೇಳಿಕೆ ನೀಡುತ್ತಾರೆ. ಪೊಲೀಸ್ ಇಲಾಖೆ ಜೀವಂತವಾಗಿದ್ದರೆ ಸುಮೋಟೋ ಕೇಸ್ ದಾಖಲಾಗಬೇಕಿತ್ತು. ಅದು ಸಾಧ್ಯವಾಗದಿದ್ದರೆ ಕಾಂಗ್ರೆಸ್ ಪಕ್ಷ ಕೊಟ್ಟಿರುವ ದೂರಿನನ್ವಯ ಕೇಸ್ ದಾಖಲಿಸಿ, ಅವರಿಂದ ರಾಜೀನಾಮೆ ಕೊಡಿಸಿ ದಸ್ತಗಿರಿ ಮಾಡಿ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಈ ವಿಚಾರವನ್ನು ನಮ್ಮ ಪಕ್ಷ ಜನತಾ ನ್ಯಾಯಾಲಯದ ಮುಂದೆ ಇಡಲಾಗುತ್ತದೆ.
ಮಾಜಿ ಸಚಿವ ಹೆಚ್.ಎಂ. ರೇವಣ್ಣ: ಅರಗ ಜ್ಞಾನೇಂದ್ರ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ. ಶಿವಮೊಗ್ಗ ಹರ್ಷ ಕೊಲೆ ಪ್ರಕರಣ ಸಮಯದಲ್ಲಿ ಸೆಕ್ಷನ್ 144 ಜಾರಿ ಇದ್ದರೂ ಸಚಿವ ಈಶ್ವರಪ್ಪನವರು ಶವಯಾತ್ರೆ ಮಾಡಿದ್ದರು. ಗೃಹ ಸಚಿವರು ಅದೇ ಜಿಲ್ಲೆಯವರಾಗಿದ್ದರೂ ಸಮರ್ಥವಾಗಿ ನಿಭಾಯಿಸಲಿಲ್ಲ. ಕಾನೂನು ಉಲ್ಲಂಘನೆ ಮಾಡಿದ ಸಚಿವರ ವಿರುದ್ಧ ದೂರು ದಾಖಲಿಸಿದರೂ ಪ್ರಕರಣ ಹಾಕಿಲ್ಲ. ಇನ್ನು ಮೈಸೂರು ಅತ್ಯಾಚಾರ ಪ್ರಕರಣ ಸಮಯದಲ್ಲಿ ಆ ಹುಡುಗೆ ಅಷ್ಟು ಹೊತ್ತಲ್ಲಿ ಅಲ್ಲಿಗೆ ಯಾಕೆ ಹೋಗಬೇಕಿತ್ತು ಎಂದರು. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವನ್ನು ಖಂಡಿಸುವ ಬದಲು ಅವರು ಹೊರಗೆ ಹೋಗಿದ್ದೇ ತಪ್ಪು ಎಂದು ಮಾತನಾಡಿದರೆ, ರಾಜ್ಯದಲ್ಲಿ ಹೆಣ್ಣಿಗೆ ರಕ್ಷಣೆ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಇವರ ಮನಸ್ಥಿತಿ ಹೇಗಿದೆ ಎಂದು ತಿಳಿಯುತ್ತದೆ. ಇತ್ತೀಚಿನ ಘಟನೆಯಲ್ಲೂ ರಾಜ್ಯದ ಸುವ್ಯವಸ್ಥೆ ಕಾಪಾಡಬೇಕಾದವರು ಆ ಜವಾಬ್ದಾರಿಯನ್ನು ನಿಭಾಯಿಸಿಲ್ಲ. ನಮ್ಮ ಪಕ್ಷದ ನಾಯಕರು ಈ ವಿಚಾರವಾಗಿ ವಿವಿಧ ಕಡೆಗಳಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಅವರು ಬಿಜೆಪಿ ಟೋಪಿ ಹಾಕಿದ್ದಾಗ ಒಂದು ಹೇಳಿಕೆ, ತೆಗೆದಾಗ ಒಂದು ಹೇಳಿಕೆ ನೀಡುತ್ತಾರೆ. ಜತೆಗೆ ಬಿಜೆಪಿ ಎಲ್ಲೆಲ್ಲಿ ಚುನಾವಣೆ ನಡೆಯುತ್ತದೆಯೋ ಅಲ್ಲೆಲ್ಲ ಈ ರೀತಿಯ ಘರ್ಷಣೆ ಮಾಡುತ್ತಾರೆ. ಮತ ಸಮೀಕರಣ ಆಗಲು ಬಿಡುವುದಿಲ್ಲ. ರಾಜ್ಯದ ಜನತೆ ಇಂತಹ ವಿಚಾರಗಳಿಗೆ ಬೆಲೆ ನೀಡುವುದಿಲ್ಲ ಎಂದು ಭಾವಿಸಿದ್ದೇವೆ. ನಾವು ಎಲ್ಲ ಕಡೆ ದೂರು ನೀಡಿದ್ದು, ಸರಿಯಾದ ಕ್ರಮ ಕೈಗೊಳ್ಳದಿದ್ದರೆ ನಾವು ಬೀದಿಗಿಳಿದು ಸತ್ಯಾಗ್ರಹ ಮಾಡುತ್ತೇವೆ.
ಅಲ್ ಖೈದಾ ಸಂಘಟನೆ ಸಿ.ಡಿ ಬಂದರೆ ಸಿದ್ದರಾಮಯ್ಯ ಅವರಿಗೆ ನಡುಕ ಯಾಕೆ? ಅವರು ಆರ್ ಎಸ್ಎಸ್ ಸಂಘಟನೆ ದೂರುತ್ತಿರುವುದೇಕೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರಶ್ನೆ ಕೇಳಿದಾಗ ಉತ್ತರಿಸಿದ ರಾಮಲಿಂಗಾ ರೆಡ್ಡಿ ಅವರು, ‘ನಾವು ಆರ್ ಎಸ್ಎಸ್ ಮೇಲೆ ಅನುಮಾನ ಪಡಲು ಕಾರಣ ಏನೆಂದರೆ, ಪೊಲೀಸ್ ಆಯುಕ್ತರು ಏನಾಯ್ತು, ಯಾಕಾಯ್ತು ಎಂದು ಸಂಪೂರ್ಣ ವಿವರವಾಗಿ ಹೇಳಿದರೂ ಗೃಹ ಸಚಿವರು ಹಾಗೂ ಸಿ.ಟಿ ರವಿ ಅವರು ಸೇರಿ ಸುಳ್ಳು ಹೇಳಿದರು. ಅವರಿಗೆ ಸುಳ್ಳು ಹೇಳುವುದಕ್ಕೆ ತರಭೇತಿ ನೀಡಲಾಗಿದ್ದು, ಅವರಿಗೆ ಕರಗತವಾಗಿದೆ. ಹೀಗಾಗಿ ಅನುಮಾನ ವ್ಯಕ್ತವಾಗುತ್ತದೆ’ ಎಂದರು. ಇದೇ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪನವರು, ‘ಸಿದ್ದರಾಮಯ್ಯ ಅವರು ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ. ಅವರು ಮಾಜಿ ಸಿಎಂ ಆಗಿದ್ದವರು. ಹಾಲಿ ವಿರೋಧ ಪಕ್ಷದ ನಾಯಕ. ಇನ್ನು ಸಂವಿಧಾನದ ಆರ್ಟಿಕಲ್ 51ಎ ಅಡಿಯಲ್ಲಿ ಈ ದೇಶದ ಪ್ರಜೆಯ ಮೂಲಭೂತ ಕರ್ತವ್ಯವಿದ್ದು, ಈ ದೇಶದ ಜನರ ರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಈಗ ಸಿ.ಡಿಯನ್ನು ಹರಿಬಿಡಲಾಗಿದ್ದು, ಸಿದ್ದರಾಮಯ್ಯನವರು ಅವರಿಗೆ ಬಂದ ಮಾಹಿತಿ ಪ್ರಕಾರ ಅವರು ಹೇಳಿದ್ದಾರೆ. ಅದು ಸುಳ್ಳಾಗಿದ್ದರೆ, ಸತ್ಯ ಏನು? ಈ ಸಿ.ಡಿ ನಕಲಿಯೋ ಅಸಲಿಯೋ? ಅಸಲಿಯಾಗಿದ್ದಾರೆ ಆ ಸಿ.ಡಿಯನ್ನು ಯಾರು ಎಲ್ಲಿ ಯಾವಾಗ ಮಾಡಿದರು? ಎಂಬುದರ ಬಗ್ಗೆ ಜನರ ಮುಂದೆ ಮಾಹಿತಿ ಇಡುವ ಜವಾಬ್ದಾರಿ ಸರ್ಕಾರದ್ದಲ್ಲವೇ? ಎಂದು ಪ್ರಶ್ನಿಸಿದರು.
ಈ ಸಿ.ಡಿ ಬಿಟ್ಟಿರುವುದು ಆರ್ ಎಸ್ಎಸ್ ನವರೇ ಎಂಬುದಕ್ಕೆ ಯಾವುದಾದರೂ ಆಧಾರ ಇದೆಯಾ ಎಂಬ ಪ್ರಶ್ನೆಗೆ ಉಗ್ರಪ್ಪನವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯ ತೇರಿನ ಎರಡು ಚಕ್ರ ಎಂದರೆ ಅದು ಆಡಳಿತ ಹಾಗೂ ವಿರೋಧ ಪಕ್ಷ. ಇಂದು ಸಮಾಜ ಒಡೆದು ಆಳುವ ನೀತಿ ಪ್ರಯೋಗಿಸಲಾಗುತ್ತಿದೆ. ಬೇರೆ ಸಮಸ್ಯೆಗಳು ಉದ್ಭವಿಸಿದಾಗ ಸ್ಪಂದಿಸದೇ ಇರುವ ಆರ್ ಎಸ್ಎಸ್ ನವರು ಈ ವಿಚಾರವಾಗಿ ಮುನ್ನಲೆಗೆ ಬಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಈ ವಿಚಾರವಾಗಿ ಅನುಮಾನ ವ್ಯಕ್ತವಾಗುತ್ತದೆ. ಆದರೆ ಇಲ್ಲಿ ಜವಾಬ್ದಾರಿ ಇರುವುದು ಯಾರಿಗೆ? ಸರ್ಕಾರಕ್ಕೆ. ಸಿದ್ದರಾಮಯ್ಯನವರು ಹೇಳಿದ್ದು ಸರಿಯಿಲ್ಲದಿದ್ದರೆ, ಅವರು ಹೇಳಿದ್ದು ಸರಿಯಲ್ಲ, ಸತ್ಯಾಂಶ ಹೀಗಿದೆ ಎಂದು ಹೇಳಬೇಕು. ಇದರ ಜವಾಬ್ದಾರಿ ದೇಶದ ಪ್ರಧಾನಿ, ಗೃಹ ಸಚಿವರದ್ದು, ಹಾಗೂ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರದ್ದಾಗಿದೆ. ಇವರೆಲ್ಲರೂ ಏನು ಮಾಡುತ್ತಿದ್ದಾರೆ? ನಿದ್ದೆ ಮಾಡುತ್ತಿದ್ದಾರೆಯೇ? ಅವರು ಸತ್ಯಾಂಶವನ್ನು ಹೇಳದೇ, ಕೇವಲ ಕೆಸರೆರೆಚಾಟ ಮಾಡುತ್ತಾ, ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ರಾಜ್ಯದ ಜನರ ರಕ್ಷಣೆ ದುಸ್ತರವಾಗುತ್ತಿದೆ. ಇದಕ್ಕೆ ಬಿಜೆಪಿ ನೇರ ಕಾರಣ’ ಎಂದರು. ಬಿಜೆಪಿಗೆ ಆರ್ ಎಸ್ಎಸ್ ಕಂಡರೆ ಭಯ ಎಂಬ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉಗ್ರಪ್ಪನವರು, ‘ಆರ್ ಎಸ್ಎಸ್ ನವರು ಒಂದು ರಾಜಕೀಯ ಪಕ್ಷವಾಗಿ ಬೋರ್ಡ್ ಬದಲಾವಣೆ ಮಾಡಿಕೊಳ್ಲುವ ಕಾಲ ದೂರ ಇಲ್ಲ. ಇದುವರೆಗೂ ಆರ್ ಎಸ್ಎಸ್ ಪ್ರಚಾರಕರು, ಸರಸಂಚಾಲಕರು ಮುನ್ನಲೆಗೆ ಬರುತ್ತಿರಲಿಲ್ಲ. ಆದರೆ ಈಗ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಅವರೇ ಬರುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಗಳ ಮರುವಿಂಗಡಣೆ ಅವರ ಕಚೇರಿಯಲ್ಲೇ ಆಗುತ್ತಿದೆ. ಅಧಿಕಾರಿಗಳ ನೇಮಕವೂ ಅಲ್ಲೇ ಆಗುತ್ತಿದೆ. ಸರ್ಕಾರಕ್ಕೆ ಸೂಚನೆ, ಮಾರ್ಗದರ್ಶ ನೀಡುತ್ತಿರುವುದು ಅವರೇ ಆಗಿದ್ದಾರೆ. ಅವರು ನಿಧಾನವಾಗಿ ರಾಜಕೀಯ ಪಕ್ಷವಾಗಿ ಮೂಡುತ್ತಿದೆ. ಅವರು ಬೇಕಾದರೆ ರಾಜಕೀಯಕ್ಕೆ ನೇರವಾಗಿ ಬಂದು ಬಿಜೆಪಿ ಜತೆ ಸೇರಿ ರಾಜಕೀಯ ಮಾಡಲಿ. ಆದರೆ ಅವರು ಒಂದು ವಿಚಾರದಲ್ಲಿ ಹೇಳಿಕೆ ನೀಡಿ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಆರ್ ಎಸ್ ಎಸ್ ಹಾಗೂ ಬಿಜೆಪಿಗೆ ಶೋಭೆ ತರುವುದಿಲ್ಲ. ದೇಶದಲ್ಲಿ ಏನೇ ಆದರೂ ಅದಕ್ಕೆ ಬಿಜೆಪಿ ಆರ್ ಎಸ್ಎಸ್ ನೇರ ಹೊಣೆ’ ಎಂದು ಉತ್ತರಿಸಿದರು.
ಬಿಜೆಪಿಯವರು ಈ ವಿಚಾರವಾಗಿ ತನಿಖೆ ಮಾಡಿಸುತ್ತೇವೆ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉಗ್ರಪ್ಪನವರು, ‘ಬಿಜೆಪಿಯವರು ಇಂತಹ ಸೂಕ್ಷ್ ವಿಚಾರಗಳಲ್ಲಿ ತಕ್ಷಣವೇ ಮಾಹಿತಿಗಳನ್ನು ಸಂಗ್ರಹಿಸಬೇಕು. ಅದಕ್ಕಾಗಿ ಗುಪ್ತಚರ ಇಲಾಖೆ ಇದೆ. ಇನ್ನು ಘಟನೆ ನಡೆದಾಗಿನಿಂದ ಇವರು ಕುಂಭಕರಣ ನಿದ್ದೆ ಮಾಡುತ್ತಿದ್ದಾರೆ. ಅವರ ವೈಫಲ್ಯವನ್ನು ನಾವು ಪ್ರಶ್ನೆ ಮಾಡುತ್ತಿದ್ದೇವೆ. ಹಿಜಾಬ್ ವಿಚಾರದಲ್ಲಿ ಕಾಣದ ಶಕ್ತಿಯ ಕೈವಾಡವಿದೆ ಎಂದು ಹೇಳಿ ಎಷ್ಟು ದಿನಗಳಾಗಿವೆ? ಆ ಕಾಣದ ಶಕ್ತಿಗಳು ಯಾರು? ಎಂಬುದರ ಬಗ್ಗೆ ಸರ್ಕಾರ ಯಾಕೆ ಮಾತನಾಡುತ್ತಿಲ್ಲ? ಕಾಲಹರಣ ಮಾಡುತ್ತಿರುವುದೇಕೆ? ಇಂದು ತನಿಖೆ ಮಾಡುತ್ತೇವೆ ಎಂದು ಹೇಳುತ್ತಿರುವುದೇಕೆ? ಇದಕ್ಕೂ ಮೊದಲೇ ಯಾಕೆ ಮಾಡಿಲ್ಲ? ಅಲ್ ಖೈದಾ ವಿಚಾರ ಬಂದಾಗ ಪ್ರಧಾನಿಗಳು ಗೃಹ ಸಚಿವರು ಯಾಕೆ ಮಾತನಾಡುತ್ತಿಲ್ಲ? ಇದು ಅಂತಾರಾಷ್ಟ್ರೀಯ ಹಾಗೂ ದೇಶದ ರಕ್ಷಣೆ ವಿಚಾರವಲ್ಲವೇ?’ ಎಂದರು.